ರೋಗಿಗೆ ಡೋಲೋ 650 ಮಾತ್ರೆಯನ್ನೇ ಸೂಚಿಸಲು ವೈದ್ಯರಿಗೆ ಉಡುಗೊರೆಗೆ ರೂ.1000 ಕೋಟಿ ಖರ್ಚು ಮಾಡಿದ ಸಂಸ್ಥೆ

ನವದೆಹಲಿ: ಅನಾರೋಗ್ಯದ ಸಂದರ್ಭದಲ್ಲಿ ಜನರು ಒಂದಲ್ಲ ಒಂದು ಔಷಧಿಗಳನ್ನು ಖರೀದಿಸುವ ಮೂಲಕ ಆರೋಗ್ಯ ರಕ್ಷಣೆಯಲ್ಲಿ ಕಾಳಜಿ ವಹಿಸುತ್ತಾರೆ. ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆಗೆ ಒಳಗೊಂಡು ಅವರು ಬರೆದುಕೊಡುವ ಔಷಧಿಗಳನ್ನು ತೆಗೆದುಕೊಳ್ಳುವ ಪ್ರತಿ ರೋಗಿಯೂ ತನ್ನ ಆರೋಗ್ಯ ಕಾಪಾಡಿಕೊಳ್ಳುತ್ತಾನೆ.

ಆದರೆ, ಕೆಲವೊಂದು ಸಂದರ್ಭದಲ್ಲಿ ಫಾರ್ಮ ಸಂಸ್ಥೆ ತಮ್ಮದೇ ಉತ್ಪನ್ನಗಳ ಮಾರಾಟಕ್ಕೆ ಹಲವು ಮಾರ್ಗಗಳನ್ನು ಅನುಸರಿಸುವುದು ಸಾಮಾನ್ಯ. ಕೆಲವರು ನೇರ ಮಾರ್ಗ ಅಥವಾ ಕೆಲವು ಗುಪ್ತ ಮಾರ್ಗಗಳನ್ನು ಅನುಸರಿಸಿ ವ್ಯಾಪಾರಿ ಕೈಚಳಕ ನಡೆಸಲಾಗುತ್ತದೆ.

ಇಂಥದ್ದೇ ಒಂದು ಪ್ರಕರಣ ವೈದ್ಯ ಲೋಕದಲ್ಲಿ ಜರುಗಿದ್ದು, ಅದರ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಔಷಧವಾಗಿ ಜನಪ್ರಿಯವಾಗಿದ್ದ ಪ್ಯಾರಾಸಿಟಮಾಲ್ ಡ್ರಗ್ ‘ಡೋಲೋ-650’ ಅತ್ಯಧಿಕ ಮಾರಾಟಗೊಂಡ ಮಾತ್ರೆಯಾಗಿದೆ. ಆದರೆ, ಫಾರ್ಮಾ ಸಂಸ್ಥೆ ತನ್ನ ವ್ಯಾಪಾರಿ ನೀತಿ ಉಪಯೋಗಿಸಿ ಲಾಭ ಗಳಿಸಲು ಗುಪ್ತ ಮಾರ್ಗಗಳನ್ನು ಸಹ ಅನುಸರಿಸಿದೆ ಎಂದು ತಿಳಿದುಬಂದಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರಿದ್ದ ಪೀಠಕ್ಕೆ ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ ಪರವಾಗಿ ಹಾಜರಾದ ಹಿರಿಯ ವಕೀಲ ಸಂಜಯ್ ಪಾರಿಖ್, 650 ಮಿಲಿ ಗ್ರಾಂ ಶಿಫಾರಸ್ಸು ಮಾಡಲು ಡೋಲೋ ಕಂಪನಿಯು 1,000 ಕೋಟಿ ರುಪಾಯಿಗೂ ಹೆಚ್ಚು ಉಚಿತ ಕೊಡುಗೆಗಳನ್ನು ನೀಡಿದೆ. ವೈದ್ಯರು ವೀಚಾರಹೀನ ಡೋಸ್ ಸಂಯೋಜನೆಯನ್ನು ಸೂಚಿಸುತ್ತಿದ್ದಾರೆ ಎಂದು ವಕೀಲರು ಪೀಠಕ್ಕೆ ತಿಳಿಸಿದರು. ಅವರು ತಮ್ಮ ಮಾಹಿತಿಯ ಮೂಲವಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ವರದಿಯನ್ನು ಉಲ್ಲೇಖಿಸಿದ್ದಾರೆ.

“ನೀವು ಈ ಮಾಹಿತಿಗಳನ್ನು ಬಹಿರಂಗಪಡಿಸುತ್ತಿರುವುದು ಒಳ್ಳೆಯದಾಗಿದೆ, ನನಗೆ ಇತ್ತೀಚೆಗೆ ಕೋವಿಡ್ ಬಂದಾಗಲೂ ನಾನು ಇದೇ ಮಾತ್ರೆಯನ್ನು ಸೇವಿಸಿದ್ದೆ. ಇದು ಗಂಭೀರ ವಿಷಯವಾಗಿದ್ದು, ಇದರತ್ತ ಗಮನ ಹರಿಸುತ್ತೇವೆ” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ವಿಚಾರಣೆಯ ನಂತರ ಮಾತನಾಡಿದ ಸಂಜಯ್ ಪಾರಿಖ್, “ಫಾರ್ಮಾ ಕಂಪನಿಗಳು ನೀಡುವ ಉಡುಗೊರೆಗಳಿಗೆ ಪ್ರತಿಯಾಗಿ ವೈದ್ಯರು ಅನಗತ್ಯ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ಈ ಸಮಸ್ಯೆಯನ್ನು ನಿಭಾಯಿಸಲು ಯುಸಿಪಿಎಂಪಿ ಕೋಡ್ ಅನ್ನು ರಚಿಸಲಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಾಗುತ್ತಿದೆ” ಎಂದು ಹೇಳಿದರು.

“500 ಮಿಲಿ ಗ್ರಾಂ ಪ್ಯಾರೆಸಿಟಮಾಲ್‌ಗೆ ಔಷಧಿ ಬೆಲೆಯನ್ನು ಪ್ರಾಧಿಕಾರ ನಿರ್ಧರಿಸಿದೆ. ಆದರೆ ಅದನ್ನು 650 ಎಂಜಿಗೆ ಹೆಚ್ಚಿಸಿದಾಗ ಅದರ ಬೆಲೆಯನ್ನು ಪ್ರಾಧಿಕಾರ ನಿರ್ಧರಿಸುವ ಅಧಿಕಾರ ಹೊಂದಿಲ್ಲ. ಅದಕ್ಕಾಗಿಯೇ ಡೋಲೋ 650 ಮಾತ್ರೆಯನ್ನು ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಇದು ಉಚಿತಗಳ ಉದಾಹರಣೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಆ್ಯಂಟಿಬಯೋಟಿಕ್‌ಗಳು ಅಗತ್ಯವಿಲ್ಲದಿದ್ದರೂ ವಿಭಿನ್ನ ರೂಪಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಔಷಧ ಸೂತ್ರೀಕರಣಗಳನ್ನು ನಿಯಂತ್ರಿಸಲು ಶಾಸನಬದ್ಧ ಚೌಕಟ್ಟು ಇರಬೇಕು” ಎಂದು ಪಾರಿಖ್ ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಒಂದು ವಾರದೊಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ನ್ಯಾಯಾಲಯವು ಈಗ ಕೇಂದ್ರವನ್ನು ಕೇಳಿದೆ ಮತ್ತು 10 ದಿನಗಳ ನಂತರ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.

Donate Janashakthi Media

Leave a Reply

Your email address will not be published. Required fields are marked *