ಪಿಂಚಣಿ-ಪುನರ್ವಸತಿ ಕಲ್ಪಿಸಲು ಸರ್ಕಾರ ಭರವಸೆ: ದೇವದಾಸಿ ಮಹಿಳೆಯರ ಧರಣಿ ಅಂತ್ಯ

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ನಡೆಯುತ್ತಿದ್ದ ಧರಣಿ ಸ್ಥಳಕ್ಕೆ ಸಚಿವ ಹಾಜಲ್ಲಪ ಆಚಾರ್‌ ಭಾಗವಹಿಸಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ಅಂತ್ಯಗೊಂಡಿದೆ.

2022ರ ರಾಜ್ಯ ಬಜೆಟ್‌ನಲ್ಲಿ ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿಯನ್ನು ರೂ.3000ಕ್ಕೆ ಏರಿಸಬೇಕು. ಇದನ್ನು ಅವರ ಮಕ್ಕಳಿಗೂ ವಿಸ್ತರಿಸಬೇಕು. ದೇವದಾಸಿ ಮಹಿಳೆಯರ ಎಲ್ಲ ಮಕ್ಕಳು ಮತ್ತು ಸದಸ್ಯರನ್ನು ಸಮೀಕ್ಷೆ ನಡೆಸಿ ಅದರಂತೆ ಪುನರ್ವಸತಿ ಕಲ್ಪಿಸಬೇಕು ಎಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿತ್ತು.

ರಾಜ್ಯದ ವಿವಿಧ ಭಾಗಗಳಿಂದ 1500ಕ್ಕೂ ಹೆಚ್ಚು ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಧರಣಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘದ ಗೌರವ ಅಧ್ಯಕ್ಷ ಯು. ಬಸವರಾಜ  ಧರಣಿಯನ್ನು ಉದ್ಘಾಟಿಸಿದ್ದರು. ಧರಣಿಯ ನೇತೃತ್ವವನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಾರ್ಯಾಧ್ಯಕ್ಷೆ ರೇಣುಕಮ್ಮ, ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಉಪಾಧ್ಯಕ್ಷೆ ಪದ್ಮಾ ವಹಿಸಿದ್ದರು.

ಇತ್ತೀಚಿಗೆ, ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಮೂರು ದಿನಗಳಿಂದ ಪ್ರತಿಭಟನೆ ನಡೆಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸರ್ಕಾರಕ್ಕೆ 13 ಪ್ರಮುಖ ಬೇಡಿಕೆಗಳೊಂದಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಚಿವರ ಆಗಮನಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.  ಆದರೆ, ಪ್ರತಿಭಟನೆ ಹಿಂಪಡೆಯಲು ಸಂಘಟಕರು ನಿರಾಕರಿಸಿದರು.

ಪರಿಣಾಮವಾಗಿ, ರಾತ್ರಿ 10 ಗಂಟೆ ಸುಮಾರಿಗೆ ಸಚಿವ ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ಆಯುಕ್ತರು ಹಾಗೂ ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಮಾಸಿಕ ಪಿಂಚಣಿ ಹೆಚ್ಚಳ ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವರು ಭರವಸೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *