ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಅಂಬಲಿಹಾಳ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ದಲಿತ ಮಹಿಳೆಯರು ಆಂಜನೇಯ ದೇವಾಲಯಕ್ಕೆ ಪ್ರವೇಶ ಮಾಡಿದ್ದಾರೆ. 150ಕ್ಕೂ ಹೆಚ್ಚು ಪೊಲೀಸರು ಭದ್ರತೆಯಲ್ಲಿದ್ದು, 5 ಮಂದಿ ದಲಿತ ಮಹಿಳೆಯರು ದೇವಾಲಯ ಪ್ರವೇಶಿಸಿದ್ದಾರೆ.
ಮೂಲತಃ ಅಂಬಲಿಹಾಳ ಗ್ರಾಮದ ದಲಿತ ಮಹಿಳೆಯರು ಹಲವು ವರ್ಷಗಳಿಂದ ಮಾವಿನಹಾಳ ಗ್ರಾಮದಲ್ಲಿ ವಾಸವಾಗಿದ್ದರು. ಆಂಜನೇಯ ಭಕ್ತರೂ ಆಗಿದ್ದ ಮಹಿಳೆಯರು, ಇತ್ತೀಚೆಗೆ ಆಂಜನೇಯ ಗುಡಿಗೆ ಪ್ರವೇಶ ಮಾಡಿ ಜಾತ್ರೆ ಮಾಡುತ್ತೇವೆ ಎಂದಿದ್ದರು. ಇದಕ್ಕೆ ಅಂಬಲಿಹಾಳ ಗ್ರಾಮದ ಮೇಲ್ವರ್ಗದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು.
ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಅಂಬಲಿಹಾಳ ಗ್ರಾಮವು ಎಸ್‌ಪಿ ಡಾ. ಸಿಬಿ ವೇದಮೂರ್ತಿ ಹಾಗೂ ಸಹಾಯಕ ಆಯುಕ್ತ ಶಾಲಂ ಹುಸೇನ್ ನೇತೃತ್ವದಲ್ಲಿ ಮಹಿಳೆಯರು ಪೊಲೀಸ್ ವಾಹನದಲ್ಲಿ ದೇವಾಯಲದವರೆಗೂ ಆಗಮಿಸಿದರು. ಬಳಿಕ ಆಂಜನೇಯ ದೇಗುಲ ಪ್ರವೇಶಿಸಿದ ಮಹಿಳೆಯರು ಪೂಜೆ ಸಲ್ಲಿಸಿದರು. ಮತ್ತದೇ ಜೀಪಿನಲ್ಲಿ ದಲಿತ ಮಹಿಳೆಯರನ್ನು ಊರಿಗೆ ಕರೆದೊಯ್ದು ಬಿಡಲಾಯಿತು.
ಶನಿವಾರ(ಮೇ 28) ಅಮಾವಾಸ್ಯೆ ಹಾಗೂ ವಿವಿಧ ಕಾರ್ಯಕ್ರಮದ ವೇಳೆ ದೇಗುಲದಲ್ಲಿ ದಲಿತ ಮಹಿಳೆಯರು ದರ್ಶನ ಪಡೆಯಲು ಮುಂದಾಗಿದ್ದರು. ಆದರೆ ಇದಕ್ಕೆ ಮೇಲ್ವರ್ಗದ ಜನರು ವಿರೋಧ ಮಾಡಿದ ಹಿನ್ನೆಲೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಭಾನುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ದೇಗುಲ ಪ್ರವೇಶಿಸಿದ್ದಾರೆ.
ದಲಿತ ಮಹಿಳೆಯರು ದೇಗುಲ ಪ್ರವೇಶ ಮಾಡಿದ ಹಿನ್ನೆಲೆ, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ್ದ ಕೆಂಡದಂತಾಗಿತ್ತು. ಮೇಲ್ವರ್ಗದ ಜನರು ಗಲಾಟೆ ಮಾಡುವ ಸಾಧ್ಯತೆ ಇದ್ದು, ಅಂಬಲಿಹಾಳ ಹಾಗೂ ಹೂವಿನಹಳ್ಳಿ ಗ್ರಾಮಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸುಮಾರು 150ಕ್ಕೂ ಹೆಚ್ಚು ಜನ ಪೊಲೀಸರು, 10 ಪಿಎಎಸ್‌ಐಗಳು, 7 ಜನ ಸಿಪಿಐಗಳು, ಕೆಎಸ್‌ಆರ್‌ಪಿ ಪಡೆ, ಒಬ್ಬರು ಡಿವೈಎಸ್ಪಿ ನೇತೃತ್ವದ ಶಸ್ತ್ರಧಾರಿ ತಂಡ ನಿಯೋಜಿತಗೊಂಡಿತ್ತು. ಗ್ರಾಮದ ಕೆಲವು ಮನೆಗಳ ಮೇಲೆ ಕಣ್ಗಾವಲು ಇಡಲು ಪೊಲೀಸ ಪಡೆ ನಿಯೋಜಿತಗೊಂಡಿತ್ತು.
ದಶಕಗಳ ಹಿಂದೆ ಅಂಬಲಿಹಾಳದಲ್ಲಿ ವಾಸವಿದ್ದ ದಲಿತರು ಪಕ್ಕದ ಹೂವಿನಹಳ್ಳಿಗೆ ತೆರಳಿ ಅಲ್ಲೇ ವಾಸವಾಗಿದ್ದರು. ಎಂದಿನ ಸಂಪ್ರದಾಯದಂತೆ, ಅಂಬಲಿಹಾಳದ ದೇವಸ್ಥಾನಕ್ಕೆ ಪೂಜೆಗೆ ಆಗಮಿಸುತ್ತಿದ್ದರಾದರೂ ದೇವಸ್ಥಾನದ ಹೊರಗಡೆಯೇ ಪೂಜೆ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಆಂಜನೇಯ ದೇಗುಲದೊಳಗೇಯೇ ಪೂಜೆ ನಡೆಸಲು ಒಂದು ಗುಂಪು ಇತ್ತೀಚೆಗೆ ಬೇಡಿಕೆ ಇಟ್ಟಾಗ ಅಂಬಲಿಹಾಳ ಗ್ರಾಮಸ್ಥರು ನಿರಾಕರಿಸಿದ್ದರು ಎನ್ನಲಾಗಿದೆ.