ದಕ್ಷಿಣ ಕನ್ನಡ: ಯುವಜನ ಸಂಘಟನೆ ಡಿವೈಎಫ್‌ಐ ರಾಜ್ಯ ಸಮ್ಮೇಳನದ ಪ್ರಯುಕ್ತ ಉಳ್ಳಾಲ ತಾಳೂಕಿನ ಹರೇಕಳದಲ್ಲಿ ಅಳವಡಿಸಿದ್ದ ಟಿಪ್ಪು ಸುಲ್ತಾನ್ ಕಟೌಟ್ ಅನ್ನು ತೆರವುಗೊಳಿಸಬೇಕು ಎಂದು ಕೊಣಾಜೆ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಭಾನುವಾರ ನೋಟಿಸ್ ಹೊರಡಿಸಿದ್ದಾರೆ. ಅದಾಗ್ಯೂ, ಪೊಲೀಸರ ಸೂಚನೆಗೆ ಡಿವೈಎಫ್‌ಐ ಆಕ್ರೋಶ ವ್ಯಕ್ತಪಡಿಸಿದ್ದು, ಟಿಪ್ಪು ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಟಿಪ್ಪು ಸುಲ್ತಾನ್, ರಾಣಿ ಅಬ್ಬಕ್ಕ, ಕೊಟ್ಟಿಚೆನ್ನಯರ ಪ್ರತಿಮೆ ಸೇರಿದಂತೆ ಎಲ್ಲಾ ಆದರ್ಶ ಪುರುಷರ ಮತ್ತು ಮಹಾತ್ಮರ ಕಟೌಟ್ ಹಾಗೂ ಬ್ಯಾನರ್‌ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ” ಎಂದು ಹೇಳಿದೆ.
ಡಿವೈಎಫ್‌ಐ ರಾಜ್ಯ ಸಮ್ಮೇಳನ ಫೆಬ್ರವರಿ 25, 26, 27ರಂದು ಉಳ್ಳಾಲ ಸಮೀಪದ ಕಲ್ಲಾಪುವಿನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ಡಿವೈಎಫ್‌ಐ ಜಿಲ್ಲೆಯಾದ್ಯಂತ ಪ್ರಚಾರ ಕೈಗೊಡು ಬ್ಯಾನರ್ ಮತ್ತು ಕಟೌಟ್‌ಗಳನ್ನು ಅಳವಡಿಸಿದೆ. ಅದಾಗ್ಯೂ, ಹರೇಕಳದ ಟಿಪ್ಪು ಕಟೌಟ್ ಅನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. “ಕಾರ್ಡ್‌ಬೋರ್ಡ್‌ನಿಂದ ನಿರ್ಮಿಸಲಾದ 6 ಅಡಿ ಉದ್ದದ ಈ ಕಟೌಟನ್ನು ಅನುಮತಿಯಿಲ್ಲದೆ ಅಳವಡಿಸಲಾಗಿದೆ. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕಟೌಟ್ ತೆರವುಗೊಳಿಸಬೇಕು” ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ದ್ವಿದಳ ಧಾನ್ಯ, ಮೆಕ್ಕೆಜೋಳ, ಹತ್ತಿ ಬೆಳೆಗೆ 5 ವರ್ಷ ಕನಿಷ್ಠ ಬೆಂಬಲ ಬೆಲೆ – ಕೇಂದ್ರ ಸರ್ಕಾರದ ಪ್ರಸ್ತಾಪ
ಈ ಬಗ್ಗೆ ಜನಶಕ್ತಿ ಮೀಡಿಯಾಗೆ ಪ್ರತಿಕ್ರಿಯಿಸಿದ ಬಿಕೆ ಇಮ್ತಿಯಾಝ್, “ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಳವಡಿಸಲು ಪೊಲೀಸರ ಅನುಮತಿ ಬೇಕಿಲ್ಲ. ನಾವು ಸ್ಥಳೀಯ ಪಂಚಾಯತ್‌ನಿಂದ ಅನುಮತಿ ಪಡೆದೆ ಟಿಪ್ಪು ಕೌಟೌಟ್ ಅಳವಡಿಸಿದ್ದೇವೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಕೂಡಾ ಇಮ್ತಿಯಾಝ್ ಪ್ರತಿಕ್ರಿಯಿಸಿದ್ದು, “DYFI ಸಮ್ಮೇಳನದ ಪ್ರಯುಕ್ತ ನಾಡಿನ ಆದರ್ಶ ಪುರುಷರ, ಸ್ವಾತಂತ್ರ್ಯ ಸೇನಾನಿಗಳ, ಸಮಾಜ ಸುಧಾರಕರ ಕಟೌಟ್ , ಫ್ಲೆಕ್ಸ್ ಹಾಕಲಾಗಿದೆ. ಹರೇಕಳ ಕಚೇರಿ ಬಳಿ ಕಾರ್ಯಕರ್ತರು ಟೀಪು ಸುಲ್ತಾನ್ ಪ್ರತಿಮೆ ಅಳವಡಿಸಿದ್ದು ಕೊಣಾಜೆ ಪೊಲೀಸ್ ಠಾಣಾಧಿಕಾರಿ ಅನುಮತಿ ಇಲ್ಲದೆ ಅಳವಡಿಸಿರುವುದು ಕಟೌಟ್ ತೆರವುಗೊಳಿಸಲು ನೋಟಿಸ್ ನೀಡಿದ್ದಾರೆ” ಎಂದು ಹೇಳಿದ್ದಾರೆ.
“ಟೀಪು ಸುಲ್ತಾನ್ ಕಟೌಟ್ , ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಸರಕಾರ ನಿಷೇದ ಹಾಕಿದೆಯಂತೆ. ಯಾವ ಸರಕಾರ ನಿಷೇಧ ಹೇರಿದ್ದು? ಕರ್ನಾಟಕದಲ್ಲಿ ಸರಕಾರ ಬದಲಾಗಿದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬಿಜೆಪಿ ಸರಕಾರವೇ? ಕಾಂಗ್ರೆಸ್ ಸರಕಾರದ ಕಾಲದಲ್ಲೂ ಸಂಘಿ ಮನಸ್ಥಿತಿಯಲ್ಲೆ ಪೋಲೀಸರು ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಕಟೌಟ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಸುಲ್ತಾನ್ ಸೇರಿದಂತೆ ರಾಣಿ ಅಬ್ಬಕ್ಕ, ಕೊಟ್ಟಿಚೆನ್ನಯರ ಹಾಗೂ ಎಲ್ಲಾ ಆದರ್ಶರ, ಮಹಾತ್ಮರ ಕಟೌಟ್ , ಬ್ಯಾನರ್ ಗಳಿಗೆ ಡಿವೈಎಫ್ಐ ಕಾರ್ಯಕರ್ತರು ಕಾವಲು ನಿಂತು ಕಾಯುತ್ತಾರೆ” ಎಂದು ಪ್ರತಿಜ್ಞೆಗೈದಿದ್ದಾರೆ.
ವಿಡಿಯೊ ನೋಡಿ: ಸಾವರ್ಕರ್ ಕುರಿತು ಏಳು ಸುಳ್ಳುಗಳು – ಡಾ. ಮೀನಾಕ್ಷಿ ಬಾಳಿ ಮಾತುಗಳು