ಕೊಚ್ಚಿ: ಕೆಲ ರಾಜಕೀಯ ಪಕ್ಷದ ಸದಸ್ಯರು ಇಲ್ಲಿದ್ದಾರೆ. ಕೈರಳಿ ಹಾಗೂ ಮೀಡಿಯಾ ಒನ್ ಚಾನೆಲ್‌ಗಳ ಪ್ರತಿನಿಧಿಗಳು ಯಾರಾದರೂ ಈ ಪತ್ರಿಕಾಗೋಷ್ಠಿಯಲ್ಲಿ ಇದ್ದರೆ ದಯಮಾಡಿ ಹೊರ ಹೋಗಿ. ಚಾನೆಲ್‌ನ ಪ್ರತಿನಿಧಿಗಳು ಇಲ್ಲಿದ್ದರೆ ನಾನು ಹೊರ ನಡೆಯುತ್ತೇನೆ. ಸ್ಪಷ್ಟವಾಗಿ ಹೇಳುತ್ತೇನೆ ಕೈರಳಿ ಹಾಗೂ ಮೀಡಿಯಾ ಒನ್ ನೊಂದಿಗೆ ನಾನು ಮಾತನಾಡುವುದಿಲ್ಲ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿರುವ ವಿವಾದಕ್ಕೆ ಕಾರಣವಾಗಿದೆ.
ರಾಜ್ಯಪಾಲರು ಕೊಚ್ಚಿಯಲ್ಲಿರುವ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಮೇಲಿನಂತೆ ಹೇಳಿಕೆ ನೀಡಿ, ‘ಕೈರಳಿ ನ್ಯೂಸ್’ ಮತ್ತು ‘ಮೀಡಿಯಾ ಒನ್’ನ ಸುದ್ದಿ ವಾಹಿನಿಗಳ ವರದಿಗಾರರು ಮತ್ತು ಕ್ಯಾಮೆರಾ ಸಿಬ್ಬಂದಿಯನ್ನು ಸುದ್ದಿಗೋಷ್ಠಿಯಿಂದ ಹೊರ ನಡೆಯುವಂತೆ ತಾಕೀತು ಮಾಡಿರುವ ಘಟನೆ ನಡೆದಿದೆ.
ರಾಜ್ಯಪಾಲರ ಕಚೇರಿಯ ಅನುಮತಿಯ ಮೇರೆಗೆ ಸುದ್ದಿಗೋಷ್ಠಿಗೆ ಬಂದಿರುವುದಾಗಿ ಈ ವಾಹಿನಿಗಳ ಪ್ರತಿನಿಧಿಗಳು ತಿಳಿಸಿದರೂ, ರಾಜ್ಯಪಾಲರು ತಮ್ಮ ನಿಲುವು ಬದಲಿಸಲಿಲ್ಲ.
‘ಮಾಧ್ಯಮ ಅತಿ ಮುಖ್ಯ ಎಂದು ನಾನು ಪರಿಗಣಿಸುತ್ತೇನೆ. ನಾನು ಯಾವಾಗಲೂ ಮಾಧ್ಯಮಗಳಿಗೆ ಉತ್ತರ ನೀಡಿದ್ದೇನೆ. ಆದರೆ ಮಾಧ್ಯಮ ಎನ್ನುವ ವೇಷ ಹಾಕಿದವರನ್ನು ಮನವೊಲಿಸಲು ನನಗೆ ಸಾಧ್ಯವಿಲ್ಲ. ಅವರು ಮಾಧ್ಯಮದವರಲ್ಲ, ಮಾಧ್ಯಮದ ವೇಷ ಧರಿಸಿದ ರಾಜಕೀಯ ಮಿತ್ರರು ಎಂದು ಆರೋಪ ಮಾಡಿದ್ದಾರೆ.
ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ರಾಜಭವನದೆಡೆ ಮೆರವಣಿಗೆ ನಡೆಸುವ ಸಿಪಿಐ(ಎಂ) ಯೋಜನೆಯನ್ನು ಉಲ್ಲೇಖಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜ್ಯಪಾಲರು ಸಾಂವಿಧಾನಿಕ ಯಂತ್ರವನ್ನು ಪತನಗೊಳಿಸಲು ಸಿಪಿಐ(ಎಂ) ಮುಂದಾಗಿದೆ ಎಂದು ದೂರಿದ್ದಾರೆ.
ರಾಜ್ಯಪಾಲರನ್ನು ಕುಲಾಧಿಪತಿ ಹುದ್ದೆಯಿಂದ ಕೆಳಗಿಳಿಸುವ ಸಂಬಂಧ ಕೇರಳ ಸರ್ಕಾರ ಕೈಗೊಂಡಿರುವ ಕ್ರಮದ ಕುರಿತು ಪ್ರತಿಕ್ರಿಯಿಸಿ ‘ಕುಲಾಧಿಪತಿ ಹುದ್ದೆಯಿಂದ ಕೆಳಗಿಳಿಯಲು ಮೊದಲಿಗೆ ನಾನೇ ಮುಂದಾಗಿದ್ದರೂ, ಮುಖ್ಯಮಂತ್ರಿಯವರು ತಾವು ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಲಿಖಿತವಾಗಿ ಭರವಸೆ ನೀಡಿದ್ದರು’ ಎಂದು ತಿಳಿಸಿದರು.
ಈ ಹಿಂದೆಯೂ ಕೈರಾಳಿ ನ್ಯೂಸ್ ಮತ್ತು ಮೀಡಿಯಾ ಒನ್ ಚಾನೆಲ್ ಸೇರಿದಂತೆ ಒಟ್ಟು 4 ಮಲಯಾಳಂ ಚಾನೆಲ್‌ಗಳಿಗೆ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾಗುವುದಕ್ಕೆ ರಾಜಭವನ ನಿಷೇಧ ಹೇರಿತ್ತು ಎಂಬ ಆರೋಪವಿದೆ.
ರಾಜ್ಯಪಾಲರ ಈ ನಡೆಯನ್ನು ಖಂಡಿಸಿರುವ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಪಾಲರು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದೆ. ಈ ಸಂಬಂಧ ಸಂಘವು ನಾಳೆ(ನವೆಂಬರ್ 08) ರಾಜಭವನದವರೆಗೆ ಮೆರವಣಿಗೆ ಹಮ್ಮಿಕೊಂಡಿದೆ.