ನವದೆಹಲಿ: ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ ಹಾಜರಾತಿ ಕೇವಲ 0.001% ಎಂದು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರು ಆರೋಪಿಸಿದ್ದಾರೆ. ಸರಕಾರ ಕರೆದಿರುವ ಸಂಸತ್ತಿನ ವಿಶೇಷ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಅವರು ಮಾತನಾಡಿದ ವಿಡಿಯೊ ಇದೀಗ ವೈರಲ್ ಆಗಿದ್ದು, ಅದರಲ್ಲಿ ಅವರು “ಕೇಂದ್ರ ಸರ್ಕಾರವು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವ ತತ್ವಗಳನ್ನು ಪಾಲಿಸುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯ ಉಪಸ್ಥಿತಿ, ಪ್ರಜಾಪ್ರಭುತ್ವದ ಮೌಲ್ಯಗಳ ಸವೆತ ಮತ್ತು ಸಾಂವಿಧಾನದ ಪ್ರಮುಖ ತತ್ವಗಳ ಬದಲಾಗುತ್ತಿರುವ ವ್ಯಾಖ್ಯಾನಗಳ ಬಗ್ಗೆ ಮಾತನಾಡಿದ ಅವರು ರಾಜ್ಯ ಸಭೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ಪ್ರಧಾನ ಮಂತ್ರಿಯ ಹಾಜರಾತಿಯನ್ನು ಪ್ರಶ್ನಿಸುವ ಮೂಲಕ ಮಾತು ಪ್ರಾರಂಭಿಸಿದ ಜಾನ್ ಬ್ರಿಟಾಸ್ ಅವರು, ಪ್ರಧಾನ ಮಂತ್ರಿಯ ಉಪಸ್ಥಿತಿಯು ಸಂಸತ್ತಿನ ಅಧಿವೇಶನಗಳಲ್ಲಿ ಕೇವಲ 0.001% ಅಷ್ಟೆ ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ನಕಲಿ ಅಕೌಂಟ್ ಆಧಾರದಲ್ಲಿ ಕೆ ಎಲ್ ರಾಹುಲ್ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಪಬ್ಲಿಕ್ ಟಿವಿ!
ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒಳಗೊಂಡಿರುವ ಭಾರತೀಯ ಸಂವಿಧಾನದ ಪೀಠಿಕೆಯಲ್ಲಿ ವಿವರಿಸಿರುವ ಆದರ್ಶಗಳನ್ನು ಪರಿಶೀಲಿಸಿದ ಅವರು, ದೇಶದ ನ್ಯಾಯದ ಪರಿಕಲ್ಪನೆಯು “ಬುಲ್ಡೋಜರ್ ಯುಗ” ಆಗಿ ರೂಪಾಂತರಗೊಂಡಂತೆ ತೋರುತ್ತಿದೆ ಎಂದು ಸೂಚಿಸಿದ್ದಾರೆ. ಸುತ್ತಲೂ ಅಸಮಾನತೆ ಹೆಚ್ಚುತ್ತಿದೆ ಎಂದ ಅವರು, ದೇಶದ್ರೋಹ ಕಾನೂನು ಮತ್ತು ಯುಎಪಿಎ ಕಾಯಿದೆಯ ಬಳಕೆಯನ್ನು ಅವರು ಟೀಕಿಸಿದ್ದಾರೆ. ಸರ್ಕಾರವು ಸಂವಿಧಾನದ ಮೂಲ ಆದರ್ಶಗಳಿಂದ ಹೊರನಡೆಯುತ್ತಿದೆ ಎಂದು ತಿಳಿಸಿದ್ದಾರೆ
ಸಂವಿಧಾನದ ಸಮಾನತೆಯ ತತ್ವವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಮತ್ತು ಮಾಧ್ಯಮ ಸೇರಿದಂತೆ ಭಾರತೀಯ ಸಮಾಜದ ವಿವಿಧ ಅಂಶಗಳಲ್ಲಿ ಅಲ್ಪಸಂಖ್ಯಾತರು, ಅದರಲ್ಲೂ ವಿಶೇಷವಾಗಿ ಮುಸ್ಲಿಮರ ಕಡಿಮೆ ಪ್ರಾತಿನಿಧ್ಯವನ್ನು ಅವರು ಎತ್ತಿ ತೋರಿಸಿದ್ದಾರೆ. ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿನ ವೈವಿಧ್ಯಮಯ ಪ್ರಾತಿನಿಧ್ಯದ ಬಗ್ಗೆ ಉಲ್ಲೇಖಿಸಿದ ಅವರು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಜಾನ್ ಬ್ರಿಟ್ಟಾಸ್ ಒತ್ತಿ ಹೇಳಿದ್ದಾರೆ.
ಪ್ರಜಾಪ್ರಭುತ್ವವೆಂದರೆ ಬಹುಸಂಖ್ಯಾತರ ಕಾನೂನಲ್ಲ, ಬದಲಾಗಿ ಅಲ್ಪಸಂಖ್ಯಾತರ ರಕ್ಷಣೆಯಾಗಿದೆ ಎಂಬ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿದ ಜಾನ್ ಬ್ರಿಟ್ಟಾಸ್, “ಕಾರ್ಯಾಂಗದಲ್ಲಿ, ಶಾಸಕಾಂಗದಲ್ಲಿ ಮತ್ತು ನ್ಯಾಯಾಂಗದಲ್ಲಿ ಹಾಗೂ ಮಾಧ್ಯಮಗಳಲ್ಲಿ 20 ಕೋಟಿ ಮುಸ್ಲಿಮರ ಪ್ರಾತಿನಿಧ್ಯವೇನು” ಎಂದು ಪ್ರಶ್ನಿಸಿದ್ದಾರೆ. ಕೇರಳದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯಸ್ ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹಾಗೂ ದೆಹಲಿಯ ಸಂಸತ್ತಿನ ಕಾರ್ಯಾಂಗದಲ್ಲಿ ಅಲ್ಪಸಂಖ್ಯಾತರ ಪರಿಸ್ಥಿತಿ ಏನು ಎಂದು ನಿಮಗೆ ತಿಳಿದಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಮನಗರ : ಚುನಾವಣಾಧಿಕಾರಿ ಕಾರು ಅಡ್ಡಗಟ್ಟಿ ಬ್ಯಾಲೆಟ್ ಪೇಪರ್, ಲ್ಯಾಪ್‌ಟಾಪ್ ದೋಚಿದ ದುಷ್ಕರ್ಮಿಗಳು
ಭಾರತೀಯರಿಗಿಂತ ಮೊಘಲರ ಬಗ್ಗೆ ಚರ್ಚಿಸುವ ಸರ್ಕಾರ, ಮೊಘಲ್ ದೊರೆಗಳಾದ ಅಕ್ಬರ್ ಅಥವಾ ಔರಂಗಜೇಬನ ಆಳ್ವಿಕೆಯಲ್ಲಿ 50% ಕ್ಕಿಂತ ಹೆಚ್ಚು ಮಂತ್ರಿಗಳು ಹಿಂದೂಗಳಾಗಿದ್ದರು. ಆದರೆ ಈ ಸರ್ಕಾರದಲ್ಲಿ ಯಾರಾದರೂ ಅಲ್ಪಸಂಖ್ಯಾತ ಮಂತ್ರಿಳಿದ್ದಾರೆಯೆ? ಎಂದು ಜಾನ್ ಬ್ರಿಟ್ಟಾಸ್ ಕೇಳಿದ್ದಾರೆ. ದೇಶದ ಮೊದಲ ಪ್ರಧಾನಿ ನೆಹರೂ ಅವರ ಮೊದಲ ಸಚಿವ ಸಂಪುಟವು ಮಾದರಿ ಸರ್ಕಾರವಾಗಿದ್ದು, ಮುಸ್ಲಿಮರು, ಪಾರ್ಸಿಗಳು, ಸಿಖ್ಖರು, ಎಲ್ಲರಿಗೂ ಪ್ರಾತಿನಿಧ್ಯ ನೀಡಿದ್ದರು. ಜೊತೆಗೆ ಆರೆಸ್ಸೆಸ್‌ನ ಶ್ಯಾಮ ಪ್ರಸಾದ್ ಮುಖರ್ಜಿ ಅವರೂ ಕೂಡಾ ಇದರಲ್ಲಿ ಇದ್ದರು ಎಂದು ಅವರು ನೆನಪಿಸಿದ್ದಾರೆ.
ಈಗಿನ ಸರ್ಕಾರಕ್ಕೆ ಭಾತೃತ್ವ ಎಂದರೆ “ಪಾಕಿಸ್ತಾನಕ್ಕೆ ಹೋಗು” ಎಂಬ ಪದವಾಗಿದೆ ಎಂದು ವ್ಯಂಗ್ಯವಾಡಿದ ಅವರು, ಎಲ್ಲಾ ಭಾರತೀಯರಿಗೂ ದೇಶಪ್ರೇಮವಿದೆ, ಬಹುಶಃ ಸರ್ಕಾರಕ್ಕಿಂಲೂ ಹೆಚ್ಚಿದೆ ಎಂದು ಸಮರ್ಥಿಸಿಕೊಂಡರು. ತಲಾ ಜಿಡಿಪಿ, ಮಾನವ ಅಭಿವೃದ್ಧಿ ಸೂಚ್ಯಂಕ ಮತ್ತು ಹಸಿವಿನ ಸೂಚ್ಯಂಕಗಳಂತಹ ಜಾಗತಿಕ ಸೂಚ್ಯಂಕಗಳಲ್ಲಿ ಭಾರತ ಕೆಳಗಿನ ಮಟ್ಟದಲ್ಲಿದೆ ಎಂದು ಬ್ರಿಟ್ಟಾಸ್ ಅವರು ನೆನಪಿಸಿದ್ದಾರೆ.
ಸಂವಿಧಾನದ ಪ್ರಮುಖ ಮೌಲ್ಯಗಳ ವಿಕಾಸಗೊಳ್ಳುತ್ತಿರುವ ವ್ಯಾಖ್ಯಾನಗಳನ್ನು ಪ್ರಶ್ನಿಸಿದ ಜಾನ್ ಬ್ರಿಟ್ಟಾಸ್, “ಅಮೆರಿಕಾದ ಅಧ್ಯಕ್ಷರುಗಳಾದ ಟ್ರಂಪ್ ಮತ್ತು ಬೈಡನ್‌ಗಳಂತಹ ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದು ನಿಜವಾದ ಸಾರ್ವಭೌಮತ್ವವಲ್ಲ” ಎಂದು ಹೇಳಿದ್ದಾರೆ. ನೀತಿ ನಿರೂಪಣೆಯಲ್ಲಿ ಅದಾನಿಯಂತಹ ಕಾರ್ಪೊರೇಟ್ ದೈತ್ಯರ ಪ್ರಭಾವವನ್ನು ಉಲ್ಲೇಖಿಸಿದ ಅವರು ದೇಶವು ಸಮಾಜವಾದದಿಂದ “ಅದಾನಿಸಂ” ಗೆ ಬದಲಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಈ ವೈರಲ್ ವಿಡಿಯೊದಲ್ಲಿ ತೆವಳುತ್ತಿರುವವರು ಮುಸ್ಲಿಂ ಅಲ್ಲ, ಅದು ಯುಪಿಯದ್ದೂ ಅಲ್ಲ!
ಸರ್ಕಾರದ ಕೆಲವು ಸಂಸದರಿಗೆ ಜಾತ್ಯತೀತತೆ ಮತ್ತು ಸಮಾಜವಾದದ ಪರಿಕಲ್ಪನೆಗಳ ಸುತ್ತಲಿನ ಗೊಂದಲದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಜಾನ್ ಬ್ರಿಟಾಸ್, ಸಂವಿಧಾನದ ಮೂಲ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ಜಾತ್ಯತೀತತೆ ಮತ್ತು ಸಮಾಜವಾದದ ಹಿನ್ನಡೆಯನ್ನು ತಡೆಯುವಂತೆ ಸಚಿವರನ್ನು ಉಲ್ಲೇಖಿಸಿ ಕೇಳಿಕೊಂಡಿದ್ದಾರೆ.
ಪ್ರಜಾಪ್ರಭುತ್ವವು ಈಗ “ನಮೋಕ್ರಸಿ” ಅಥವಾ “ಮೋದಿಯೋಕ್ರಸಿ” ಆಗಿ ರೂಪಾಂತರಗೊಂಡಿದೆ ಎಂದು ಹೆಚ್ಚಿನ ಸಂಸದರು ಈಗ ಗ್ರಹಿಸಿದ್ದಾರೆ ಎಂದು ವಿಷಾದಿಸಿದ್ದಾರೆ. ಜೊತೆಗೆ ಸರ್ಕಾರದ ಸಂಸದರಿಗೆ ಸಂವಿಧಾನದ ರಿಪಬ್ಲಿಕ್ (ಗಣರಾಜ್ಯ) ಎಂಬ ಪದ ರಿಪಬ್ಲಿಕ್ ಟಿವಿಯ ”ಅರ್ನಾಬ್ ಗೋಸ್ವಾಮಿ” ಎಂದಷ್ಟೆ ಎಂದು ವ್ಯಂಗ್ಯವಾಡಿದ್ದಾರೆ.