ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಆಡಳಿತರೂಡ ಬಿಜೆಪಿ ಶಾಸಕರೊಬ್ಬರು ಅಪರಿಚಿತ ಮಹಿಳೆಯೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಂದಿಗೆ ಇರುವ ಫೋಟೋಗಳು ವೈರಲ್ ಆಗಿದ್ದು, ಈ ಬಗ್ಗೆ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯೊಂದಿಗಿನ ಫೋಟೋವನ್ನು ಅಲ್ಲಗೆಳೆದಿದ್ದು, ನನ್ನ ಫೋಟೋವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದಿದ್ದಾರೆ, ಈ ಸಂಬಂಧ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಫೋಟೋವನ್ನು ಯಾರೋ ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಇದೀಗ ಈ ಫೋಟೋವನ್ನು ವೈರಲ್ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ ಪ್ರಕಾರ ಎಫ್.ಐ.ಆರ್ ದಾಖಲು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಶಾಸಕರಿಗೆ ಟಿಕೆಟ್ ನಿರಾಕರಿಸುವಂತೆ ಪಕ್ಷದ ಮೇಲೆ ಒತ್ತಡ ಹೇರಲು ಬಿಜೆಪಿಯಲ್ಲಿನವರದ್ದೇ ಕೈವಾಡವಿದ್ದು, ಅವರ ವಿರುದ್ಧ ತೀವ್ರ ಲಾಬಿ ನಡೆಯುತ್ತಿದೆ ಮತ್ತು ಕಾಂಗ್ರೆಸ್ ಕೂಡ ಈ ಸ್ಥಾನವನ್ನು ಸೆಣಸಲು ಬಯಸಿದೆ ಎಂದು ಮೂಲಗಳು ತಿಳಿಸಿವೆ. ಶಾಸಕ ಮಠಂದೂರು ಅವರು ಈ ಬೆಳವಣಿಗೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಈ ಹಿಂದೆ ಖಾಸಗಿ ವಿಡಿಯೋವೊಂದರ ಬಗ್ಗೆ ಶಾಸಕರ ಬಗ್ಗೆ ವದಂತಿ ಹಬ್ಬಿತ್ತು. ಮಠಂದೂರು ಉತ್ತಮ ಕೆಲಸ ಮಾಡಿದರೂ ಪಕ್ಷದೊಳಗೆ ಹಲವು ಶತ್ರುಗಳನ್ನು ಹುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ; ಬಿಜೆಪಿ ಶಾಸಕ ಬಂಧನ
2018ರಲ್ಲಿ ಭಾರತೀಯ ಜನತಾ ಪಾರ್ಟಿಯ ಸಂಜೀವ್ ಮಠಂದೂರು ಅವರು ಕಾಂಗ್ರೆಸ್ ಪಕ್ಷದ ಶಕುಂತಲಾ ಶೆಟ್ಟಿ ಅವರನ್ನು 19477 ಮತಗಳ ಅಂತರದಿಂದ ಮಣಿಸಿದ್ದರು. ಇದೀಗ ಸಂಜೀವ ಮಠಂದೂರು ಮತ್ತೊಮ್ಮೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಆದರೆ, ಮಠಂದೂರು ವಿರುದ್ಧ ಬಣ ರಾಜಕೀಯದ ಆರೋಪಗಳು ಕೇಳಿಬಂದಿವೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಅವರಿಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಇತ್ತಾದರೂ ಕೊನೆ ಕ್ಷಣದಲ್ಲಿ ಬಿಜೆಪಿ ಮಠಂದೂರಿಗೆ ಮಣೆ ಹಾಕಿತ್ತು. ಈ ಬಾರಿ ಉದ್ಯಮಿ ಆಗಿರುವ ಸಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಡಿ. ವಿ. ಸದಾನಂದ ಗೌಡ ಅವರ ಆಪ್ತರಾಗಿರುವ ಅಶೋಕ್ ರೈ ಈ ಬಾರಿ ಪುತ್ತೂರು ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಹೀಗಾಗಿ ಪುತ್ತೂರು ಬಿಜೆಪಿ ಟಿಕೆಟ್ ಗೆ ಭಾರೀ ಸ್ಪರ್ಧೆ ನಡೆದಿದೆ. ಇದರ ಮಧ್ಯೆ ಹಾಲಿ ಶಾಸಕ ಸಂಜೀವ ಮಠಂದೂರು ಅವರ ಫೋಟೋ ವೈರಲ್ ಆಗಿದೆ.
ಪಕ್ಷದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನದ ಆಘಾತದಿಂದ ಬಿಜೆಪಿ ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಈ ಇತ್ತೀಚಿನ ಬೆಳವಣಿಗೆ ನಡೆದಿದೆ.ಮೇ 10 ರಂದು ನಡೆಯಲಿರುವ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗುವ ಬೆಳವಣಿಗೆ ಇದೀಗ ವರದಿಯಾಗಿದೆ.