ನವದೆಹಲಿ: ಪಂಚರಾಜ್ಯದ ಮತದಾನ ಮುಗಿದಿದ್ದು ಈಗಾಗಲೆ ವಿವಿಧ ಮಾಧ್ಯಮಗಳು ಮತಗಟ್ಟೆ ಸಮೀಕ್ಷೆಯನ್ನು ನಡೆಸಿವೆ. ಬಹುತೇಕ ಸಮೀಕ್ಷಗಳು ಐದು ರಾಜ್ಯಗಳಲ್ಲಿ ಮಿಜೋರಾಂನಲ್ಲಿ ಮಾತ್ರವೆ ಅತಂತ್ರ ಫಲಿತಾಂಶ ಬರಲಿದೆ ಎಂದು ಹೇಳುತ್ತಿದ್ದು, ಉಳಿದ ನಾಲ್ಕು ರಾಜ್ಯಗಳಲ್ಲಿ ದೇಶದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಜೊತೆಗೆ ಸಮವಾಗಿ ಅಧಿಕಾರ ಹಂಚಿಹೋಗುತ್ತದೆ ಎಂದು ಹೇಳಿವೆ.
ಛತ್ತೀಸ್‌ಗಡದಲ್ಲಿ ಮತ್ತೇ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಮತ್ತು ತೆಲಂಗಾಣದಲ್ಲಿ ಪ್ರಾದೇಶಿಕ ಪಕ್ಷವಾದ ಬಿಆರ್‌ಎಸ್‌ನಿಂದ ಕಾಂಗ್ರೆಸ್ ಅಧಿಕಾರ ಕಸಿದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಉಳಿದಂತೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದ್ದು, ಮಧ್ಯ ಪ್ರದೇಶದ ಮತದಾರರು ಮತ್ತೆ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ ಎಂದು ಸಮೀಕ್ಷೆಗಳು ಸೂಚಿಸಿವೆ. ಅದಾಗ್ಯೂ ಎಲ್ಲಾ ರಾಜ್ಯಗಳ ಫಲಿತಾಂಶ ಡಿಸೆಂಬರ್ 3 ರಂದು ಪ್ರಕಟವಾಗಲಿದೆ. ವಿವಿಧ ಮಾಧ್ಯಮಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಯ ಸಂಕ್ಷಿಪ್ತ ವಿವರ ಕೆಳಗಿವೆ; ಪಂಚರಾಜ್ಯ
ತೆಲಂಗಾಣ
ಮತಗಟ್ಟೆ ಸಮೀಕ್ಷೆಗಳು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಗಿಂತ ಕಾಂಗ್ರೆಸ್ ಪಕ್ಷವು ಸ್ಪಷ್ಟ ಮುನ್ನಡೆಯಲ್ಲಿ ಇರುವುದು ಸೂಚಿಸಿವೆ. 119 ವಿಧಾನಸಭಾ ಸದಸ್ಯ ಸ್ಥಾನವಿರುವ ತೆಲಂಗಾಣದಲ್ಲಿ ಆಡಳಿತರೂಢ ಪಕ್ಷವೂ ಅಧಿಕಾರ ಕಳೆದುಕೊಳ್ಳಲಿದೆ ಎಂದು ಸಮೀಕ್ಷೆಗಳು ಸೂಚಿಸಿವೆ.
ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್, ಕಾಂಗ್ರೆಸ್ 63 ರಿಂದ 79 ಸ್ಥಾನಗಳ ಬಹುಮತವನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಬಿಆರ್‌ಎಸ್ ಪಕ್ಷವೂ 31 ರಿಂದ 47 ಸ್ಥಾನಗಳನ್ನು ಗಳಿಸಲಿದೆ ಎಂದು ಅದು ಹೇಳಿದೆ. ಜೊತೆಗೆ ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷವೂ ಐದರಿಂದ ಏಳು ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿವೆ.
ಇದನ್ನೂ ಓದಿ: ರಾಷ್ಟ್ರೀಯ ಲಾಂಛನ ಬದಲಿಸಿ ಹಿಂದೂ ದೇವತೆ ಚಿತ್ರ ಹಾಕಿದ ವೈದ್ಯಕೀಯ ಆಯೋಗ!
ಎಬಿಪಿ-ಸಿವೋಟರ್ ಸಮೀಕ್ಷೆಯು ಬಿಜೆಪಿ ಐದರಿಂದ 13 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಊಹಿಸಿದೆ. ಒಂದು ವೇಳೆ ಇದು ನಡೆದರೆ ಪಕ್ಷವೂ ಕಿಂಗ್‌ಮೇಕರ್ ಆಗಲಿದೆ. ಆದರೆ ಎಬಿಪಿ-ಸಿವೋಟರ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 49 ರಿಂದ 65 ಸ್ಥಾನ ಪಡೆಯಲಿದೆ ಎಂದು ಹೇಳಿದ್ದು, ಬಿಆರ್‌ಎಸ್‌ಗೆ 38 ರಿಂದ 54 ಸ್ಥಾನಗಳು ದಕ್ಕಲಿದೆ ಎಂದು ತಿಳಿಸಿದೆ. ಎಐಎಂಐಎಂ ಸೇರಿದಂತೆ ಇತರ ಪಕ್ಷಗಳು ಐದರಿಂದ ಒಂಬತ್ತು ಸ್ಥಾನಗಳು ಪಡೆಯಲಿದೆ ಎಂದು ಎಬಿಪಿ – ಸಿ ವೋಟರ್ ಭವಿಷ್ಯ ಹೇಳಿದೆ. ಪಂಚರಾಜ್ಯ
ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 58 ರಿಂದ 68 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಬಿಆರ್‌ಎಸ್ 46 ರಿಂದ 56 ಸ್ಥಾನಗಳನ್ನು ಪಡೆಯಲಿದ್ದುಮ, ಬಿಜೆಪಿ 2018 ರಲ್ಲಿ ಪಡೆದ ಒಂದು ಸ್ಥಾನದಿಂದ ಈ ಬಾರಿ 4-9ಕ್ಕೆ ಏರಲಿದೆ ಹಾಗೂ ಎಐಎಂಐಎಂ 5-7 ಸ್ಥಾನ ಪಡೆಯಲಿದೆ ಎಂದು ಹೇಳಿದೆ.
ಬಹುತೇಕ ಎಕ್ಸಿಟ್ ಪೋಲ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದೆ ಅಥವಾ ಕನಿಷ್ಠ ಮುನ್ನಡೆ ಕಾಯ್ದುಕೊಳ್ಳುತ್ತಿದೆ ಎಂದು ಹೇಳಿವೆ. ಈ ಹಿನ್ನಲೆಯಲ್ಲಿ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಅವರು ಪಕ್ಷದ ಕಾರ್ಯಕರ್ತರಿಗೆ ನವೆಂಬರ್ 30 ರಂದು ಸಂಜೆ 7 ಗಂಟೆಯಿಂದ ವಿಜಯೋತ್ಸವ ಆಚರಿಸಲು ಕೇಳಿಕೊಂಡಿದ್ದಾರೆ.
ಮಧ್ಯ ಪ್ರದೇಶ
230 ವಿಧಾನಸಭಾ ಕ್ಷೇತ್ರಗಳಿರುವ ಮಧ್ಯಪ್ರದೇಶದಲ್ಲಿ ಅಧಿಕಾರ ಹಿಡಿಯಲು 116 ಸ್ಥಾನಗಳ ಅಗತ್ಯವಿದೆ. ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಶಾಸಕರನ್ನು ಸೆಳೆದು ಆಪರೇಷನ್ ಕಮಲ ಮೂಲಕ ಬಿಜೆಪಿ ಆಡಳಿತ ಹಿಡಿದಿತ್ತು. ಅದಾಗ್ಯೂ, ಈ ಬಾರಿ ಬಿಜೆಪಿ ಹೆಚ್ಚಿನ ಸಾಧನೆ ಮಾಡುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಸೂಚಿಸಿವೆ. ಹೆಚ್ಚಿನ ಸಮೀಕ್ಷೆಗಳು ಬಿಜೆಪಿಗೆ ಸರಳ ಬಹುತ ಸಿಗಲಿದೆ ಎಂದರೂ ಇನ್ನೂ ಕೆಲಸವು ಸಮೀಕ್ಷೆಗಳು ಅತಂತ್ರ ಫಲಿತಾಂಶ ಬರಲಿದೆ ಎಂದು ತಿಳಿಸಿವೆ.
ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಮಧ್ಯಪ್ರದೇಶದಲ್ಲಿ ಹಾಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಆಡಳಿತ ಪಕ್ಷವು 140-162 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಮೀಕ್ಷೆ ಹೇಳಿದ್ದು, ಕಾಂಗ್ರೆಸ್ 68-90 ಸ್ಥಾನಗಳನ್ನು ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಇತತೆ 0-3 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ದುಡಿಯುವ ಜನರ ಮಹಾಧರಣಿಯ ಮಹಾ ನಿರ್ಣಯ | ಕೇಂದ್ರಕ್ಕೆ ಛೀಮಾರಿ, ರಾಜ್ಯಕ್ಕೆ ಎಚ್ಚರಿಕೆ!
ಮತ್ತೊಂದೆಡೆ, ಎಬಿಪಿ ನ್ಯೂಸ್ – ಸಿವೋಟರ್ ಸಮೀಕ್ಷೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಹೇಳಿದೆ. ಕಾಂಗ್ರೆಸ್ 113 ರಿಂದ 137 ಸ್ಥಾನಗಳು ಪಡೆಯಲಿದ್ದು, ಬಿಜೆಪಿ 88 – 112 ಸ್ಥಾನ ಪಡೆಯಲಿದೆ ಹಾಗೂ ಬಿಎಸ್‌ಪಿ 1ರಿಂದ 5 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ. ಇತರ ಪಕ್ಷೆಗಳು 1-6 ಸ್ಥಾನಗಳು ಗೆಲ್ಲುವ ನಿರೀಕ್ಷೆಯಿದೆ.
ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ಅತಂತ್ರ ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿವೆ. ಕಾಂಗ್ರೆಸ್ 100-123 ಸ್ಥಾನಗಳನ್ನು, ಬಿಜೆಪಿ 102-125 ಸ್ಥಾನಗಳನ್ನು ಮತ್ತು ಇತರರು 5 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಹೇಳಿದೆ. P-MARQ ನಡೆಸಿದ ಸಮೀಕ್ಷೆ ಕೂಡಾ ಅತಂತ್ರ ಫಲಿತಾಂಶದ ಬಗ್ಗೆ ಹೇಳಿದೆ.
ರಾಜಸ್ಥಾನ
ಕಳೆದ 25 ವರ್ಷಗಳಿಂದ ರಾಜಸ್ಥಾನದಲ್ಲಿ ಪ್ರತಿಬಾರಿಯು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಬದಲಾಗುತ್ತಲೆ ಬಂದಿವೆ. ಹೀಗಾಗಿ ಈ ಬಾರಿಯು ರಾಜ್ಯದ ಜನತೆ ಅದೇ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ರಾಜಸ್ಥಾನದ 200 ಸ್ಥಾನಗಳಲ್ಲಿ 199 ಸ್ಥಾನಕ್ಕೆ ನಡೆದ ಚುಣಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದು ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಅದಾಗ್ಯೂ ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಹೊರತುಪಡಿಸಿ ಸಮೀಕ್ಷೆ ಅತಂತ್ರ ಫಲಿತಾಂಶದ ಬಗ್ಗೆ ಹೇಳಿದೆ. ಉಳಿದಂತೆ ಜನ್ ಕಿ ಬಾತ್, ರಿಪಬ್ಲಿಕ್-ಪಿ ಮಾರ್ಕ್ ಮತ್ತು ಎಬಿಪಿ ನ್ಯೂಸ್-ಸಿ ವೋಟರ್ ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದು ಹೇಳಿವೆ.
ಬಿಜೆಪಿ 100 ರಿಂದ 122 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಕಾಂಗ್ರೆಸ್ 62 ರಿಂದ 85 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿರಲಿದೆ ಎಂದು ಜನ್ ಕಿ ಬಾತ್ ಭವಿಷ್ಯ ನುಡಿದಿದೆ. ರಿಪಬ್ಲಿಕ್-ಪಿಮಾರ್ಕ್ ಸಮೀಕ್ಷೆ ಬಿಜೆಪಿ 105-125 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದಿದ್ದು, ಕಾಂಗ್ರೆಸ್ 69 ರಿಂದ 81 ಸ್ಥಾನಗಳನ್ನು ಗೆಲ್ಲುತ್ತದೆ ಹಾಗೂ ಇತರೆ ಪಕ್ಷಗಳು 5 ರಿಂದ 15 ಸ್ಥಾನಗಳನ್ನು ಗೆಲ್ಲುತ್ತೆವೆ ಎಂದು ಹೇಳಿದೆ.
ಎಬಿಪಿ ನ್ಯೂಸ್-ಸಿ ವೋಟರ್ ಸಮೀಕ್ಷೆಗಳು ಬಿಜೆಪಿಗೆ 94 ರಿಂದ 114 ಮತ್ತು ಕಾಂಗ್ರೆಸ್ 71 ರಿಂದ 91 ಸ್ಥಾನಗಳನ್ನು ಗಳಿಸುತ್ತದೆ ಎಂದು ಹೇಳಿದೆ. ಉಳಿದಂತೆ ಬಿಎಸ್ಪಿ ಮತ್ತು ಇತರೆ ಪಕ್ಷಗಳು 9 ರಿಂದ 19 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿವೆ.
ಇದನ್ನೂ ಓದಿ: ಕಲಬುರಗಿ ವಿವಿ ಮಹಾ ಎಡವಟ್ಟು| ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿ ಮಾಯ!
ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಅತಂತ್ರ ಫಲಿತಾಂಶದ ಬಗ್ಗೆ ಹೇಳಿದೆ. ಕಾಂಗ್ರೆಸ್ 86 ರಿಂದ 106 ಮತ್ತು ಬಿಜೆಪಿ 80 ರಿಂದ 100 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಅಂದಾಜಿಸಿದೆ. ಬಿಎಸ್‌ಪಿ ಸೇರಿದಂತೆ ಇತರರಿಗೆ 9 ರಿಂದ 18 ಸೀಟುಗಳು ಸಿಗಲಿದೆ ಎಂದು ಸಮೀಕ್ಷೆ ಸೂಚಿಸಿವೆ.
ಛತ್ತೀಸ್‌ಘಡ
90 ಸ್ಥಾನಗಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಸೂಚಿಸಿವೆ. P-ಮಾರ್ಕ್, ಜನ್ ಕಿ ಬಾತ್, ಟೈಮ್ಸ್ ನೌ ಮತ್ತು ABP – CVoter ನ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸರಳ ಬಹುಮತವನ್ನು ಪಡೆಯಲಿದೆ ಎಂದು ಹೇಳಿದ್ದು, ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಸೂಚಿಸಿವೆ.
ಪಿ-ಮಾರ್ಕ್ ಎಕ್ಸಿಟ್ ಪೋಲ್‌ಗಳು ಕಾಂಗ್ರೆಸ್ 46 ರಿಂದ 54 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದು, ಬಿಜೆಪಿಗೆ 35 ರಿಂದ 42 ಸ್ಥಾನಗಳನ್ನು ದಕ್ಕಲಿದೆ ಎಂದು ತಿಳಿಸಿದೆ. ಜನ್ ಕಿ ಬಾತ್ ಸಮೀಕ್ಷೆಯು ಕಾಂಗ್ರೆಸ್ 42-53 ಸ್ಥಾನಗಳನ್ನು ಮತ್ತು ಬಿಜೆಪಿ 34-45 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದೆ.
ಎಬಿಪಿ-ಸಿವೋಟರ್ ಎಕ್ಸಿಟ್ ಪೋಲ್ ಕಾಂಗ್ರೆಸ್‌ಗೆ 47 ಸ್ಥಾನ ಪಡೆಯಲಿದೆ ಎಂದು ಹೇಳಿದ್ದು, ಬಿಜೆಪಿ 42 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ, ಕಾಂಗ್ರೆಸ್‌ಗೆ 52 ಸ್ಥಾನ ಮತ್ತು ಬಿಜೆಪಿ 36 ಸ್ಥಾನಗಳನ್ನು ಗೆಲ್ಲಲಿದೆ.
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಛತ್ತೀಸ್‌ಗಢದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಕಾಂಗ್ರೆಸ್ ಪಕ್ಷವು 40 ರಿಂದ 50 ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಬಿಜೆಪಿ ಸುಮಾರು 36 ರಿಂದ 46 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಕೋರಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ
ಮಿಜೋರಾಂ
ಈಶಾನ್ಯ ರಾಜ್ಯವಾದ ಮಿಜೋರಾಂನ 40 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಫಲಿತಾಂಶವು ಅತಂತ್ರವಾಗಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಸೂಚಿಸಿವೆ. ಇಟಿಜಿ-ಟೈಮ್ಸ್ ನೌ ಸಮೀಕ್ಷೆಯು ಆಡಳಿತರೂಢ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) 14-18 ಸ್ಥಾನಗಳನ್ನು ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) ತನ್ನ ಆರು ಪ್ರಾದೇಶಿಕ ಪಕ್ಷಗಳ ಮೈತ್ರಿಯೊಂದಿಗೆ 10-14 ಸ್ಥಾನಗಳನ್ನು ಗಳಿಸುವ ಮೂಲಕ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಜೊತೆಗೆ ಇಲ್ಲಿ ಕಾಂಗ್ರೆಸ್‌ಗೆ 9-13 ಸ್ಥಾನಗಳು ಮತ್ತು ಬಿಜೆಪಿಗೆ 0-2 ಸ್ಥಾನಗಳು ದಕ್ಕಲಿದೆ ಎಂದು ಹೇಳಿದೆ.
ಪಿ-ಮಾರ್ಕ್ ಸಮೀಕ್ಷೆ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್‌ಎಫ್) 14-20 ಸ್ಥಾನಗಳನ್ನು ಮತ್ತು ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಝಡ್‌ಪಿಎಂ) 9-15 ಸ್ಥಾನಗಳನ್ನು ಗೆದ್ದು ಅತಂತ್ರ ಸ್ಥಿತಿ ನಿರ್ಮಾಣವಾಗುವ ಬಗ್ಗೆ ಹೇಳಿದೆ. ಹಾಗೆಯೆ ಕಾಂಗ್ರೆಸ್ 7-13 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವೂ ಕಿಂಗ್ ಮೇಕರ್ ಆಗಲಿದೆ ಎಂದು ಸೂಚಿಸಿದೆ.
ಜನ್ ಕಿ ಬಾತ್ ಎಕ್ಸಿಟ್ ಪೋಲ್ ಎಂಟು ಪಕ್ಷಗಳ ಮೈತ್ರಿಯಾದ ZPM 15-25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸೂಚಿಸಿದ್ದು, ಎಂಎನ್‌ಎಫ್ 10-14 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಕಾಂಗ್ರೆಸ್ 5-9 ಸ್ಥಾನಗಳು ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದು, ಬಿಜೆಪಿಗೆ 0-2 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.
ಎಬಿಪಿ-ಸಿ ವೋಟರ್ 15-21 ಸ್ಥಾನಗಳೊಂದಿಗೆ ಎಂಎನ್‌ಎಫ್‌ಗೆ ಅಲ್ಪ ಗೆಲುವು ಮತ್ತು 12-18 ಸ್ಥಾನಗಳೊಂದಿಗೆ ಝಡ್‌ಪಿಎಂ ಎರಡನೆ ಸ್ಥಾನದಲ್ಲಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇತರ ಸಮೀಕ್ಷೆಗಳಂತೆಯೇ C ವೋಟರ್ ಸಹ ಕಾಂಗ್ರೆಸ್ 2-8 ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಿದೆ.
ಇಂಡಿಯಾ ಟುಡೆಯ ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ZPM ಗೆ 28-35 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಭವಿಷ್ಯ ನುಡಿದಿದೆ. ಅಧಿಕಾರದಲ್ಲಿರುವ ಎಂಎನ್‌ಎಫ್ 3-5 ಸ್ಥಾನಗಳನ್ನು ಮಾತ್ರ ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆಯು ಸೂಚಿಸಿದೆ. ಹಾಗೆಯೆ ಕಾಂಗ್ರೆಸ್ 2-4 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದು, ಬಿಜೆಪಿ 0-2 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ.
ವಿಡಿಯೊ ನೋಡಿ: ಕಂಪನಿಗಳಿಂದ ಕಾರ್ಮಿಕರ ಶ್ರಮದ ಲೂಟಿ – ಮೀನಾಕ್ಷಿ ಸುಂದರಂ