ಅವಧಿಗೂ ಮುನ್ನ ಶಾಸಕರ ಫೋಟೋ ಶೂಟ್: ವಿಧಾನಸಭೆಯಲ್ಲಿ ರಾಜಕೀಯ ಗದ್ದಲ

ಬೆಂಗಳೂರು: ವಿಧಾನಸಭೆಯ 5 ವರ್ಷಗಳ ಅವಧಿ ಮುಗಿಯುವ ವೇಳೆ ಕೊನೆಯ ಕಲಾಪದಲ್ಲಿ ಶಾಸಕರ ಫೋಟೋ ಶೂಟ್ ನಡೆಸುವುದು ಸಾಮಾನ್ಯ. ಆದರೆ, ಮಾರ್ಚ್‌ 25ರಂದು ಸ್ಪೀಕರ್ ಯು.ಟಿ.ಖಾದರ್ ಅವರು ಅವಧಿಗೂ ಮುನ್ನ 16ನೇ ವಿಧಾನಸಭೆ ಶಾಸಕರ ಫೋಟೋ ಶೂಟ್ ಮಾಡಿಸಿರುವುದು ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಒಂದೆಡೆ ಉಪಚುನಾವಣೆಯ ಕಾವು ಏರಿದ್ದು, ಇನ್ನೊಂದೆಡೆ ಉಪಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜ್ಯ ಸಚಿವ ಸಂಪುಟ ಪುನರ್ ರಚನೆ ನಡೆಯಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ವಿಶೇಷವಾಗಿ ಸ್ಪೀಕರ್ ಯು.ಟಿ.ಖಾದರ್ ಅವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಫೋಟೋ ಶೂಟ್ ಮಾಡಲಾಗಿದೆ ಎನ್ನಲಾಗಿದೆ.

”ಇದು ಸಿಎಂ ಸಿದ್ದರಾಮಯ್ಯ ಅವರ ಔಟ್ ಗೋಯಿಂಗ್ ಫೋಟೋ ಶೂಟ್” ಎಂದು ಬಿಜೆಪಿ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದೆ. ಇನ್ನೊಂದೆಡೆ ಹಿರಿಯ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಫೇಸ್ ಬುಕ್ ಪೋಸ್ಟ್ ಮಾಡಿ ಫೋಟೋ ಶೂಟ್ ನ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಡಿಜಿಟಲ್ ಸಾಮ್ರಾಜ್ಯಶಾಹಿ ಮತ್ತು ಕಾರ್ಮಿಕ ವರ್ಗ: ಇರಾನ್ ದಾಳಿ ಮತ್ತು ದತ್ತಾಂಶದ ಶಸ್ತ್ರಾಸ್ತ್ರೀಕರಣ

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು. ಟಿ.ಖಾದರ್ ಅವರಿಗೆ ವಿಶಿಷ್ಟ ಕೆಲಸಗಳನ್ನು ಮಾಡುವುದರಲ್ಲಿ ವಿಪರೀತ ಉಮೇದು. ರಾಜ್ಯದ ಮಾಜಿ ಧೀಮಂತ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯನವರು 50 ರ ದಶಕದಲ್ಲಿ ಕೇವಲ 1.50 ಕೋಟಿ ರೂ ಹಣದಲ್ಲಿ ನಿರ್ಮಿಸಿದ ಭವ್ಯ ವಿಧಾನಸೌಧಕ್ಕೆ ಇಂದು 84 ಲಕ್ಷ ರೂ ವೆಚ್ಚದಲ್ಲಿ ಹೊಸ ಬಾಗಿಲನ್ನು ನಿರ್ಮಿಸಿದ ಹೆಗ್ಗಳಿಕೆ ನಮ್ಮ ಈ ಸಭಾಧ್ಯಕ್ಷರದ್ದು. ಹಳೆಯ ಬಾಗಿಲು ಹಾಳಾಗಿ ಹೋಗಿತ್ತೇ? ಶಿಥಿಲವಾಗಿತ್ತೇ? ಗೆದ್ದಲು ತಿಂದಿತ್ತೇ? ಅಥವಾ ಯಾರಾದರೂ ಬಾಗಿಲು ಹಳೆದಾಗಿದೆ, ಬದಲಾಯಿಸಿ ಎಂದು ಕೇಳಿದ್ದರೇ?… ಹೊಸ ಬಾಗಿಲು ಹಾಕಿಸುವುದಕ್ಕೆ ಕಾರಣ ಯಾರಿಗೂ ಗೊತ್ತಿಲ್ಲ.

ನಾಳೆ ಮತ್ತೊಂದು ಹೊಸ ಕಾರ್ಯ ಮಾಡಲು ನಮ್ಮ ಸಭಾಧ್ಯಕ್ಷರು ಇಳಿದಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನ ಸಭೆಯ ಎಲ್ಲಾ ಸದಸ್ಯರ ಗ್ರೂಪ್ ಫೋಟೋ ಯೋಜಿಸಲಾಗಿದೆ. ನಾಳೆ 2026, ಮಾರ್ಚ್ 25. ಸಾಮಾನ್ಯವಾಗಿ ಶಾಸಕರ ಗ್ರೂಪ್ ಫೋಟೋ ತೆಗೆಯುವುದು ಐದು ವರ್ಷ ಅವಧಿಯ ಕೊನೆಯಲ್ಲಿ. ಅಂದರೆ 2028 ಮಾರ್ಚ್- ಏಪ್ರಿಲ್ ತಿಂಗಳಲ್ಲಿ. ಹೀಗಿದ್ದಾಗ ನಾಳೆ ಈ ಗ್ರೂಪ್ ಫೋಟೋ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದಾರೆ.

ಯೋಚಿಸಿದಾಗ ಕಾರಣಗಳು ಈ ಕೆಳಕಂಡಂತಿರಬಹುದು. ಈ ಅಧಿವೇಶನದ ನಂತರ ಶ್ರೀ ಖಾದರ್ ರವರು ಸಭಾಧ್ಯಕ್ಷರ ಸ್ಥಾನದಿಂದ ಸಚಿವ ಸ್ಥಾನಕ್ಕೆ ಹೋಗುವ ಇರಾದೆ ಹೊಂದಿರಬಹುದು. ಮತ್ತು ಅದಕ್ಕೆ ಹಸಿರು ನಿಶಾನೆಯೂ ದೊರಕಿರಬಹುದು. ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬದಲಾಗುತ್ತಾರೆಯೇ? ಅವರು ಮುಖ್ಯಮಂತ್ರಿ ಆಗಿರುವಾಗ ಒಂದು ಫೋಟೋ ಇರಲಿ ಎಂದೇ? ಅಥವಾ ಮಧ್ಯಂತರ ಚುನಾವಣೆ ನಡೆಯುತ್ತದೆಯೇ?

ಈ ಮೇಲಿನ ಮೂರು ಕಾರಣಗಳಲ್ಲಿ ಯಾವುದು ಈ ಮಧ್ಯಂತರ ಗ್ರೂಪ್ ಫೋಟೋಗೆ ಕಾರಣ? ಎಂದು ಸುರೇಶ್ ಕುಮಾರ್ ಪ್ರಶ್ನಿಸಿದ್ದರು.

ಇದನ್ನೂ ನೋಡಿ: ಇರಾನ್ ಮೇಲೆ ಯು.ಎಸ್.-ಇಸ್ರೇಲ್ ದಾಳಿ: ಜಾಗತಿಕ ಪರಿಣಾಮಗಳು – ಎನ್.ಕೆ. ವಸಂತರಾಜ್ Janashakthi Media

Donate Janashakthi Media

Leave a Reply

Your email address will not be published. Required fields are marked *