ಇಸ್ರೇಲೀ ಜನಾಂಗೀಯ ನರಸಂಹಾರಕ್ಕೆ ಪಾಶ್ಚಾತ್ಯ ಉದಾರವಾದದ ಬೆಂಬಲ ಹೊಸದೇನಲ್ಲ

ಪ್ರೊ. ಪ್ರಭಾತ್ ಪಟ್ನಾಯಕ್ , ಅನು : ಕೆ.ಎಂ.ನಾಗರಾಜ್
ಹಿಟ್ಲರ್ ಆಳ್ವಿಕೆಯಲ್ಲಿ ಯೆಹೂದ್ಯರ ನರಸಂಹಾರ

ಪಾಶ್ಚಾತ್ಯ ಉದಾರವಾದಿ ಚಿಂತನೆಯ ಇತಿಹಾಸದುದ್ದಕ್ಕೂ ಅದರ ಕೇಂದ್ರಸ್ಥಾನದಲ್ಲಿರುವುದು ಬಂಡವಾಳಶಾಹಿ ಒಂದು ದಕ್ಷ ವ್ಯವಸ್ಥೆ ಎಂಬ ಕಲ್ಪನೆಯೇ. ಆದ್ದರಿಂದ ಅದು ಸಾಮ್ರಾಜ್ಯಶಾಹಿ ಯೋಜನೆಗಳಲ್ಲಿ ಸದಾ ಭಾಗಿಯಾಗಿತ್ತು ಮತ್ತು ಈಗಲೂ ಭಾಗಿಯಾಗಿದೆ. ಎರಡನೇ ಮಹಾಯುದ್ಧದ ನಂತರದ ಒಂದು ಸಣ್ಣ ಅವಧಿಯಲ್ಲಿ ಮಾತ್ರವೇ ಈ ಸಹಭಾಗಿತ್ವ ಇಲ್ಲವೆಂದನಿಸುತ್ತಿತ್ತು. ಕೀನ್ಸ್ ವಾದದ ಅನುಸರಣೆಯ ಆ ಅವಧಿಯಲ್ಲಿ ಸಾಮ್ರಾಜ್ಯಶಾಹಿ ಯೋಜನೆಯೂ ಸ್ಥಗಿತವಾದಂತಿತ್ತು. ಹೀಗಿರುವಾಗ, ಈಗ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಶುದ್ಧೀಕರಣ ಪ್ರಕ್ರಿಯೆಗೆ ಪಾಶ್ಚಾತ್ಯ ಉದಾರವಾದವು ನೀಡುತ್ತಿರುವ ಬೆಂಬಲದಲ್ಲಿ ಆಶ್ಚರ್ಯವಿಲ್ಲ. ಈ ಬೆಂಬಲದಲ್ಲಿರುವ ಹೊಸತನವೆಂದರೆ, ಅದರಲ್ಲಿ ಇದುವರೆಗಿನ ಬೂಟಾಟಿಕೆಯ ಪ್ರದರ್ಶನವಿಲ್ಲ, ಈ ಬಾರಿ ಅದು ನೇರವಾಗಿದೆ, ಆಕ್ರಾಮಕವಾಗಿದೆ. ಆದರೆ ಈ ಬೆಂಬಲದ ಹಿಂದೆ, ಪಾಶ್ಚಾತ್ಯ ದೇಶಗಳವರು ಐತಿಹಾಸಿಕವಾಗಿ ಯಹೂದಿಗಳಿಗೆ ಕೊಟ್ಟ ಕಿರುಕುಳದ ಬಗ್ಗೆ ಪಾಪ ಪ್ರಜ್ಞೆ ಇದ್ದಿರಲೂ ಬಹುದು.

ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಶುದ್ಧೀಕರಣದಲ್ಲಿ ಪಾಶ್ಚ್ಯಾತ್ಯ ಉದಾರವಾದಿ ಬೂರ್ಜ್ವಾ ಸರ್ಕಾರಗಳ ಮತ್ತು ಪಾಶ್ಚ್ಯಾತ್ಯ ಮಾಧ್ಯಮಗಳ ಪಾತ್ರವನ್ನು ಇತ್ತೀಚೆಗೆ ಪ್ರಸ್ತಾಪಿಸಿದ ಸ್ನೇಹಿತರೊಬ್ಬರು ಇದು ಪಾಶ್ಚ್ಯಾತ್ಯ ಉದಾರವಾದದ ಅಂತ್ಯವನ್ನು ಸೂಚಿಸುತ್ತದೆ ಎಂದರು. ಇದಕ್ಕಿಂತ ದೊಡ್ಡ ತಪ್ಪು ಬೇರೆ ಇರಲಿಕ್ಕಿಲ್ಲ.. ವಿಶ್ವಾದ್ಯಂತ ಜರುಗಿದ ಸಾಮ್ರಾಜ್ಯಶಾಹಿಯ ಜನಾಂಗೀಯ ಶುದ್ಧೀಕರಣದ ಹಲವಾರು ಪ್ರಕರಣಗಳ ವಿರುದ್ಧ ಎಂದೂ ದನಿ ಎತ್ತದ ಪಾಶ್ಚ್ಯಾತ್ಯ ಉದಾರವಾದವು ಸಾಮ್ರಾಜ್ಯಶಾಹಿ ಯೋಜನೆಗಳಲ್ಲಿ ಸದಾ ಭಾಗಿಯಾಗಿದೆ ಮತ್ತು ಅದರ ನಿಕಟ ಮಿತ್ರನಾದ ಇಸ್ರೇಲಿ ವಲಸಿಗ ವಸಾಹತುಶಾಹಿಯು ನೆಡೆಸುತ್ತಿರುವ ಜನಾಂಗೀಯ ಶುದ್ಧೀಕರಣದಲ್ಲಿ ಪಾಶ್ಚ್ಯಾತ್ಯ ಉದಾರವಾದವು ವಹಿಸುತ್ತಿರುವ ಪಾತ್ರವು ಬಹುಮಟ್ಟಿಗೆ ಅದರ ಸ್ವಭಾವಕ್ಕನುಗುಣವಾಗಿದೆ. ನಿಜ, ಪಾಶ್ಚ್ಯಾತ್ಯ ಉದಾರವಾದದ ಈ ಬೆಂಬಲ ಹೊಸದೇನಲ್ಲ. ಆದರೆ, ಈಗ ಅದರ ನಾಚಿಕೆಗೇಡಿತನ ಹೆಚ್ಚಿದೆ ಮತ್ತು ಅದನ್ನು ಹಳಸಲು ಬೂಟಾಟಿಕೆ ಮಾತುಗಳಲ್ಲಿ ಮರೆಮಾಚುವುದು ಕಮ್ಮಿಯಾಗಿದೆ. ಆದರೂ ಯಾವುದೇ ರೀತಿಯಲ್ಲೂ ಪಾಶ್ಚಾತ್ಯ ¸ಉದಾರವಾದದ ಎಂದಿನ ನಿಲುವಿಗಿಂತ ಭಿನ್ನವಾಗಿಲ್ಲ.

ನಿಜ, ಬ್ರಿಟಿಷ್ ಸಾಮ್ರಾಜ್ಯಶಾಹಿಯು ಭಾರತವನ್ನು ದಾರಿದ್ರ‍್ಯಕ್ಕೆ ತಳ್ಳಿದ ಬಗ್ಗೆ ಅರಳು ಹುರಿದಂತೆ ಬರೆದ ಉದಾರವಾದಿ ಬರಹಗಾರ ವಿಲಿಯಂ ಡಿಗ್ಬಿಯಂಥ ಲೇಖಕರು ಅಲ್ಲೋ ಇಲ್ಲೋ ಕೆಲವರು ಇದಕ್ಕೆ ಅಪವಾದವಾಗಿದ್ದಾರೆ. ಅಂತವರ ಸಂಖ್ಯೆ ಬಹಳ ಕಡಿಮೆ. ಇದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ, ಉದಾರವಾದಿ ಚಿಂತನಾ ವಿಧಾನವು ಸಾಮ್ರಾಜ್ಯಶಾಹಿಯ ಸಮರ್ಥನೆಗೆ ನೆವಗಳನ್ನು ಒದಗಿಸುತ್ತದೆ. ಈ ಚಿಂತನೆಯ ಇತಿಹಾಸದುದ್ದಕ್ಕೂ ಅದರ ಕೇಂದ್ರಸ್ಥಾನದಲ್ಲಿರುವುದು ಬಂಡವಾಳಶಾಹಿ ವ್ಯವಸ್ಥೆಯೇ. ಕೀನ್ಸ್ವಾದ ಅನುಸರಣೆಯಲ್ಲಿದ್ದ ಒಂದು ಸಣ್ಣ ಕಾಲಾವಧಿಯನ್ನು ಹೊರತುಪಡಿಸಿ (ಈ ಬಗ್ಗೆ ನಂತರ ಚರ್ಚಿಸೋಣ), ಬಂಡವಾಳಶಾಹಿಯು ಒಂದು ಸ್ವಯಂಪೂರ್ಣ, ಸೌಮ್ಯ ಮತ್ತು ದಕ್ಷ ವ್ಯವಸ್ಥೆ ಮತ್ತು ಅದು ಸಾಮ್ರಾಜ್ಯಶಾಹಿಯನ್ನು ಅವಲಂಬಿಸಿಲ್ಲ ಎಂಬ ಗ್ರಹಿಕೆ. ಸಾಮ್ರಾಜ್ಯಶಾಹಿಯು ಒಂದು ವಾಸ್ತವ ಎಂದಾದರೆ, ಕೆಲವು ಆಕಸ್ಮಿಕ ಬೆಳವಣಿಗೆಗಳು ಕಾರಣವಾಗಿರುತ್ತವೆ ಅಥವಾ ವಸಾಹತುವಾಸಿಗಳನ್ನು ನಾಗರೀಕರನ್ನಾಗಿಸುವ ಒಂದು ನಿರ್ದಿಷ್ಟ ಗುರಿ ಇರುತ್ತದೆ. ಸಾಮ್ರಾಜ್ಯಶಾಹಿಯ ಆರಂಭವು ಒಂದು ವೇಳೆ ಕೇವಲ ಒಂದು ಆಕಸ್ಮಿಕವೇ ಆಗಿದ್ದರೂ, ನಾಗರೀಕರನ್ನಾಗಿಸುವ ಕೈಂಕರ್ಯವನ್ನು ಅದು ಕೈಗೆತ್ತಿಕೊಳ್ಳುತ್ತದೆ.

ಆದ್ದರಿಂದ ಜನಾಂಗೀಯ ಶುದ್ಧೀಕರಣದಂತಹ ಸಾಮ್ರಾಜ್ಯಶಾಹೀ ಹೀನ ಕೃತ್ಯಗಳು ಕೆಲವು ನಿರ್ದಿಷ್ಟ ವ್ಯಕ್ತಿಗಳು ಎಸಗಿದ ಅತಿರೇಕಗಳಾಗಿರುತ್ತವೆ ಅಥವಾ, ನಾಗರೀಕರನ್ನಾಗಿಸುವ ತನ್ನ ಪ್ರಧಾನ ಧ್ಯೇಯವನ್ನು ದಿನ ನಿತ್ಯದ ಕರ್ತವ್ಯ ಭಾರದಿಂದಾಗಿ ಮರೆತಾಗ ವ್ಯವಸ್ಥೆಯಲ್ಲಿ ಉಂಟಾಗುವ ಕೆಲವು ತಾತ್ಕಾಲಿಕ ಲೋಪಗಳಾಗಿರುತ್ತವೆ. ವ್ಯಕ್ತಿಗಳು ಎಸಗಿದ ಅತಿರೇಕದ ಬಗ್ಗೆ ಒಂದು ಉದಾಹರಣೆಯನ್ನು ಹೇಳುವುದಾದರೆ, ವಾರನ್ ಹೇಸ್ಟಿಂಗ್ಸ್ ಬಂಗಾಳದಲ್ಲಿ ಎಸಗಿದ ದೌರ್ಜನ್ಯದ ಆರೋಪಗಳ ಮೇಲೆ ಆತ ಎಡ್ಮಂಡ್ ಬರ್ಕ್ ವಿಚಾರಣೆಗೆ ಗುರಿಯಾಗಿದ್ದ. ಮೇಲಾಗಿ, ಬಂಡವಾಳಶಾಹಿ ಸ್ವಭಾವವೇ ಸೌಮ್ಯವಾಗಿರುವುದರಿಂದ, ಬಂಡವಾಳಶಾಹಿ ಸಾಮ್ರಾಜ್ಯಶಾಹಿಯೂ ಸ್ವಭಾವತಃ ಸೌಮ್ಯವಾಗಿರದೆ ಇರಲು ಸಾಧ್ಯವಿಲ್ಲ ಎಂಬುದೇ ಉದಾರವಾದಿಗಳ ಗ್ರಹಿಕೆ.

ಇಂಥಹ ಅಭಿಪ್ರಾಯವನ್ನು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಆಡಮ್ ಸ್ಮಿತ್ ಕೂಡ ಹೊಂದಿದ್ದರು. ಪ್ಲಾಸಿ ಕದನದ ನಂತರ ಬಂಗಾಳದಲ್ಲಿ ಜರುಗಿದ ಕೆಲವು ಅತಿರೇಕದ ವಿದ್ಯಮಾನಗಳನ್ನು ಉಗ್ರವಾಗಿ ಖಂಡಿಸಿದರು. ಮತ್ತು ಈ ವಿದ್ಯಮಾನಗಳನ್ನು ಅಂದಿನ ಅಮೆರಿಕದಲ್ಲಿ ಸಂಭವಿಸುತ್ತಿದ್ದ ಅದೇ ರೀತಿಯ ವಿದ್ಯಮಾನಗಳೊಂದಿಗೆ ಹೋಲಿಸಿ, ಅವುಗಳ ನಡುವೆ ಒಂದು ವ್ಯತ್ಯಾಸವನ್ನು ಆಡಮ್ ಸ್ಮಿತ್ ಗುರುತಿಸಿದರು. ಅದೇನೆಂದರೆ, ಅಮೆರಿಕವನ್ನು ಬ್ರಿಟಿಷ್ ದೊರೆ ಆಳುತ್ತಿದ್ದರು, ಬಂಗಾಳವನ್ನು ಈಸ್ಟ್ ಇಂಡಿಯಾ ಕಂಪನಿ ಎಂಬ ಒಂದು ವ್ಯಾಪಾರಿ ಸಂಸ್ಥೆಯು ಆಳುತ್ತಿತ್ತು ಎಂಬುದು. ಆದರೆ, ಅವರು ಅಮೆರಿಂಡಿಯನ್ನರ ಸ್ಥಿತಿ-ಗತಿಗಳನ್ನು ಗಮನಿಸಲಿಲ್ಲ. ಆದ್ದರಿಂದ, ವಲಸಿಗ ವಸಾಹತುಶಾಹಿ ಹೇರಿಕೆಯ ಪ್ರಕರಣವನ್ನು ವಸಾಹತುಶಾಹಿಯ ಬಲಿಪಶುಗಳಾದ ಜನರ ಮತ್ತೊಂದು ಪ್ರಕರಣದೊಂದಿಗಿನ ವ್ಯತ್ಯಾಸವನ್ನು ಅವರು ಗುರುತಿಸಿದ ವಿಧಾನವು ನ್ಯಾಯಯುತವಾದುದಲ್ಲ. ಯುರೋಪಿಯನ್ ವಸಾಹತುಗಾರರ ಪಾಡನ್ನು ಶೋಷಿತ ಸ್ಥಳೀಯ ಜನರ ಪಾಡಿನೊಂದಿಗೆ ಅವರು ಹೋಲಿಕೆ ಮಾಡಿದರು. ಈ ಹೋಲಿಕೆಯಿಂದ ಕಂಡು ಬಂದ ವ್ಯತ್ಯಾಸವು ಬ್ರಿಟಿಷ್ ರಾಜನ ಆಳ್ವಿಕೆಯಿಂದಾಗಿತ್ತೇ ಅಥವಾ ವ್ಯಾಪಾರೀ ಕಂಪೆನಿಯ ಕಂಪನಿ ಆಳ್ವಿಕೆಯಿಂದಾಗಿತ್ತೇ ಎಂಬುದು ಅವರಿಗೆ ಮುಖ್ಯವಾಗಿತ್ತು. ಒಂದು ವೇಳೆ ಬ್ರಿಟಿಷ್ ದೊರೆಯೇ ಬಂಗಾಳವನ್ನು ಆಳಿದ್ದರೆ ಸ್ಥಳೀಯ ಜನರು ಅದರಿಂದ ಪ್ರಯೋಜನ ಪಡೆಯುತ್ತಿದ್ದರು ಎಂಬುದು ಅವರ ಊಹೆಯಾಗಿತ್ತು. ಅವರ ಈ ಊಹೆಯು ತಪ್ಪಾಗಿತ್ತು ಎಂಬುದನ್ನು 1857ರ ನಂತರ ಭಾರತದ ಆಳ್ವಿಕೆಯನ್ನು ವಹಿಸಿಕೊಂಡ ಬ್ರಿಟಿಷ್ ದೊರೆಯ ದಬ್ಬಾಳಿಕೆಯ ಆಡಳಿತವೇ ಸಾಬೀತುಪಡಿಸಿತು.

ಇದನ್ನೂ ಓದಿಭಾರತದಲ್ಲಿ ವ್ಯಾಪಕ ಬಡತನ : ಬಿಹಾರದ ಜಾತಿಗಣತಿ ಕಣ್ಣು ತೆರೆಸಬೇಕು

ಸಾಮ್ರಾಜ್ಯಶಾಹೀ ಯೋಜನೆಯಲ್ಲಿ ಸದಾ ಭಾಗಿ

ವಸಾಹತುವಾಸಿಗಳನ್ನು ನಾಗರಿಕರನ್ನಾಗಿಸುವುದು ವಸಾಹತುಶಾಹಿಯ ಉದ್ದೇಶವಾಗಿತ್ತು ಎಂಬ ಅಭಿಪ್ರಾಯವನ್ನು ಜೇಮ್ಸ್ ಮಿಲ್ ಅವರು ತಮ್ಮ ‘ದಿ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ’ದಲ್ಲಿ ಚಿತ್ರಿಸಿದ್ದಾರೆ. ಉದಾರವಾದಿ ಚಿಂತನೆಯು ಸಾಮ್ರಾಜ್ಯಶಾಹಿಯನ್ನು ಶೋಷಕನೆಂದು ಗುರುತಿಸಲಿಲ್ಲ. ಸಾಮ್ರಾಜ್ಯಶಾಹಿಯು ಮುಖ್ಯವಾಗಿ ಯುರೋಪಿಯನ್ ಅಲ್ಲದ ಜನರಿಗೆ “ಆಧುನಿಕತೆ” ಮತ್ತು ನಾಗರಿಕತೆಯನ್ನು ಪರಿಚಯಿಸುತ್ತದೆ ಎಂಬುದು ಅದರ ಚಿಂತನೆಯಾಗಿತ್ತು. ವಸಾಹತುಶಾಹಿ ನೀತಿಯಿಂದಾಗಿ ಲಕ್ಷಾಂತರ ಜನರು ಕ್ಷಾಮಗಳಲ್ಲಿ ಸತ್ತರು. 1943ರ ಬಂಗಾಳದ ಕ್ಷಾಮದ ಸಂದರ್ಭದಲ್ಲಿ ಹಸಿವಿನಿಂದ ಬಳಲುತ್ತಿದ್ದವರಿಗೆ ಒಂದು ಗುಟುಕು ಗಂಜಿಯನ್ನೂ ಒದಗಿಸದ ಕಾರಣದಿಂದಾಗಿ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾದರು ಎಂಬ ಅಂಶವನ್ನು ಉದಾರವಾದಿ ಚಿಂತನೆಯು ನಿರ್ಲಕ್ಷಿಸಿತು.

ಎರಡನೇ ಮಹಾಯುದ್ಧದ ಪರಿಸ್ಥಿತಿಯಲ್ಲಿ, ಪೂರ್ವ ಭಾಗದ ರಣಾಂಗಣದಲ್ಲಿ ತನ್ನ ಪರವಾಗಿ ಹೋರಾಡಲು, ವಸಾಹತುಶಾಹಿ ಸರ್ಕಾರವು ಭಾರತದಲ್ಲಿ ಯಾರನ್ನೂ ಕೇಳದೆ ಭಾರತವನ್ನು ಯುದ್ಧದಲ್ಲಿ ಭಾಗವಹಿಸುವಂತೆ ಮಾಡಿತು. ಬ್ರಿಟಿಷ್ ಸರ್ಕಾರವು ಭಾರತದ ಜನರಿಗೆ ಶಾಸನಬದ್ಧ ಪಡಿತರವೂ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ನಿರ್ವಹಿಸಲಿಲ್ಲ ಮತ್ತು ಅದೂ ಸಾಲದೆಂಬAತೆ ಒಂದು ಬೃಹತ್ ವಿತ್ತೀಯ ಕೊರತೆಯನ್ನು ಭಾರತದ ಮೇಲೆ ಹೇರಿತು. ಪರಿಣಾಮವಾಗಿ, ಭಾರತದಲ್ಲಿ ಹಣದುಬ್ಬರ ಸ್ಪೋಟಗೊಂಡಿತು. ಬಹುಪಾಲು ದುಡಿಯುವ ಜನರ ಆದಾಯವು ನಿಗದಿತವಾಗಿದ್ದ ಪರಿಸ್ಥಿತಿಯಲ್ಲಿ, ಆಹಾರ ಧಾನ್ಯಗಳೂ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದವು. ಪರಿಣಾಮವಾಗಿ, ತುತ್ತು ಅನ್ನಕ್ಕೂ ತತ್ವಾರವಾಯಿತು. ಆಗ ಬಂಗಾಳದಲ್ಲಿ ತಲೆದೋರಿದ ಒಂದು ಭೀಕರ ಕ್ಷಾಮದಲ್ಲಿ ಮೂವತ್ತು ಲಕ್ಷ ಮಂದಿ ಸಾವಿಗೀಡಾದರು. ಇವರೂ ಸಹ, ಲಂಡನ್ ಮೇಲಿನ ಬಾಂಬ್ ದಾಳಿಯಲ್ಲಿ ಸತ್ತವರನ್ನು ಕರೆಯುವ ಹಾಗೆ, ಯುದ್ಧದಲ್ಲಿ ಮಡಿದವರೇ. ಹಾಗೆ ನೋಡಿದರೆ, ಬಂಗಾಳದ ಕ್ಷಾಮದಲ್ಲಿ ಜೀವ ತೆತ್ತವರ ಸಂಖ್ಯೆಯು ಇಡೀ ಎರಡನೇ ಮಹಾಯುದ್ಧದಲ್ಲಿ ಮಡಿದ ಒಟ್ಟು ಬ್ರಿಟಿಷರ ಸಂಖ್ಯೆಗಿAತ ಆರು ಪಟ್ಟು ಹೆಚ್ಚಿಗೆ ಇದೆ. ಆದರೆ, ಅವರ ಸಾವುಗಳನ್ನು ಯುದ್ಧದಲ್ಲಿ ಮಡಿದವರೆಂದು ಉಲ್ಲೇಖ ಮಾಡಲೇ ಇಲ್ಲ. ಮಾತ್ರವಲ್ಲ, ಬಂಗಾಳದ ಕ್ಷಾಮವು ಆ ಸಮಯದಲ್ಲಿ ಬ್ರಿಟನ್ನಲ್ಲಿ ಹೆಚ್ಚು ಗಮನ ಸೆಳೆಯಲಿಲ್ಲ ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಯಿತು ಎಂದು ನಂಬಲು ಕಾರಣಗಳಿವೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಉದಾರವಾದವು ಸಾಮ್ರಾಜ್ಯಶಾಹಿ ಯೋಜನೆಯಲ್ಲಿ ಸದಾ ಭಾಗಿಯಾಗಿದೆ: ಸಾಮ್ರಾಜ್ಯಶಾಹಿ ಕಾರ್ಯಾಚರಣೆಯನ್ನು ವಸಾಹತುವಾಸಿಗಳ “ನಾಗರೀಕರಣ” ಎಂಬಂತೆ ವ್ಯಾಖ್ಯಾನಿಸಿದ ಉದಾರವಾದವು ಸಾಮ್ರಾಜ್ಯವಾದವನ್ನು ಸಮರ್ಥಿಸಿಲ್ಲ ಎಂದು ಹೇಳುವುದು ಮೂರ್ಖತನವಾಗುತ್ತದೆ. ಯಹೂದಿಗಳು ಸಹಸ್ರಮಾನಗಳಿಂದ ಕಿರುಕುಳಕ್ಕೊಳಗಾಗಿದ್ದಾರೆ ಮತ್ತು ಹತ್ಯಾಕಾಂಡದ ಬಲಿಪಶುಗಳಾಗಿದ್ದಾರೆ ಎಂಬ ನೆಲೆಯಲ್ಲಿ, ಪ್ಯಾಲೆಸ್ತೀನಿಯರನ್ನು ತುಳಿದು ಇಸ್ರೇಲ್ ಎಂಬ ಯಹೂದಿ ರಾಷ್ಟ್ರದ ನಿರ್ಮಾಣವು ಸಾಮ್ರಾಜ್ಯಶಾಹಿ ಯೋಜನೆಯೇ. ಅದನ್ನು ಉದಾರವಾದಿಗಳು ಬೆಂಬಲಿಸುತ್ತಾರೆ. ಆದರೆ, ಈ ಯೆಹೂದಿ ಪ್ರಭುತ್ವವು ವಸಾಹತುಶಾಹಿಯ ಎಲ್ಲ ಗುಣಲಕ್ಷಣಗಳನ್ನೂ ತಾನೂ ಹೊಂದಿದ್ದೇನೆ ಎಂದು ತೋರಿಸಿಕೊಂಡರೂ, ಪಾಶ್ಚ್ಯಾತ್ಯ ಉದಾರವಾದೀ ಅಭಿಪ್ರಾಯವು ಇಸ್ರೇಲಿನ ಪರವಾಗಿಯೇ ಇದೆ. ಎಲ್ಲೋ ಒಂದು ಅಪವಾದವನ್ನು ಕಾಣಬಹುದು. ಉದಾಹರಣೆಗೆ, 1967ರ ಆರಬ್-ಇಸ್ರೇಲಿ ಯುದ್ಧದ ಹೊಣೆಯನ್ನು ಫ್ರಾನ್ಸ್ನ ಅಧ್ಯಕ್ಷ ಡಿ ಗಾಲ್, ಇಸ್ರೇಲಿನ ಮೇಲೆ ಹೊರಿಸಿದ ಆಪಾದನೆಯನ್ನು ಬೇರೆ ಯಾವುದೇ ಪಾಶ್ಚ್ಯಾತ್ಯ ದೇಶವು ಬೆಂಬಲಿಸಲಿಲ್ಲ. ಈ ದೇಶಗಳ ಉದಾರವಾದಿ ಅಭಿಪ್ರಾಯವು ಸಾಮಾನ್ಯವಾಗಿ ಸರ್ಕಾರಗಳೊಂದಿಗೇ ಇತ್ತು.

ಎರಡನೇ ಮಹಾಯುದ್ಧಾನಂತರದ ಸಣ್ಣ ಅವಧಿಯಲ್ಲಿ ಮಾತ್ರ…

ಎರಡನೆಯ ಮಹಾ ಯುದ್ಧದ ನಂತರ, ಮೆಟ್ರೋಪಾಲಿಟನ್ ಬಂಡವಾಳಶಾಹಿಯಲ್ಲಿ ಹಲವಾರು ಬದಲಾವಣೆಗಳು ಸಂಭವಿಸಿದವು. ಮಹಾ ಯುದ್ಧದಿಂದಾಗಿ ಬಂಡವಾಳಶಾಹಿಯು ಹೈರಾಣಾಗಿತ್ತು. ಆದ್ದರಿಂದ, ಜನರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಒತ್ತಾಯಕ್ಕೆ ಅದು ಒಳಗಾಯಿತು. ಈ ರಿಯಾಯ್ತಿಗಳಲ್ಲಿ ಮೊದಲನೆಯದು, ವಸಾಹತುಗಳ ರಾಜಕೀಯ ವಿಮೋಚನೆ. ಎರಡನೆಯದು, ಸಾರ್ವತ್ರಿಕ ವಯಸ್ಕ ಮತದಾನದ ಜಾರಿ. ಮೂರನೆಯದು, ಹೆಚ್ಚಿನ ಉದ್ಯೋಗಾವಕಾಶಗಳ ಸೃಷ್ಟಿಯನ್ನು ಮತ್ತು ಆರ್ಥಿಕ ಚಟುವಟಿಕೆಗಳು ಹುರುಪುಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಬೇಡಿಕೆ ನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ. ಈ ಹಸ್ತಕ್ಷೇಪವು, ಜಾನ್ ಮೇನಾರ್ಡ್ ಕೀನ್ಸ್ ಅವರು ಪ್ರತಿಪಾದಿಸಿದ ಆರ್ಥಿಕ ಸಿದ್ಧಾಂತವನ್ನು ಆಧರಿಸಿತ್ತು. ಕೀನ್ಸ್ ಅವರು ಸ್ವತಃ ಒಬ್ಬ ಉದಾರವಾದಿಯಾಗಿದ್ದರೂ ಸಹ, ಸಾಮಾನ್ಯವಾಗಿ ಬಂಡವಾಳಶಾಹಿಯು ಬೃಹತ್ ನಿರುದ್ಯೋಗದಿಂದ ಕೂಡಿದೆ, ಮತ್ತು, ಅದು ಉದಾರವಾದಿಗಳು ಹೇಳುವ ರೀತಿಯ ಒಂದು ಸ್ವಯಂಪೂರ್ಣ, ಸೌಮ್ಯ ಮತ್ತು ದಕ್ಷ ವ್ಯವಸ್ಥೆಯಲ್ಲ ಎಂಬುದನ್ನು ತೋರಿಸಿಕೊಟ್ಟರು.

ಬಂಡವಾಳಶಾಹಿ ವ್ಯವಸ್ಥೆಯಲ್ಲಾದ ಈ ಬದಲಾವಣೆಗಳನ್ನು, ಉದಾರವಾದಿಗಳು ಮತ್ತು ಸೋಶಿಯಲ್ ಡೆಮೊಕ್ರಾಟರ ನಡುವಿನ ಮೈತ್ರಿ ರೂಪದ ಒಂದು ರಾಜಕೀಯ ಏರ್ಪಾಟು ಆಗುಮಾಡಿತು. ಈ ಬದಲಾವಣೆಗಳ ಹಿಂದಿನ ಪ್ರೇರಣೆಯೆಂದರೆ, ವಸಾಹತುಗಳ ಜನತೆಯ ಹೋರಾಟ ಮತ್ತು ದೇಶ ದೇಶಗಳ ಕಾರ್ಮಿಕ ವರ್ಗದ ಹೋರಾಟಗಳು ಮತ್ತು ಅವುಗಳ ಜೊತೆಯಲ್ಲಿ, ಸೋವಿಯತ್ ಒಕ್ಕೂಟದ ಸಮಾಜವಾದಿ ವ್ಯವಸ್ಥೆಯು ಬಂಡವಾಳಶಾಹಿ ವ್ಯವಸ್ಥೆಗೆ ಒಡ್ಡಿದ ಸವಾಲು. ಸಮಾಜವಾದಿ ಸವಾಲಿನ ಕಾರಣದಿಂದಾಗಿ, ಯುರೋಪಿನ ದೇಶಗಳ ಅರ್ಥವ್ಯವಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪವು ಪ್ರಭುತ್ವದ ಕಲ್ಯಾಣ ಕ್ರಮಗಳ ರೂಪವನ್ನು ತೆಗೆದುಕೊಂಡಿತು.

ಉದಾರವಾದವು ಈಗ ಏನಾದರೂ ಒಂದು ಆರೋಗ್ಯಕರ ಖ್ಯಾತಿಯನ್ನು ಹೊಂದಿದ್ದರೆ, ಅದು ಬಂಡವಾಳಶಾಹಿ ವ್ಯವಸ್ಥೆಯಲ್ಲಾದ ಈ ಬದಲಾವಣೆಗಳಿಂದಾಗಿ ಸಾಧ್ಯವಾಯಿತು. ಸಾಮ್ರಾಜ್ಯಶಾಹಿ ಯೋಜನೆಯೇ ಔಪಚಾರಿಕವಾಗಿ ಸ್ಥಗಿತಗೊಳ್ಳುತ್ತಿದ್ದಾಗ (ಅಂದರೆ, ವಸಾಹತುಗಳು ವಿಮೋಚನೆಗೊಳ್ಳುತ್ತಿದ್ದಾಗ), ಸಾಮ್ರಾಜ್ಯಶಾಹಿ ಯೋಜನೆಯಲ್ಲಿ ಉದಾರವಾದ ಸಹಭಾಗಿತ್ವವು ಗತಕಾಲದ ವಿಷಯವಾಗಿ ತೋರಿತ್ತು.

ಆದರೆ, ಬಂಡವಾಳದ ಕೇಂದ್ರೀಕರಣದೊಂದಿಗೆ ಹೊರಹೊಮ್ಮಿದ ಅಂತರರಾಷ್ಟ್ರೀಯ ಹಣಕಾಸು ಬಂಡವಾಳವು, ಯುದ್ಧಾನಂತರದಲ್ಲಿ ಬಂಡವಾಳಶಾಹಿಯಲ್ಲಾದ ಅನೇಕ ಬದಲಾವಣೆಗಳನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿತು. ಅದೇ ಸಮಯದಲ್ಲಿ, ಈ ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯದಿಂದಾಗಿ ವಿಶ್ವಾದ್ಯಂತ ಹೇರಲ್ಪಟ್ಟ ನವ-ಉದಾರವಾದಿ ಆಳ್ವಿಕೆಗಳು, ವಸಾಹತು ವಿಮೋಚನೆಯಿಂದಾಗಿ ತಾತ್ಕಾಲಿಕವಾಗಿ ಅಡ್ಡಿಯಾಗಿದ್ದ, ಮುಂದುವರೆದ ಬಂಡವಾಳಶಾಹಿ ದೇಶಗಳು ಮತ್ತು ಮೂರನೇ ಜಗತ್ತಿನ ದೇಶಗಳ ನಡುವಿನ ಸಾಮ್ರಾಜ್ಯಶಾಹಿ ಏರ್ಪಾಟನ್ನು ಮತ್ತೊಮ್ಮೆ ಪುನರುಜ್ಜೀವನಗೊಳಿಸಿದವು.

ಮತ್ತೆ ಹಳೆಯ ಸಹಭಾಗಿತ್ವ

ಈ ಬದಲಾವಣೆಯೊಂದಿಗೆ ಸೋಷಿಯಲ್ ಡೆಮಾಕ್ರಸಿಯ ಸ್ವರೂಪದಲ್ಲಿ ಮತ್ತು ಉದಾರವಾದದ ಸ್ವರೂಪದಲ್ಲಿಯೂ ಬದಲಾವಣೆಗಳಾದವು. ಸೋಷಿಯಲ್ ಡೆಮಾಕ್ರಸಿಯನ್ನು ಬ್ಲೇರಿಸಂ ಕಬ್ಜಾ ಮಾಡಿಕೊಂಡಿತು. (ಬ್ಲೇರಿಸಂ ಅಂದರೆ, ಇರಾಕ್ ವಿರುದ್ಧದ ಸಾಮ್ರಾಜ್ಯಶಾಹಿ ಯುದ್ಧಕ್ಕೆ ಅತ್ಯಂತ ಹೆಚ್ಚು ಕಾರಣೀಭೂತರಾದ ಬ್ರಿಟನ್ನಿನ ಮಾಜಿ ಪ್ರಧಾನಿ ಮತ್ತು ಲೇಬರ್ ಪಕ್ಷದ ಮಾಜಿ ನಾಯಕ ಟೋನಿ ಬ್ಲೇರ್ ಪ್ರತಿಪಾದಿಸಿದ ಸಿದ್ಧಾಂತ). ಬ್ಲೇರ್ ಅವರಿಗೂ ತನಗೂ ಆತ್ಮದ ನಂಟು ಎಂದೊಮ್ಮೆ ಬ್ರಿಟನ್ನಿನ ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಹೊಗಳಿದ್ದರು. ಈ ಬದಲಾವಣೆಗಳೊಂದಿಗೆ ಉದಾರವಾದವು ಹೊಸ ಅವತಾರ ತಳೆದ ಸಾಮ್ರಾಜ್ಯಶಾಹಿಯೊಂದಿಗೆ ತನ್ನ ಹಳೆಯ ಸಹಭಾಗಿತ್ವಕ್ಕೆ ಮರಳಿತು. ಮತ್ತು, ಬಂಡವಾಳಶಾಹಿ ಸೌಮ್ಯವಾಗಿದೆ ಹಾಗೂ ಸ್ವಯಂಪೂರ್ಣವಾಗಿದೆ ಎಂಬ ತನ್ನ ಸಮರ್ಥನೆಗೂ ಮರಳಿತು.

ಸಂಕ್ಷಿಪ್ತವಾಗಿ ಹೇಳುವುದಾದರೆ, ಮಹಾಯುದ್ಧಾನಂತರದ ಅವಧಿಯಲ್ಲಿ, ಸೋಷಿಯಲ್ ಡೆಮಾಕ್ರಸಿಯ ಹೆಚ್ಚು ತೀವ್ರಗಾಮಿ ರೂಪದೊಂದಿಗೆ ಮೈತ್ರಿ ಮಾಡಿಕೊಂಡ ಪಾಶ್ಚ್ಯಾತ್ಯ ಉದಾರವಾದವು, ಆ ಸಣ್ಣ ಅವಧಿಯಲ್ಲಿ ಒಂದು ಭಿನ್ನ ಸ್ವರೂಪವನ್ನು ಪಡೆದುಕೊಂಡಿತ್ತು. ಆದರೆ, ಬಹಳ ಬೇಗ ಅದು ಸಾಮ್ರಾಜ್ಯಶಾಹಿಯ ಹೊಸ ಯೋಜನೆಯಲ್ಲಿ ಮತ್ತೊಮ್ಮೆ ಕೈಜೋಡಿಸಿತು, ಅದರ ಆರ್ಥಿಕ ರೂಪವಾದ ನವ-ಉದಾರವಾದದಲ್ಲಿ ಮಾತ್ರವಲ್ಲದೆ ಅದರ ಆಕ್ರಮಣಕಾರೀ “ನವ-ಸಂಪ್ರದಾಯಶರಣತೆ”ಯ ರಾಜಕೀಯ ರೂಪದಲ್ಲಿಯೂ.

ಯುದ್ಧೋತ್ತರ-ತಕ್ಷಣದ ಅವಧಿಗೆ ಹೋಲಿಸಿದರೆ, ಉದಾರವಾದ ಮತ್ತು ಸೋಷಿಯಲ್ ಡೆಮಾಕ್ರಸಿ ಇವೆರಡೂ ತಮ್ಮ ಅವತಾರಗಳನ್ನು ಬದಲಿಸಿಕೊಂಡಿವೆ. ತಮ್ಮ ನಡುವೆ ಹೊಸದೊಂದು ಮೈತ್ರಿ ಮಾಡಿಕೊಂಡಿವೆ ಮತ್ತು ಬಲಪಂಥದ ಹಿಂದೆ ನಿಂತಿವೆ. ಸಾಮಾನ್ಯ ಜನರಿಂದ ದೂರವಾಗಿವೆ ಮತ್ತು ಫ್ಯಾಸಿಸಂ ಒಂದು ಉತ್ತುಂಗವನ್ನು ತಲುಪುವ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಫ್ಯಾಸಿಸ್ಟ್ ಪಕ್ಷಗಳು, ಜನ ಬೆಂಬಲ ಗಳಿಸುವ ಸಲುವಾಗಿ ಉಕ್ರೇನ್ ಯುದ್ಧವನ್ನು ಮತ್ತು ರಷ್ಯಾದ ವಿರುದ್ಧದ ನಿರ್ಬಂಧಗಳನ್ನು ಹೇರಿದ ಸಾಮ್ರಾಜ್ಯಶಾಹಿಯ ಆಕ್ರಮಣಕಾರಿ ನಡೆಗಳನ್ನು ವಿರೋಧಿಸುತ್ತವೆ ಮತ್ತು ಅದೇ ನೆಲೆಯಲ್ಲಿ ತಮ್ಮ ಸರ್ಕಾರಗಳಿಗೆ ವಿರೋಧವನ್ನೂ ಘೋಷಿಸುತ್ತವೆ. ಆದರೆ, ಅಧಿಕಾರಕ್ಕೆ ಬಂದ ಕೂಡಲೇ, ಅದೇ ಆಕ್ರಮಣಕಾರಿ ನಿಲುವನ್ನು ಈ ಫ್ಯಾಸಿಸ್ಟ್ ಪಕ್ಷಗಳೂ ತಳೆಯುತ್ತವೆ. ಇಟಲಿಯ ಮೆಲೋನಿ ಇದಕ್ಕೊಂದು ಉತ್ತಮ ಉದಾಹರಣೆಯಾಗುತ್ತಾರೆ.

ಪಾಶ್ಚ್ಯಾತ್ಯ ಉದಾರವಾದವು ಸಾಮ್ರಾಜ್ಯಶಾಹಿ ಯೋಜನೆಯಲ್ಲಿ ಸದಾ ಭಾಗಿಯಾಗಿತ್ತು ಮತ್ತು ಈಗಲೂ ಭಾಗಿಯಾಗಿದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ, ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ಶುದ್ಧೀಕರಣ ಪ್ರಕ್ರಿಯೆಗೆ ಉದಾರವಾದವು ನೀಡುತ್ತಿರುವ ಬೆಂಬಲದಲ್ಲಿ ಆಶ್ಚರ್ಯವಿಲ್ಲ. ಈ ಬೆಂಬಲದಲ್ಲಿರುವ ಹೊಸತನವೆಂದರೆ, ಅದರಲ್ಲಿ ಬೂಟಾಟಿಕೆಯಿಲ್ಲ ಮತ್ತು ಆಕ್ರಮಣಕಾರೀ ನೇರ ನಡೆಯಿದೆ. ಆದರೆ ಈ ಬೆಂಬಲದ ಹಿಂದೆ ಯಹೂದಿಗಳಿಗೆ ಐತಿಹಾಸಿಕವಾಗಿ ಕೊಟ್ಟ ಉದಾರವಾದಿ ಕಿರುಕುಳದ ಪಾಪ ಪ್ರಜ್ಞೆ ಇದ್ದಿರಬಹುದು.

ಪ್ಯಾಲೆಸ್ತೀನಿಯರ ಅನುಭವವೇ ಬೇರೆ, ಪಾಶ್ಚಾತ್ಯ ಉದಾರವಾದಿಗಳಿಗೆ ಕಂಡಿರುವುದೇ ಬೇರೆ

   ಕೃಪೆ: ಪ್ರಖ್ಯಾತ ಬ್ರೆಜಿಲಿಯನ್ ವ್ಯಂಗ್ಯಚಿತ್ರಕಾರ ಕಾರ್ಲೊಸ್ ಲತುಫ್.

 

Donate Janashakthi Media

Leave a Reply

Your email address will not be published. Required fields are marked *