ಬೆಂಗಳೂರು: ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಬದಲಿಗೆ ನೇರ ನಗದು ವರ್ಗಾವಣೆ ಮಾಡಲು ಹೊರಟಿರುವ ಸರಕಾರದ ಕ್ರಮವನ್ನು ವಿರೋಧಿಸಿ ಹಾಗೂ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳು ಈಡೇರಿಸಲು ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಇಂದು ರಾಜ್ಯವ್ಯಾಪಿ ಧರಣಿ ನಡೆಸಿದೆ.
ಅಂಗನವಾಡಿ ನೌಕರರು ಸಮಾಜದಲ್ಲಿ ಪೌಷ್ಠಿಕತೆ ನಿವಾರಣೆಗೆ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ಖಾತೆಗೆ ನೇರ ಹಣ ಜಮೆ ಮಾಡಲು ಹೊರಟಿರುವುದು ಖಂಡನೀಯವಾಗಿದೆ. ಬೆಲೆಗಳು ದುಬಾರಿಯಾಗಿರುವಾಗ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡಿದಲ್ಲಿ ಸರ್ಕಾರ ನೀಡುವ ಹಣದಲ್ಲಿ ಪೌಷ್ಠಿಕ ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಬಡತನದ ಹಿನ್ನಲೆಯಲ್ಲಿ ಫಲಾನುಭವಿಗಳಗೆ ಆಹಾರ ದೊರೆಯುತ್ತದೆ ಎಂಬ ಖಾತ್ರಿ ಇಲ್ಲವಾಗಿದೆ. ಈ ಕೂಡಲೇ ಸರ್ಕಾರ ನೇರ ನಗದು ವರ್ಗಾವಣೆ ಯೋಜನೆಯನ್ನು ಕೈ ಬಿಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಲು-ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಧರಣಿ
ಅಂಗನವಾಡಿ ನೌಕರರು ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದು, ಮೊದಲ ಅಲೆಯಲ್ಲಿ 28 ನೌಕರರು ಹಾಗೂ ಎರಡನೇ ಅಲೆಯಲ್ಲಿ 19 ಅಂಗನವಾಡಿ ಕಾರ್ಯಕರ್ತೆಯರು ಜೀವಕಳೆದುಕೊಂಡಿದ್ದಾರೆ. ಅವರಿಗೆ ಇಂದಿಗೂ ಕೊರೊನಾ ಪರಿಹಾರದ ಹಣ ನೀಡಿಲ್ಲ. ಮೊಟ್ಟೆ ಖರೀದಿಗೆ ಹಣ ಬಿಡುಗಡೆ ಮಾಡದೇ ಬೆಲೆ ಏರಿದರೆ ಹೊಂದಾಣಿಕೆ ಮಾಡುವಂತೆ ಹೇಳಲಾಗುತ್ತಿದೆ. ಮೊಟ್ಟೆ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ವಿಧಾನಸೌಧದಲ್ಲಿ ಭ್ರಷ್ಟಾಚಾರ ನಡೆಸಿದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸಿಲುಕಿ ಹಾಕಿಕೊಂಡಿದ್ದರು. ಸರ್ಕಾರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದೆ ಎಂದರು ಆರೋಪಿಸಿದರು.
ಅಂಗನವಾಡಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ರಾಜ್ಯ ಮಟ್ಟದ ಸಮಿತಿ ಸಭೆ ನಡೆದು ಅನೇಕ ಶಿಫಾರಸ್ಸುಗಳನ್ನು ಮಾಡಿದೆ. ಆದರೆ ಅದರ ಜಾರಿಗೆ ಮುಂದಾಗುತ್ತಿಲ್ಲ. ಇಲ್ಲಿಯವರಗೆ ವೇತನ ಹೆಚ್ಚಿಸಿಲ್ಲ. ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದು, ಉದ್ಯೋಗ ಭದ್ರತೆಯೇ ಇಲ್ಲದಂತಾಗಿದೆ ಎಂದು ಅಂಗನವಾಡಿ ನೌಕರರ ರಾಜ್ಯ ಮುಖಂಡರಾದ ಟಿ. ಲೀಲಾವತಿ ಆರೋಪಿಸಿದ್ದಾರೆ.
ಇದನ್ನು ಓದಿ: ಅಂಗನವಾಡಿ ಮಕ್ಕಳ ಮೊಟ್ಟೆಗೆ ಕನ್ನ ಹಾಕಿದ ಸಚಿವೆ, ಸಚಿವೆಗೆ ಸಾಥ್ ನೀಡಿದ ಶಾಸಕ ಪರಣ್ಣ
ಮಕ್ಕಳಿಗೆ ನೇರವಾಗಿ ಬಿಸಿಯೂಟ ಊಟದ ಹಣವನ್ನು ಪಾವತಿಸಲು ಮುಂದಾಗಿದೆ. ಕೊರೊನಾ ಸೋಂಕಿತರಿಗೆ ಆಹಾರ ಸಿದ್ದಪಡಿಸಿ ಕೆಲಸ ಮಾಡಿರುವವ ನೌಕರರಿಗೆ ಇಂದಿಗೂ ಹಣ ನೀಡಿಲ್ಲ. ಹೋರಾಟವನ್ನು ಬೆಂಬಲಸಿ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿವೆ.
ರಾಜ್ಯದಲ್ಲಿ ಈ ಧರಣಿಯು ಮೂರು ದಿನಗಳ ಕಾಲ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ರಾಜ್ಯ ಸರಕಾರ ಕೂಡಲೇ ಇವರ ಬೇಡಿಕೆಳನ್ನು ಈಡೇರಿಸಿ ಅಂಗನವಾಡಿಗಳನ್ನು ಬಲಿಷ್ಟಗೊಳಿಸುವ ನಿರ್ಧಾರಕ್ಕೆ ಮುಂದಾಗಬೇಕಿದೆ.