ನವದೆಹಲಿ : ಐದು ರಾಜ್ಯಗಳಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆಗಳು ಜಾರಿಯಲ್ಲಿರುವುದರಿಂದ ಕೋವಿಡ್-19 ಲಸಿಕೆ ಪ್ರಮಾಣ ಪತ್ರದಲ್ಲಿ ಪ್ರಧಾನಮಂತ್ರಿಯ ಭಾವಚಿತ್ರ ಸಹಿತ, ಹೆಸರು ಹಾಗೂ ಸಂದೇಶ ಇದ್ದು ಅದನ್ನು ಕೂಡಲೇ ತೆಗೆಯುವಂತೆ ಕೇಂದ್ರ ಚುನಾವಣಾ ಆಯೋಗ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ, ಪುದುಚೇರಿ ರಾಜ್ಯಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಸರಕಾರದ ವಿವಿಧ ಯೋಜನೆಗಳಲ್ಲಿ ಪ್ರಧಾನಿ ನರೇಂದ್ರಮೋದಿ ಭಾವಚಿತ್ರ ಇದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.
ಟಿಎಂಸಿ ಸಂದ ಡೆರಿಕ್ ಓಬ್ರಿಯೆನ್ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ರವರಿಗೆ ಲಿಖಿತ ಪತ್ರವನ್ನು ಬರೆದು ಪ್ರಧಾನಮಂತ್ರಿಗಳು ತಮ್ಮ ಹೆಸರನ್ನು ಪ್ರಚಾರ ಮಾಡುವುದು ಮತ್ತು ಸರ್ಕಾರದ ಲಸಿಕೆಯ ಪ್ರಚಾರದಲ್ಲೂ ಭಾವಚಿತ್ರ ಕೂಡಲೇ ತೆಗೆಯಲು ಕ್ರಮಕೈಗೊಳ್ಳಲು ತಿಳಿಸಿದ್ದಾರೆ.
ಈ ಮೊದಲು ಚುನಾವಣೆ ನಡೆಯುವ ಎಲ್ಲಾ ರಾಜ್ಯಗಳಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಿರುವ ಮೋದಿ ಭಾವಚಿತ್ರ ಸಹಿತ ಇರುವ ಜಾಹೀರಾತು ಫಲಕಗಳನ್ನು ಸಹ 72 ಗಂಟೆಗಳಲ್ಲಿ ತೆಗೆಯಬೇಕೆಂದು ಆದೇಶ ನೀಡಿತ್ತು. ಈಗ ಆರೋಗ್ಯ ಸಚಿವಾಲಯಕ್ಕೂ ಸಹ ಆದೇಶ ನೀಡಿದೆ.