ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಅನುವಾದ ಪ್ರಶಸ್ತಿಗೆ ಹಿರಿಯ ಕವಿ ಸಿದ್ದಲಿಂಗ ಪಟ್ಟಣಶೆಟ್ಟಿ ಅವರ `ವಿದಿಶಾ ಪ್ರಹಸನ’ ಕೃತಿ ಆಯ್ಕೆಯಾಗಿದೆ.
ಈ ಕೃತಿಯು ಕಾಳಿದಾಸನ `ಮಾಲವಿಕಾಗ್ನಿಮಿತ್ರಮ್’ನ ರಂಗಾನುವಾದ. ಅಕಾಡೆಮಿ ಅಧ್ಯಕ್ಷ ಮಾಧವ ಕೌಶಿಕ್ ನೇತೃತ್ವದ ಕಾರ್ಯಕಾರಿ ಸಮಿತಿಯು ಶುಕ್ರವಾರ ಸಭೆ ಸೇರಿ 2024ನೇ ಸಾಲಿನ ಅನುವಾದ ಪ್ರಶಸ್ತಿ ಪಟ್ಟಿಗೆ ಅನುಮೋದನೆ ನೀಡಿತು. 21 ಭಾಷೆಗಳ ಲೇಖಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇದನ್ನು ಓದಿ :-ಮುಂಬೈ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ರೈಲ್ವೆ ನಿಲ್ದಾಣದಲ್ಲಿ ಎಸೆದು ಹೋದ ಪಾಪಿಗಳು
ಕನ್ನಡ ವಿಭಾಗದಲ್ಲಿ ಲೇಖಕರಾದ ಡಾ.ಧರಣೇಂದ್ರ ಕುರಕುರಿ, ಹೆಚ್.ಎಲ್.ಪುಷ್ಪಾ ಹಾಗೂ ಡಾ.ನಾ.ದಾಮೋದರ ಶೆಟ್ಟಿ ಜ್ಯೂರಿಗಳಾಗಿದ್ದರು. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಈ ವರ್ಷಾಂತ್ಯದೊಳಗೆ ನಡೆಯುವ ವಿಶೇಷ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರ `ಯಾನ’ ಕಾದಂಬರಿಯನ್ನು ಅನುವಾದಿಸಿದ ಕೆ.ವಿ.ಕುಮಾರನ್ ಅವರಿಗೆ ಮಲಯಾಳಂ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಲೇಖಕಿ ಸುಧಾಮೂರ್ತಿ ಅವರ `ಡಾಲರ್ ಬಹು’ ಹಿಂದಿ ಕಾದಂಬರಿಯನ್ನು ಭಾಷಾಂತರಿಸಿದ ಲೇಖಕಿ ಶೋಭಾ ಲಾಲ್‌ಚಂದಾನಿ ಅವರಿಗೆ ಸಿಂಧಿ ಭಾಷಾ ವಿಭಾಗದಲ್ಲಿ ಪ್ರಶಸ್ತಿ ದೊರಕಿದೆ.