ಹಾಸನ : ಬಿಜೆಪಿ ಸರ್ಕಾರ ಆರ್‌ಎಸ್‌ಎಸ್‌ನ ಮಾರ್ಗದರ್ಶನದಲ್ಲಿ ಧರ್ಮವನ್ನು ಮುಂದೆ ತಂದು ಒಗ್ಗಟ್ಟಾಗುವ ಕಾರ್ಮಿಕರನ್ನು ಚದುರಿಸುವ ಕೆಲಸ ಮಾಡುತ್ತಿದೆ. ಕಾರ್ಮಿಕರ ನಡುವೆ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಕೆ ಹೇಮಲತಾ ಆರೋಪಿಸಿದರು.
ಇದನ್ನೂ ಓದಿ : CITU ರಾಜ್ಯ ಸಮ್ಮೇಳನ ಹಾಸನ| 36 ಸಾವಿರ ಕನಿಷ್ಠ ವೇತನಕ್ಕಾಗಿ, ಗುತ್ತಿಗೆ ಪದ್ದತಿ ವಿರುದ್ಧ ಹೋರಾಟದ ನಿರ್ಣಯ
ಹಾಸನ ನಗರದಲ್ಲಿ ನಡೆದ ಸಿಐಟಿಯು 16ನೇ ರಾಜ್ಯ ಸಮ್ಮೇಳನದ ಮೂರನೇ ದಿನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಅಂಗನವಾಡಿ, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಬೀಡಿಕಾರ್ಮಿಕರು ಸೇರಿದಂತೆ ಸ್ವಚ್ಛತೆ ಕಾರ್ಮಿಕರ ವೇತನದ ಹಕ್ಕು, ಸಮಯದ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ. ಎಲ್ಲ ಕಾರ್ಮಿಕರ ಬವಣೆಗಳನ್ನು ಚರ್ಚಿಸಲಾಗಿದೆ. ಇದರ ಪರಿಹಾರಕ್ಕೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಕಂಡುಕೊಳ್ಳಬೇಕು ಎನ್ನುವ ಚಿಂತನೆಯನ್ನು ನಡೆಸಿದ್ದೇವೆ ಎಂದು ಹೇಳಿದರು.
“ಮೂರು ದಿನಗಳ ಕಾಲ ನಿರಂತರ ಚರ್ಚೆ ಮಾಡಿ, ಕಾರ್ಮಿಕ ವರ್ಗದ ಮೇಲೆ, ದುಡಿಯುವ ಜನರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟಲು, ಸ್ಥಿತಿ ಗತಿಯನ್ನು ಕುರಿತು ಒಟ್ಟು ಕಾರ್ಮಿಕ ವರ್ಗದ ಅನುಭವಗಳನ್ನು ತಿಳಿದುಕೊಂಡಿದ್ದು, ನಾವು ವರದಿಯನ್ನು ಅಂಗೀಕಾರ ಮಾಡಿಕೊಂಡಿದ್ದೇವೆ” ಎಂದು ತಿಳಿಸಿದರು.
“ಇಡೀ ರಾಜ್ಯಗಳು ಸೇರಿದಂತೆ ದೇಶಾದ್ಯಂತ ಕಾರ್ಮಿಕ ವರ್ಗದಲ್ಲಿ ಐಕ್ಯತೆಯನ್ನು ಮೂಡಿಸಬೇಕು. ಜನರನ್ನು ಒಗ್ಗೂಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಬೇಕು” ಎಂದು ಹೇಳಿದರು.
“ಈ ಸಿಐಟಿಯು ಸಮ್ಮೇಳನ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಮ್ಮೇಳನಕ್ಕೆ ಪೂರ್ವಭಾವಿಯಾಗಿದೆ. ಇಂತಹ ಹೋರಾಟಗಳಲ್ಲಿ ರೈತ ಕಾರ್ಮಿಕರ ವಿರೋಧಿ ನೀತಿಗಳನ್ನು ಖಂಡಿಸಲಾಗುವುದು. ಅಖಿಲ ಭಾರತ ಸಮ್ಮೇಳನಕ್ಕೆ ಹೋಗುವಷ್ಟರಲ್ಲಿ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಎಲ್ಲ ಕಾರ್ಮಿಕ ಕೂಡ ಹೋರಾಟವನ್ನು ತೀವ್ರಗೊಳಿಸಬೇಕು. ಈ ಮೂಲಕ ಸರ್ಕಾರಗಳನ್ನು ಬಡಿದೆಚ್ಚರಿಸುವ ಕೆಲಸ ಮಾಡಬೇಕು” ಎಂದು ಹೇಳಿದರು.
ವಿದೇಶಗಳಲ್ಲಿರುವ ಅಮೇಜಾನ್ ಎನ್ನುವಂತಹ ಒಂದು ದೊಡ್ಡ ಸಂಸ್ಥೆಯ ಕಾರ್ಮಿಕರೇ ಒಗ್ಗಾಟ್ಟಾಗುತ್ತಿದ್ದಾರೆ. ಹಾಗಾಗಿ ನಮ್ಮ ದೇಶದ ಕಾರ್ಮಿಕರೂ ಕೂಡ ಒಗ್ಗಾಟ್ಟಾಗಬೇಕು. ಈ ಮೂಲಕ ತಮ್ಮ ಹಕ್ಕುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು” ಎಂದರು.
“ನ್ಯೂಯಾರ್ಕ್‌ನಲ್ಲಿ ಆಯ್ಕೆಯಾಗಿರುವಂತಹ ಮೇಯರ್ ಅವರು ಜನಪರವಾದ ನೀತಿಗಳನ್ನು ಘೋಷಣೆ ಮಾಡಿದ ಕೂಡಲೇ, ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್ ಆ ದೇಶಕ್ಕೆ ಸೇರಬೇಕಾದ ಅನುದಾನವನ್ನು ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಇಂತಹ ನೀತಿಗಳನ್ನು ನಮ್ಮ ದೇಶದಲ್ಲಿಯೂ ಜಾರಿಗೊಳಿಸಲು ಹೊರಟಿದ್ದಾರೆ. ಹಲವು ಹೋರಾಟಗಳನ್ನು ಮಾಡುವ ಮೂಲಕ ವೇತನ ಹೆಚ್ಚಳ ಸೇರಿದಂತೆ ಹಲವು ಅನುಕೂಲಗಳನ್ನು ಪಡೆದಿದ್ದೇವೆ. ಆದರೂ ಕೂಡ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಮಿಕರ ಹಕ್ಕುಗಳನ್ನು ಕಸಿಯುತ್ತಿವೆ. ಉದ್ಯೋಗ ನೀಡುವುದನ್ನು ನಿಲ್ಲಿಸಿವೆ. ನಿರುದ್ಯೋಗಿಗಳನ್ನಾಗಿ ಮಾಡುತ್ತಿವೆ” ಎಂದು ಆರೋಪಿಸಿದರು.
“ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರ ಹಕ್ಕುಗಳನ್ನು ಹೇಗೆ ಕಸಿಯಲಾಗುತ್ತಿದೆ ಎಂಬುದನ್ನು ನಾವೆಲ್ಲರೂ ಕಂಡುಕೊಂಡಿದ್ದೇವೆ. ಇಂತಹ ಕಾರ್ಮಿಕ ವರ್ಗವನ್ನು ಒಡೆದಾಳುವ ನೀತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ನಡೆಸುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಹತ್ತಿಕ್ಕುವಂತಹ ಕೆಲವು ನಿರ್ಣಯಗಳನ್ನು ಅಂಗೀಕರಿಸಿದ್ದೇವೆ. ಜತೆಗೆ ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಎಡಪಂಥೀಯ ಸರ್ಕಾರ ಆಡಳಿತದಲ್ಲಿದ್ದು, ಅಲ್ಲಿಯ ನೀತಿಗಳನ್ನು ದೇಶಾದ್ಯಂತ ಜಾರಿಗೊಳಿಸಬೇಕು” ಎಂದು ಆಗ್ರಹಿಸಿದರು.
ಬಹಿರಂಗ ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಮೀನಾಕ್ಷಿ ಸುಂದರಂ ವಹಿಸಿದ್ದರು. ವೇದಿಕೆಯ ಮೇಲೆ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ಉಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ, ಜಿಲ್ಲಾಧ್ಯಕ್ಷ ಧರ್ಮೇಶ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ, KPRS ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಇದ್ದರು.
ಇದನ್ನೂ ನೋಡಿ : CITU ರಾಜ್ಯ ಸಮ್ಮೇಳನ | ಬಹಿರಂಗ ಸಭೆ | ಹಾಸನ
