ಬೆಂಗಳೂರು: ಹದಿನೇಳು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನಕ್ಕೆ ಜಾಮೀನುರಹಿತ ವಾರಂಟ್ ಹೊರಡಿಸಲು ನ್ಯಾಯಾಲಯ ಆದೇಶ ಹೊರಡಿಸಿದ ಬೆನ್ನಲ್ಲೇ, ಆರೋಪಿಯ ಬಂಧನಕ್ಕೆ ಸಿಐಡಿ ತೀವ್ರ ಶೋಧ ನಡೆಸಿದೆ.
ಯಡಿಯೂರಪ್ಪ ಅವರಿಗೆ ಈ ಪ್ರಕರಣದಲ್ಲಿ ಬಂಧನದ ನೋಟಿಸ್ ನೀಡಿದ್ದ ಸಿಐಡಿ, ಜೂ.12 ರಂದು ಹಾಜರಾಗುವಂತೆ ಸೂಚಿಸಿತ್ತು. ಜೂನ್ 17ರಂದು ಹಾಜರಾಗುವುದಾಗಿ ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ದ ಯಡಿಯೂರಪ್ಪ ಕೋರ್ಟ್‌ಗೆ ಗೈರಾಗಿದ್ದರು.
ಮೂರು ತಿಂಗಳಾದರು ಬಂಧನ ಪ್ರಕ್ರಿಯೆ ನಡೆದಿಲ್ಲ, ಈ ಪ್ರಕರಣದ ಕುರಿತು ಪೊಲೀಸ್ ಯಾವುದೇ ನೋಟಿಸ್ ನೀಡಿಲ್ಲ ಎಂದು ಸಂತ್ರಸ್ತೆಯ ಸಹೋದರ ಹೈಕೋರ್ಟ್ ಗೆ ಬುಧವಾರ ಅರ್ಜಿ ಸಲ್ಲಿಸಿದ್ದರು.
ಮಹಿಳೆಯ ಸಹೋದರ ಸಲ್ಲಿಸಿದ್ದ ಅರ್ಜಿಯಲ್ಲಿ, ಆರೋಪಿ ಯಡಿಯೂರಪ್ಪಗೆ ಯಾವುದೇ ನೋಟಿಸ್ ನೀಡಿಲ್ಲ, ಅವರ ನಿವಾಸದ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ ಅಥವಾ ಪೋಕ್ಸೋ ಕಾಯ್ದೆಯ ಸೆಕ್ಷನ್ 41 ಎಅಡಿಯಲ್ಲಿ ಬಿಜೆಪಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ದೂರುದಾರರು ತಿಳಿಸಿದ್ದರು. ಫೋಕ್ಸೋ ಪ್ರಕರಣದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಆದರೆ ಮೂರು ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಇತ್ತ ಪ್ರಕರಣ ತೀವ್ರತೆ ಪಡೆದುಕೊಂಡ ನಂತರ, ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ‘ದೆಹಲಿಯತ್ತ ಯಡಿಯೂರಪ್ಪ ಪ್ರಯಾಣ ಬೆಳೆಸಿದ್ದು ಗೊತ್ತಾಗುತ್ತಿದ್ದಂತೆಯೇ ಸಿಐಡಿ ಅಧಿಕಾರಿಗಳ ತಂಡ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ದೆಹಲಿಯಲ್ಲಿರುವ ತಮ್ಮ ಮಗ, ಸಂಸದ ಬಿ.ವೈ. ರಾಘವೇಂದ್ರ ಮನೆಯಲ್ಲಿದ್ದ ಯಡಿಯೂರಪ್ಪ, ಗುರುವಾರ ಬೆಳಿಗ್ಗೆಯೇ ಅಲ್ಲಿಂದ ಹೊರಟು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿಂದ ಹೊರಟವರು ನೆರೆ ರಾಜ್ಯಗಳಿಗೆ ಹೋಗಿದ್ದಾರೆ ಎಂಬ ಮಾಹಿತಿ ಇದೆ’ ಎಂದು ತಿಳಿದುಬಂದಿದೆ.
ಯಡಿಯೂರಪ್ಪ ವಿರುದ್ಧ ಜಾಮೀನುರಹಿತ ಬಂಧನದ ವಾರಂಟ್ ಹೊರಬೀಳುತ್ತಿದ್ದಂತೆ ಎಸ್‌ಪಿ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದ ಪೊಲೀಸರ ತಂಡ ಚುರುಕಾಗಿದೆ. ಕರ್ನಾಟಕ, ದೆಹಲಿ ಹಾಗೂ ಯಡಿಯೂರಪ್ಪ ಹೋಗಿರಬಹುದಾದ ಸ್ಥಳಗಳ ಕುರಿತು ಮಾಹಿತಿಗಳನ್ನು ಕಲೆ ಹಾಕುತ್ತಿರುವ ತಂಡ, ಬಂಧನಕ್ಕೆ ಶೋಧ ನಡೆಸಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.