ಬೆಂಗಳೂರು : ಮಣಿಪುರದ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳಬೇಕಿರುವ ಪ್ರಧಾನಿ ಮೋದಿ ಕೇವಲ ಚುನಾವಣೆಗಾಗಿ ಕರ್ನಾಟಕದಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ ಎಂದು ಕಾಲಹರಣ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘ಮೈಸೂರಿನ ಗಜರಾಜನ ಸಾವಿಗೆ ಶೋಕ ಸಂತಾಪ ಹೇಳುವ ಪ್ರಧಾನಿಗಳೇ, ಕರ್ನಾಟಕ ರಾಜ್ಯದ ಚುನಾವಣಾ ಪ್ರವಾಸ ಮುಗಿದಿದ್ದರೆ ಸ್ವಲ್ಪ ಮಣಿಪುರದತ್ತ ಗಮನ ಕೊಡಿ’ ಎಂದು ಒತ್ತಾಯಿಸಿದ್ದಾರೆ. ”55ಕ್ಕೂ ಹೆಚ್ಚು ಜನರ ಸಾವಾಗಿದೆ. ಹಿಂಸಾಚಾರದಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ಕುಟುಂಬಗಳ ಅರಣ್ಯ ರೋಧನ ಮುಗಿಲು ಮುಟ್ಟಿದೆ.56ಇಂಚಿನ ಎದೆಯಲ್ಲಿ ಕಿಂಚಿತ್ತಾದರೂ ಮಾನವೀಯತೆ ಇರಬೇಕಲ್ವಾ ಪ್ರಧಾನಿಗಳೇ?” ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಅವರೊಬ್ಬ ಪ್ರಧಾನಿ ಎನ್ನುವುದನ್ನು ಮರೆತು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ದೇಶ ಇದನ್ನು ಕ್ಷಮಿಸುವುದಿಲ್ಲ. ಮಣಿಪುರದಲ್ಲಿನ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ, ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅವರಿನ್ನು ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಮಣಿಪುರ ಹಿಂಸಾಚಾರ: ರೈಲು ಸಂಚಾರ, ಇಂಟರ್ನೆಟ್ ಸ್ಥಗಿತ
ಮೇತಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ(ಎಸ್‌ಟಿ) ಸ್ಥಾನಮಾನದ ಬೇಡಿಕೆಗಾಗಿ ನಡೆಯುತ್ತಿರುವ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು ಇದುವರೆಗೆ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದಲ್ಲಿ ಇದುವರೆಗೆ 231 ಜನರು ಗಾಯಗೊಂಡಿದ್ದಾರೆ. ಅಲ್ಲದೆ ಮೇ 3ರಂದು ಭುಗಿಲೆದ್ದ ಈ ಹಿಂಸಾಚಾರದಲ್ಲಿ 1700 ಮನೆಗಳು ಸುಟ್ಟು ಹೋಗಿವೆ.
ಮಣಿಪುರದ ಒಟ್ಟು ಜನಸಂಖ್ಯೆಯ ಶೇಕಡ 53ರಷ್ಟನ್ನು ಮೇತಿ ಸಮುದಾಯ ಹೊಂದಿದೆ. ಈ ಸಮುದಾಯವು ಹೆಚ್ಚಾಗಿ ಇಂಫಾಲ್ ಕಣಿವೆಯ ಸುತ್ತ ವಾಸಿಸುತ್ತಿದೆ. ಅದೇ ಸಮಯದಲ್ಲಿ, ಬುಡಕಟ್ಟು ಜನಾಂಗದ ನಾಗಾ ಮತ್ತು ಕುಕಿ ಬೆಟ್ಟಗಳ ಜಿಲ್ಲೆಯಲ್ಲಿ ವಾಸಿಸುವ ಮಣಿಪುರದ ಜನಸಂಖ್ಯೆಯ ಸುಮಾರು 40 ಪ್ರತಿಶತವನ್ನು ಹೊಂದಿದ್ದಾರೆ.