ಏಕರೂಪ ನಾಗರಿಕ ಸಂಹಿತೆ ಪರವಾಗಿ ಬ್ಯಾಟ್ ಬೀಸಿ, ಚರ್ಚೆಗೆ ನಾಂದಿ ಹಾಡಿದ ಪ್ರಧಾನಿ!

 ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ ಎಂದು ವಿಪಕ್ಷದ ವಿರುದ್ಧ ಆರೋಪ 

ಭೋಪಾಲ್: ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆ ಎಳೆಯಲು ಮತ್ತು ಪ್ರಚೋದಿಸಲು ಏಕರೂಪ ನಾಗರಿಕ ಸಂಹಿತೆ (UCC) ಯನ್ನು  ಬಳಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಂಗಳವಾರ ಹೇಳಿದ್ದು, ಯುಸಿಸಿ ಪರವಾಗಿ ಪ್ರಧಾನಿ ಬ್ಯಾಟ್ ಬೀಸಿದ್ದಾರೆ.

“ಇಂದು ಜನರನ್ನು ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಪ್ರಚೋದಿಸಲಾಗುತ್ತಿದೆ, ಎರಡು ಕಾನೂನು ದೇಶವನ್ನು ನಡೆಸುವುದು ಹೇಗೆ ಸಾಧ್ಯ? ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಏಕರೂಪ ನಾಗರಿಕ ಸಂಹಿತೆಯನ್ನು ಜಾರಿ ಮಾಡುವಂತೆ ಸುಪ್ರೀಂಕೋರ್ಟ್‌ ಕೂಡಾ ಕೇಳಿದೆ. ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂವಿಧಾನದಲ್ಲಿ ಹೇಳಲಾಗಿದ್ದು, ಸುಪ್ರೀಂ ಕೋರ್ಟ್ ಸಹ ಅದನ್ನು ಜಾರಿಗೆ ತರಲು ಕೇಳಿದೆ. ಆದರೆ ವಿರೋಧ ಪಕ್ಷಗಳು ಓಟ್‌ ಬ್ಯಾಂಕ್‌ಗಾಗಿ ರಾಜಕೀಯ ಮಾಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್ ಚುನಾವಣೆ ಸಮೀಪಿಸುವ ವೇಳೆ ಏಕರೂಪ ನಾಗರಿಕ ಸಂಹಿತೆ ಅಸ್ತ್ರ ಪ್ರಯೋಗಿಸಿದ ಬಿಜೆಪಿ

ತಮ್ಮ ಲಾಭಕ್ಕಾಗಿ ಅವರನ್ನು ಪ್ರಚೋದಿಸುವವರು ಯಾರು ಎಂಬುದನ್ನು ಭಾರತದ ಮುಸ್ಲಿಮರು ಅರ್ಥಮಾಡಿಕೊಳ್ಳಬೇಕು. ಇಂದು ಏಕರೂಪ ನಾಗರಿಕ ಸಂಹಿತೆ ಹೆಸರಿನಲ್ಲಿ ಕೆಲವರು ಮುಸ್ಲಿಮರನ್ನು ಪ್ರಚೋದಿಸುವುದನ್ನು ನಾವು ನೋಡುತ್ತಿದ್ದೇವೆ. ಸಂವಿಧಾನವು ಸಹ ನಾಗರಿಕರಿಗೆ ಸಮಾನ ಹಕ್ಕುಗಳ ಬಗ್ಗೆ ಮಾತನಾಡುತ್ತದೆ. ಆದರೆ ವಿಪಕ್ಷಗಳು ನಮ್ಮನ್ನು ದೂಷಿಸುತ್ತಾ, ಮುಸ್ಲಿಂ, ಮುಸ್ಲಿಂ ಹೇಳುತ್ತಿರುತ್ತಾರೆ ಎಂದು ಪ್ರಧಾನಿ ಹೇಳಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲಿದ್ದೇವೆ ಎಂದು ಹೇಳಿಕೊಂಡಿತ್ತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು, “ನಾವು ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸಂವಿಧಾನದೊಳಗೆ, ನಮಗೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಅನುಮತಿ ಮತ್ತು ನಿರ್ದೇಶನ ನೀಡಲಾಗಿದೆ.” ಎಂದು ಹೇಳಿದ್ದರು.

ವೋಟ್ ಬ್ಯಾಂಕ್ ರಾಜಕೀಯ ಮಾಡುವವರಿಂದ ಪಾಸ್ಮಾಂಡ ಮುಸ್ಲಿಮರ ಜೀವನ ಕಷ್ಟಕರವಾಗಿದೆ. ಅವರನ್ನು ಸಮಾನವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪಾಸ್ಮಾಂಡ ಮುಸ್ಲಿಮರು ತಮ್ಮದೇ ಸಮುದಾಯದವರಿಂದ ಶೋಷಣೆಗೆ ಒಳಗಾಗಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಂದಿಗೆ ನಡೆಸಿದ ಸಂವಾದದಲ್ಲಿ ತಿಳಿಸಿದ್ದಾರೆ. ಮುಸ್ಲಿಮರಲ್ಲಿ ಹಿಂದುಳಿದ ವರ್ಗಗಳನ್ನು ಪಸ್ಮಾಂಡ ಮುಸ್ಲಿಮರು ಎಂದು ವಿವರಿಸಲಾಗಿದೆ.

ಇದನ್ನೂ ಓದಿ: ಮತ್ತೆ ಎದ್ದಿದೆ ಏಕರೂಪ ನಾಗರಿಕ ಸಂಹಿತೆಯ ವಾದ

ಮುಸ್ಲಿಂ ಮಹಿಳೆಯರ ಬಗ್ಗೆ ಮಾತನಾಡಿದ ಅವರು, ತ್ರಿವಳಿ ತಲಾಖ್ ಅನ್ನು ಬೆಂಬಲಿಸುವವರು ಮುಸ್ಲಿಂ ಹೆಣ್ಣು ಮಕ್ಕಳಿಗೆ ತೀವ್ರ ಅನ್ಯಾಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. “ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಮತ ಕೇಳುವವರು ಹಳ್ಳಿಗಳಿಗೆ ಮತ್ತು ಬಡವರಿಗೆ ಗರಿಷ್ಠ ಅನ್ಯಾಯ ಮಾಡಿದ್ದಾರೆ” ಎಂದು ಪ್ರತಿಪಕ್ಷಗಳ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಮಂಗಳವಾರ ಭೋಪಾಲ್‌ನಲ್ಲಿ ಐದು ವಂದೇ ಭಾರತ್ ರೈಲುಗಳಿಗೆ ಹಸಿರು ಬಾವುಟ ಬೀಸಿ ಉದ್ಘಾಟಿಸಿದರು. ಈ ವೇಳೆ ಅವರು ರೈಲುಗಳು ದೇಶದ ಆರ್ಥಿಕ ಸಂಪರ್ಕವನ್ನು ಹೆಚ್ಚಿಸುತ್ತವೆ ಎಂದು ಪ್ರತಿಪಾದಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *