ನವದೆಹಲಿ: ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಆಳುವ ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಇತರ ರೈತ ಸಂಘಟನೆಯವರು ಪ್ರತಿಭಟನೆಗೆ ಕರೆ ನೀಡಿದ್ದು, ಇಂದಿನ ಪ್ರತಿಭಟನೆಗೂ ಮುನ್ನ ರೈತ ಸಂಘಟನೆಗಳು ತಮ್ಮ ಬಾಕಿ ಇರುವ ಬೇಡಿಕೆಗಳನ್ನು ಪೂರೈಸುವಂತೆ ಮತ್ತು ಲಖಿಂಪುರ ಕೇರಿ ಹತ್ಯೆಗೆ ನ್ಯಾಯ ನೀಡುವಂತೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ 75 ಗಂಟೆಗಳ ಧರಣಿಯನ್ನು ನಡೆಸಿತ್ತು.
ಕಳೆದ ಏಪ್ರಿಲ್ ತಿಂಗಳಿನಲ್ಲಿ, ಕೇಂದ್ರ ಸರ್ಕಾರದ ಭತ್ತ ಖರೀದಿ ನೀತಿಯನ್ನು ವಿರೋಧಿಸಿ ತೆಲಂಗಾಣ ರೈತರು ನವದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಭಾಗಿಯಾಗಿದ್ದ ರೈತ ನಾಯಕ ಮುಖಂಡ ರಾಕೇಶ್ ಟಿಕಾಯತ್ ದೇಶದಲ್ಲಿ ಮತ್ತೊಂದು ಪ್ರತಿಭಟನೆಯ ಅಗತ್ಯವಿದೆ ಎಂದು ಹೇಳಿದ್ದರು.
ರೈತರ ಸಮಸ್ಯೆಗಳಿಗಾಗಿ ಹೋರಾಡುವ ಪ್ರತಿಯೊಬ್ಬ ಮುಖ್ಯಮಂತ್ರಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ ಬೆಂಬಲಿಸುತ್ತದೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಲು ಬರುತ್ತಿದ್ದ ರಾಕೇಶ್ ಟಿಕಾಯತ್ ಅವರನ್ನು ಭಾನುವಾರ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ದೆಹಲಿಯಲ್ಲಿ ರೈತ ಮಹಾಪಂಚಾಯತ್ ಸಭೆಯಲ್ಲಿ ಕರ್ನಾಟಕದಿಂದಲೂ ರೈತರು ಭಾಗಿಯಾಗಿದ್ದು, ಕುರುಬೂರು ಶಾಂತಕುಮಾರ್ ನೇತೃತ್ವ ವಹಿಸಿದ್ದಾರೆ. ಬೆಂಬಲ ಬೆಲೆ ನೀತಿ ಜಾರಿಗೆ ತರುವಂತೆ ರೈತರ ಒತ್ತಾಯ ಮಾಡಿದ್ದಾರೆ. ಜಂತರ್ಮಂತರ್ನಲ್ಲಿ ನಡೆಯುತ್ತಿರುವ ಮಹಾಪಂಚಾಯತ್ಗೆ ದೇಶದ ವಿವಿಧ ರಾಜ್ಯಗಳಿಂದ ರೈತರು ಆಗಮಿಸುತ್ತಿದ್ದಾರೆ.
ಎಂಎಸ್ಪಿ ಜಾರಿ ಮಾಡುವುದಾಗಿ ಹೇಳಿ ಕೇಂದ್ರ ಸರ್ಕಾರ ಮೋಸ ಮಾಡುತ್ತಿದೆ. ಸಮಿತಿಯಲ್ಲಿ ತನ್ನದೇ ಜನರನ್ನು ನಿಯೋಜಿಸಿ ದೇಶದ ಜನತೆಯನ್ನು ಯಾಮಾರಿಸಲಾಗುತ್ತಿದೆ. ದೇಶದಲ್ಲಿನ ಕೋಟ್ಯಾಧಿಪತಿ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿಗಳು ಸಾಲಮನ್ನಾ ಮಾಡಲಾಗುತ್ತಿದೆ. ಅದರೊಂದಿಗೆ, ಬಾಕಿ ಇರುವ ತೆರಿಗೆಗಳನ್ನು ಕಡಿತ ಮಾಡಲಾಗುತ್ತಿದೆ. ಕಳೆದ 6-7 ವರ್ಷಗಳಲ್ಲಿ ಕಡಿತ ಮೊತ್ತ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಾಗಿದೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ ನೀಡಿದ ಎಲ್ಲಾ ಭರವಸೆಯಂತೆ ಈಡೇರಿಸಲು ಮುಂದಾಗಬೇಕು. ಅನ್ನದಾತರ ಸಾಲಮನ್ನಾ ಆಗಬೇಕು. ಇಲ್ಲದಿದ್ದರೆ ಈ ಹಿಂದೆ ನಡೆಸಿದಂತೆ ಪ್ರತಿಭಟನೆ ನಡೆಸಲಾಗುವುದು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಈಗಲೇ ಎಚ್ಚೆತ್ತುಕೊಳ್ಳಬೇಕು ಆಗ್ರಹಿಸಲಾಗುತ್ತಿದೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನೆಗೆ ಅನುಮತಿ ನೀಡಿಲ್ಲ ಎಂದು ದೆಹಲಿ ಪೊಲೀಸರು ತಿಳಿಸಿದ್ದು, ದೆಹಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಪ್ರತಿಭಟನೆಯನ್ನು ಆಯೋಜಿಸಲು ಅನುಮತಿಯನ್ನು ಕೋರಿದ್ದರು. ಆದರೆ, ಜನಸಂದಣಿಯಿಂದಾಗಿ ಅನುಮತಿ ನೀಡಲಾಗಿಲ್ಲ ಎಂದು ನವದೆಹಲಿಯ ಉಪ ಪೊಲೀಸ್ ಆಯುಕ್ತ ಅಮೃತ ಗುಗುಲೋತ್ ಮಾಧ್ಯಮಗಳಿಗೆ ತಿಳಿಸಿದರು.
ದಿಲ್ಲಿ-ಮೀರತ್ ಎಕ್ಸ್ಪ್ರೆಸ್ವೇಯ ಸಿಂಘು ಮತ್ತು ಗಾಜಿಪುರ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕಳೆದ ಬಾರಿಯಂತೆ ರೈತರು ಗಡಿಗಳಲ್ಲಿ ಬಿಡು ಬಿಡುವ ಭಯದಿಂದ ವಾಯುವ್ಯ ದೆಹಲಿ ಮತ್ತು ಗಾಜಿಪುರ ಗಡಿ, ಟಿಕ್ರಿ ಗಡಿ ಮತ್ತು ಸಿಂಘು ಗಡಿಯಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ, ಭಾರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪೊಲೀಸ್ ಸಿಬ್ಬಂದಿಗಳು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಎಲ್ಲಾ ವಾಹನಗಳ ಮೇಲೆ ತಪಾಸಣೆ ಮತ್ತು ನಿಗಾ ವಹಿಸುತ್ತಿದ್ದಾರೆ. ಹರಿಯಾಣ ಮತ್ತು ರಾಜಸ್ಥಾನದಿಂದ ಬರುವ ವಾಹನಗಳನ್ನೂ ನಿಲ್ಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕಿಸಾನ್ ಪಂಚಾಯತ್ ಮಂಡಿಸಿರುವ ಪ್ರಮುಖ ಒಂಬತ್ತು ಬೇಡಿಕೆಗಳು ಹೀಗಿವೆ;
- ಲಖೀಂಪುರ ಖೇರಿ “ಹತ್ಯಾಕಾಂಡ”ದಲ್ಲಿ ಮರಣ ಹೊಂದಿದ ರೈತರ ಕುಟುಂಬಗಳಿಗೆ ನ್ಯಾಯ ನೀಡಬೇಕು. ಕಳೆದ ಒಂಬತ್ತು ತಿಂಗಳಿನಿಂದ ಜೈಲಿನಲ್ಲಿರುವ ರೈತರ ಬಿಡುಗಡೆಯಾಗಬೇಕು. ಲಖೀಂಪುರ ಖೇರಿ ಹತ್ಯಾಕಾಂಡದ ಪ್ರಮುಖ ಅಪರಾಧಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿ ಬಂಧಿಸಬೇಕು.
- ʻʻಸಿ2+50% ಸೂತ್ರ” ದ ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ) ಖಾತರಿಪಡಿಸಬೇಕು. ಎಂಎಸ್ಪಿಯನ್ನು ಖಾತರಿಪಡಿಸಲು ಕಾನೂನು ಜಾರಿಗೆ ತೆರಬೇಕು.
- ದೇಶದ ಎಲ್ಲ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು.
- ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದಾಗಬೇಕು.
- ಕಬ್ಬಿನ ಬೆಂಬಲ ಬೆಲೆ ಹೆಚ್ಚಿಸಬೇಕು ಮತ್ತು ಕಬ್ಬಿನ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು.
- ಭಾರತವು ಡಬ್ಲ್ಯೂಟಿಓದಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು.
- ರೈತರ ಚಳವಳಿ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು.
- ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರ ಬಾಕಿ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಅಗ್ನಿಪಥ ಯೋಜನೆ ಹಿಂಪಡೆಯಬೇಕು.