- ಟೆಕ್ನಿಷಿಯನ್, ಆಶಾಕಾರ್ಯಕರ್ತೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು: ವಿವಿ ಪುರಂನ ಪೊಬ್ಬತಿ ಹೆರಿಗೆ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಲ್ಯಾಬ್ ಟೆಕ್ನಿಷಿಯನ್‌ನನ್ನು ವಜಾಗೊಳಿಸಿದ್ದು, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಆಸ್ಪತ್ರೆಯಲ್ಲಿ ಕೊರೋನ ನೆಗೆಟಿವ್ ಎಂದು ಸುಳ್ಳು ವರದಿ ನೀಡುತ್ತಿರುವುದು ಮಾಧ್ಯಮದ ವರದಿ ಮೂಲಕ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿನ ಜಂಟಿ ಆಯುಕ್ತರು ಹಾಗೂ ಆರೋಗ್ಯಾಧಿಕಾರಿಗಳ ತಂಡ ಆಸ್ಪತ್ರೆಗೆ ತೆರಳಿ ಪರಿಶೀಲಿಸುವಂತೆ ಸೂಚಿಸಿದ್ದೆ.
ಕೋವಿಡ್ ನೆಗೆಟಿವ್ ಎಂದು ಸುಳ್ಳು ವರದಿ ನೀಡುತ್ತಿದ್ದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲ್ಯಾಬ್ ಟೆಕ್ನೀಷಿಯನ್ ಹಾಗೂ ಆಶಾ ಕಾರ್ಯಕರ್ತೆ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು .
ಅಷ್ಟೆ ಅಲ್ಲದೆ, ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಹಾಗೂ ಬಿಬಿಎಂಪಿಯಲ್ಲಿರುವ ನ್ಯೂನತೆ ಸರಿಪಡಿಸಲು ಕಠಿಣ ಕಾನೂನು ತರಲಾಗುವುದು. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕೆಳ ಹಂತದ ಆರೋಗ್ಯ ಅಧಿಕಾರಿಗಳು ಈ ರೀತಿ ಕೆಲಸ ಮಾಡಿರುವುದು ವೈದ್ಯನಾಗಿ ನೋವಾಗಿದೆ. ಅನೈತಿಕ ವಾಗಿ ಹಣ ಮಾಡುವುದು ವೈದ್ಯ ವೃತ್ತಿಗೆ ಅನ್ಯಾಯ ಮಾಡಿದಂತೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂಥ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.