ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಕೋರಿ ಮುಖ್ಯಮಂತ್ರಿಗೆ ಬಹಿರಂಗ ಪತ್ರ

ಬೆಂಗಳೂರು: ರಾಜ್ಯದ ಜನತೆಯ ಶಾಂತಿಯುತ ಪ್ರತಿಭಟನೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು  ಹತ್ತಿಕ್ಕದಂತೆ ಪೋಲೀಸ್ ಇಲಾಖೆಗೆ ನಿರ್ದೇಶನ ನೀಡಿ, ದೇಶದ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ಜಾಗೃತ ನಾಗರಿಕ ಕರ್ನಾಟಕವು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸಿದೆ.

ಬೆಂಗಳೂರು ನಗರದ ಪ್ರತಿಷ್ಠಿತ ರಂಗ ಶಂಕರದಲ್ಲಿ ಕೆಲವು ಕಲಾವಿದರು ಪ್ಯಾಲೆಸ್ಟೈನ್ ಸಂತ್ರಸ್ತರ ಪರವಾಗಿ ಕವನ ವಾಚನ, ಕಿರುನಾಟಕ ವಾಚನ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು  ಮಾಡಲು ಪೋಲೀಸರು ಬಿಡಲಿಲ್ಲ ಎಂಬ ಆಘಾತಕಾರಿ ಘಟನೆ ನಡೆದಿದ್ದು, ಪ್ಯಾಲೆಸ್ಟೈನ್ ಜನರ ಪರವಾಗಿ  ಸಾಮಾಜಿಕ ಕಾರ್ಯಕರ್ತರ ಶಾಂತಿಯುತ ಅಭಿವ್ಯಕ್ತಿಯನ್ನು ಕರ್ನಾಟಕದ ಪೋಲಿಸರು ಬಲವಂತವಾಗಿ ಹತ್ತಿಕ್ಕುತ್ತಿರುವ ರೀತಿಯು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸುತ್ತಿದೆ ಎಂದು ಮುಖ್ಯಮಂತ್ರಿಯವರ ಅವಗಾಹನೆಗೆ ತರಲು ಈ ಪತ್ರವನ್ನು ಸಲ್ಲಿಸಿದೆ.

ಪ್ಯಾಲೆಸ್ಟೈನಿನಲ್ಲಿ ಅತ್ಯಂತ ಭೀಕರವಾಗಿ ಮಕ್ಕಳು ಮತ್ತು ಮಹಿಳೆಯರನ್ನು ಹತ್ಯೆ ಮಾಡುತ್ತಿರುವ ಕೃತ್ಯವನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಅಮೆರಿಕಾ ಮತ್ತಿತರ ದೇಶಗಳಲ್ಲಿನ ಇಸ್ರೇಲಿನವರು ಮತ್ತು ಯೆಹೂದಿಗಳ ನೇತೃತ್ವದಲ್ಲಿ ಭಾರಿ ಸಂಖ್ಯೆಯ ಪ್ರತಿಭಟನೆಗಳು ನಡೆಯುತ್ತಿವೆ ಮತ್ತು ಈ ಕೂಡಲೇ ಆಕ್ರಮಣವನ್ನು ನಿಲ್ಲಿಸಲು ಒಕ್ಕೊರಲಿನ ಮನವಿ ಮಾಡಿದ್ದಾರೆ ಎಂಬ ಸಂಗತಿಯನ್ನು ನಾವು ಗಮನಿಸಬೇಕು. ಪ್ಯಾಲೆಸ್ಟೈನ್ ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲೂ ನಾಗರಿಕರು ತಮ್ಮ ಸಹಾನುಭೂತಿ ಹಾಗೂ ಅನುಕಂಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಾರತ ಸರ್ಕಾರ ಕೂಡ ಪ್ಯಾಲೆಸ್ಟೈನ್ ಜನರ ಪರವಾಗಿ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತಿದೆ. ನಿಜಸ್ಥಿತಿ ಹೀಗಿರುವಾಗ ಪ್ಯಾಲೆಸ್ಟೈನ್ ಜನರ ಬೆಂಬಲಾರ್ಥ ನಡೆಯುತ್ತಿರುವ ಶಾಂತಿಯುತ ಸಭೆ ಸಮಾರಂಭಗಳನ್ನು ನಿರ್ದಯವಾಗಿ ಹತ್ತಿಕ್ಕುತ್ತಿರುವ ಕರ್ನಾಟಕದ ಪೋಲಿಸರ ನಡೆಯನ್ನು ಖಂಡಿಸಿದೆ.

ಬೆಂಗಳೂರು ನಗರದಲ್ಲಿ,  ಸಾಗರ ತುಮಕೂರು ಪಟ್ಟಣಗಳಲ್ಲಿ ಹಲವಾರು ಸಂಘ ಸಂಸ್ಥೆಗಳು ನಡೆಸಿದ ಶಾಂತಿಯುತ ಮತಪ್ರದರ್ಶನಗಳನ್ನು ಕರ್ನಾಟಕ ಪೋಲಿಸರು ತಡೆದಿದ್ದಾರೆ ಮತ್ತು ಬಂಧಿಸಿದ್ದಾರೆ ಕೂಡ. . ಅಂದರೆ ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ವಿದೇಶಾಂಗ ನೀತಿ ಇದೆಯೆ ಎಂಬ ಅನುಮಾನ ಬರುತ್ತಿದೆ. ಮತ್ತೊಂದು ವಿಷಾದಕರ ಸಂಗತಿಯೆಂದರೆ ಸಂಕುಚಿತ ಭಾವನೆಯ ಬಲಪಂಥೀಯ ಗುಂಪುಗಳ ಕುಕೃತ್ಯಗಳ ಬಗ್ಗೆ ಮೃದು ಧೋರಣೆ ತೋರುತ್ತಿರುವ ಮತ್ತು  ನಾಗರಿಕರ ನೈಜ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿರುವ ಕರ್ನಾಟಕ ಪೋಲಿಸರ ನಡೆಯು ಆಘಾತಕಾರಿಯಾಗಿದೆ ಎಂದು ಆರೋಪಿಸಿದೆ.

ಇದನ್ನೂ ಓದಿ: ನೊಂದವರೆಂಬ ಮುಸುಕು ಹೊದ್ದಿರುವ ಇಸ್ರೇಲಿನ ನೆಲೆಸಿಗ ವಸಾಹತುಶಾಹಿ

ಅಮಾನವೀಯ ಹಿಂಸೆ, ಆಕ್ರಮಣ, ದೌರ್ಜನ್ಯಗಳ ವಿರುದ್ಧ ವ್ಯಕ್ತಪಡಿಸುವ ಸಾಂವಿಧಾನಿಕ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಮತ್ತು ಹಕ್ಕುಗಳನ್ನು ರಕ್ಷಿಸುವ ಹೊಣೆಗಾರಿಕೆ ಚುನಾಯಿತ ಸರ್ಕಾರದ ಕರ್ತವ್ಯ ಎಂದು ಹೇಳಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜನತೆಯ ಶಾಂತಿಯುತ ಪ್ರತಿಭಟನೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು  ಹತ್ತಿಕ್ಕದಂತೆ ಪೋಲೀಸ್ ಇಲಾಖೆಗೆ ನಿರ್ದೇಶನ ನೀಡಿ ದೇಶದ ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರೊ.ರಾಜೇಂದ್ರ ಚೆನ್ನಿ,  ಕೆ.ಎಸ್.ವಿಮಲಾ, ಬಿ.ಶ್ರೀಪಾದ ಭಟ್, ಟಿ.ಸುರೇಂದ್ರ ರಾವ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಡಾ.ವಸುಂಧರಾ ಭೂಪತಿ, ರುದ್ರಪ್ಪ ಹನಗವಾಡಿ, ವೆಂಕಟೇಶ ‌ಪ್ರಸಾದ್,ಸುಷ್ಮಾ ,ಎನ್.ಕೆ.ವಸಂತ್ ರಾಜ್ ಉಪಸ್ಥಿತರಿದ್ದರು.

ವಿಡಿಯೋ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ? Janashakthi Media

Donate Janashakthi Media

Leave a Reply

Your email address will not be published. Required fields are marked *