ಜೈಪುರ: ರಾಜಸ್ಥಾನದ ಬಾನಸ್ವಾರ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ದೇಶದ ಆರ್ಥಿಕ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ನಶಿಸಿಹೋಗುವಂತೆ ಮಾಡುತ್ತಿದ್ದಾರೆ. ಅವರು ಎರಡು ಹಿಂದೂಸ್ಥಾನವನ್ನು ಬಯಸುತ್ತಿದ್ದಾರೆ ಒಂದು ಕೈಗಾರೀಕೊದ್ಯಮಿಗಳದ್ದು, ಮತ್ತೊಂದು ರೈತರು, ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದವರದೆಲ್ಲ ಸೇರಿ ಒಂದು, ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಒಂದೇ ಹಿಂದೂಸ್ಥಾನ ಬಯಸುತ್ತಿದೆ” ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿ ಸರ್ಕಾರ ಭಾರತದ ಆರ್ಥಿಕತೆಯ ಮೇಲೆ ದಾಳಿ ಮಾಡಿದೆ. ಮೋದಿ ಮಾಡಿದ ನೋಟು ರದ್ದತಿ, ಜಿಎಸ್‌ಟಿ ಅನುಷ್ಟಾನದಿಂದಾಗಿ ದೇಶದ ಆರ್ಥಿಕತೆ ಸಂಕಷ್ಟಕ್ಕೆ ಈಡಾಗಿದೆ, ಮತ್ತು ನಾಶ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಎಂದರು. ಅಲ್ಲದೆ, ಯುಪಿಎ ಸರ್ಕಾರ ದೇಶದ ಆರ್ಥಿಕ ಸ್ಥಿತಿಯನ್ನು ಸಶಕ್ತಗೊಳಿಸಿದ್ದರೆ ಮೋದಿ ಸರ್ಕಾರ ನಶಿಸಿ ಹೋಗುವಂತೆ ಮಾಡಿದೆ ಎಂದು ಹೇಳಿದರು.
“ನಾವು ಎಲ್ಲರೊಂದಿಗೂ ಸಂಪರ್ಕ ಹೊಂದುತ್ತಾ ಮುನ್ನಡೆಯಬೇಕು, ಎಲ್ಲರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು ಎಂದು ಹೇಳುತ್ತೇವೆ. ಬಿಜೆಪಿ ಒಡೆದು, ತುಳಿದು, ಹತ್ತಿಕ್ಕುವ ಕೆಲಸ ಮಾಡುತ್ತದೆ. ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನಾಂಗದವರ ಇತಿಹಾಸ ಮತ್ತು ಸಂಸ್ಕೃತಿಯನ್ನು ಅಳಿಸಿ ಹಾಕುವ ಕೆಲಸ ಮಾಡಲಾಗುತ್ತಿದೆ” ಎಂದರು.
ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿಯಾದ ಮೂರು ಕಾನೂನುಗಳನ್ನು ತರಲು ಮುಂದಾಗಿತ್ತು. ಆ ಕಾನೂನುಗಳು ದೇಶದ ಅತಿದೊಡ್ಡ ಶ್ರೀಮಂತರಾದ ಎರಡು-ಮೂರು ಮಂದಿಗೆ ಮಾತ್ರ ಅನುಕೂಲ ಮಾಡಿಕೊಡುವುದಿತ್ತು. ಸುದೀರ್ಘ ಪ್ರತಿಭಟನೆಗಳ ನಂತರ ಅದನ್ನು ಹಿಂತೆಗೆದುಕೊಳ್ಳಬೇಕಾಯಿತು ಎಂದು ಆರೋಪಿಸಿದರು.