ಕೊಲ್ಕತ್ತಾ: ಇತ್ತೀಚಿಗೆ ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಬಾಲಿವುಡ್ ನಟ ಪರೇಶ್ ರಾವಲ್ ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನೀಡಲಾಗುವ ಇಂತಹ ಹೇಳಿಕೆಗಳು ಸಮುದಾಯದ ಜನರ ಸಾಮಾರಸ್ಯವನ್ನು ಹಾಳುಮಾಡುವಂತಹ ಕ್ರಮ. ಹಾಗಾಗಿ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಪಕ್ಷದ ಮುಖಂಡರು ದೂರು ದಾಖಲಿಸಿದ್ದಾರೆ.
ʻʻಸಾರ್ವಜನಿಕವಾಗಿ ವಿವೇಕವಿಲ್ಲದೆ ಆಡುವ ಮಾತಗಳಿಂದ ಗಲಭೆಗೆ ಪ್ರಚೋದನೆ ನೀಡಿದಂತಾಗುತ್ತದೆ. ದೇಶದಾದ್ಯಂತ ಬಂಗಾಳಿ ಸಮುದಾಯ ಮತ್ತು ಇತರ ಸಮುದಾಯಗಳ ನಡುವಿನ ಸಾಮರಸ್ಯವನ್ನು ಹಾಳು ಮಾಡುವ ಮಾತುಗಳನ್ನು ಪರೇಶ್ ರಾವಲ್ ಆಡಿದ್ದಾರೆ. ಹೆಚ್ಚಿನ ಸಂಖ್ಯೆಯ ಬಂಗಾಳಿಗಳು ಪಶ್ಚಿಮ ಬಂಗಾಳ ರಾಜ್ಯದ ಹೊರಗೆ ವಾಸಿಸುತ್ತಿರುವುದರಿಂದ, ರಾವಲ್ ಮಾಡಿದ ಕೆಟ್ಟ ಹೇಳಿಕೆಗಳಿಂದಾಗಿ ಅವರು ಪೂರ್ವಾಗ್ರಹ ಪೀಡಿತರಾಗುವ ಸಾಧ್ಯತೆಯಿದೆ” ಎಂದು ಮಾಜಿ ಸಂಸದರು ಹಾಗೂ ಸಿಪಿಐ(ಎಂ) ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಹೇಳಿದ್ದಾರೆ.
ಬಂಗಾಳಿ ಸಮುದಾಯ ಮತ್ತಿತರ ಸಮುದಾಯದ ನಡುವಣ ಸೌಹಾರ್ದತೆ ಹಾಳು ಮತ್ತು ಹಿಂಸಾಚಾರ ಪ್ರಚೋದನೆ ಹೇಳಿಕೆ ಆರೋಪದ ಹಿನ್ನೆಲೆಯಲ್ಲಿ ಬಾಲಿವುಡ್ ನಟ ಪರೇಶ್ ರಾವಲ್ ವಿರುದ್ಧ ಸಿಪಿಐ(ಎಂ) ಮುಖಂಡ ಮೊಹಮ್ಮದ್ ಸಲೀಂ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪರೇಶ್ ರಾವಲ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಂಗಾಳಿಗರ ವಿರುದ್ಧ ಭಾವನೆಗಳನ್ನು ಪ್ರಚೋದಿಸುವಂತಿವೆ. ದೇಶದ ಇತರ ಭಾಗಗಳಲ್ಲಿ ವಾಸಿಸುತ್ತಿರುವ ಬಂಗಾಳಿ ಜನರ ಮೇಲೆ ಪರಿಣಾಮ ಬೀರಬಹುದು ಎಂದು ಮೊಹಮ್ಮದ್ ಸಲೀಂ ಟಾರಟೊಲಾ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಪರೇಶ್ ರಾವಲ್ ತಮ್ಮ ಭಾಷಣದಲ್ಲಿ “ಗ್ಯಾಸ್ ಸಿಲಿಂಡರ್ ದುಬಾರಿಯಾಗಿವೆ, ಆದರೆ ಕಡಿಮೆ ಆಗುತ್ತೆ. ಜನರಿಗೆ ಉದ್ಯೋಗ ಸಿಗುತ್ತದೆ. ಆದರೆ ದೆಹಲಿಯಲ್ಲಿರುವಂತೆ ರೋಹಿಂಗ್ಯಾ ವಲಸಿಗರು ಮತ್ತು ಬಾಂಗ್ಲಾದೇಶಿಗಳು ನಿಮ್ಮ ಸುತ್ತಲೂ ವಾಸಿಸಲು ಪ್ರಾರಂಭಿಸಿದರೆ ಏನಾಗುತ್ತದೆ? ಗ್ಯಾಸ್ ಸಿಲಿಂಡರ್‌ಗಳೊಂದಿಗೆ ನೀವು ಏನು ಮಾಡುತ್ತೀರಿ? ಬೆಂಗಾಲಿಗಳಿಗೆ ಮೀನು ಬೇಯಿಸುವುದೇ?” ಎಂದು ಹೇಳಿದ್ದರು.
ತಮ್ಮ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿ ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿದ್ದಂತೆಯೇ ನಟ ಪರೇಶ್ ರಾವಲ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಬಂಗಾಳಿಗರ ಕ್ಷಮೆಯಾಚಿಸಿದ್ದಾರೆ.