ಕೇರಳ, ಒಡಿಶಾ, ರಾಜಸ್ಥಾನ ರಾಜ್ಯದಿಂದಲೂ ಪೆಟ್ರೋಲ್‌-ಡೀಸೆಲ್‌ ಮೇಲಿನ ತೆರಿಗೆ ಕಡಿತ

ನವದೆಹಲಿ: ಕೇಂದ್ರ ಸರ್ಕಾರವು ಪೆಟ್ರೋಲ್‌-ಡೀಸೆಲ್‌ ಮೇಲಿನ ಅಬಕಾರಿ ತೆರಿಗೆ ಕಡಿತಗೊಳಿಸಿದ ಕೂಡಲೇ, ರಾಜಸ್ಥಾನ, ಕೇರಳ ಮತ್ತು ಒಡಿಶಾ ರಾಜ್ಯ ಸರ್ಕಾರಗಳೂ ತಮ್ಮ ತಮ್ಮ ರಾಜ್ಯಗಳಲ್ಲಿ ವಿಧಿಸಲಾಗುತ್ತಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು(ವ್ಯಾಟ್) ಕಡಿತ ಮಾಡಿವೆ.

ಕೇರಳದ ಎಡರಂಗ ಸರ್ಕಾರ ತಮ್ಮ ರಾಜ್ಯದಲ್ಲಿ ಪೆಟ್ರೋಲ್‌-ಡೀಸೆಲ್‌ ಮೇಲಿನ ಮೌಲ್ಯವರ್ಧಿತ ತೆರಿಗೆ ಕಡಿತ ಮಾಡಿದ್ದು, ಪೆಟ್ರೋಲ್‌ ಮೇಲೆ 2.41 ರೂ. ಹಾಗೂ ಡೀಸೆಲ್‌ ಮೇಲೆ 1.36 ರೂ. ತೆರಿಗೆಯನ್ನು ಕಡಿತ ಮಾಡಲಾಗಿದೆ ಎಂದು ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರು, ‘ಕೇಂದ್ರ ಸರ್ಕಾರ ಇಂಧನದ ಮೇಲೆ ಭಾರಿ ತೆರಿಗೆ ವಿಧಿಸುತ್ತದೆ. ಈಗ ಭಾಗಶಃ ಕಡಿತ ಮಾಡಿದೆ. ಆದರೂ, ಕೇಂದ್ರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.

 ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ ಅವರು ‘ಕೇಂದ್ರ ಸರ್ಕಾರವು ಅಬಕಾರಿ ತೆರಿಗೆ ಕಡಿತಮಾಡಿದ್ದು, ರಾಜ್ಯ ಸರ್ಕಾರವು ಪೆಟ್ರೋಲ್ ಮೇಲೆ ಲೀಟರ್‌ಗೆ 2.48 ರೂ ಮತ್ತು ಡೀಸೆಲ್‌ಗೆ 1.16 ರೂರಷ್ಟು ಮೌಲ್ಯವರ್ಧಿತ ತೆರಿಗೆಯನ್ನು ತಗ್ಗಿಸಲಿದ್ದೇವೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ 10.48ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 7.16ರೂ ಅಗ್ಗವಾಗಲಿದೆ’ ಎಂದು ತಿಳಿಸಿದ್ದಾರೆ.

ಒಡಿಶಾ ರಾಜ್ಯದ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜು ಜನತಾದಳ ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ಅನ್ನು ಲೀಟರ್‌ಗೆ ಕ್ರಮವಾಗಿ 2.23 ಮತ್ತು 1.36 ರೂ. ಕಡಿತ ಮಾಡಿ ಆದೇಶ ಹೊರಡಿಸಿದೆ.

ಇದಕ್ಕೂ ಮೊದಲು ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ತೆರಿಗೆಯನ್ನು ಪ್ರತಿ ಲೀಟರಿಗೆ ಕ್ರಮವಾಗಿ ರೂ.8 ಮತ್ತು ರೂ.6 ಕಡಿತ ಮಾಡಿತ್ತು. ‘ಅಬಕಾರಿ ಸುಂಕ ಕಡಿತದಿಂದ ಪೆಟ್ರೋಲ್‌ ದರವು ಲೀಟರಿಗೆ 9.5 ಮತ್ತು ಡೀಸೆಲ್‌ ದರವು ರೂ.7 ರಷ್ಟು ಕಡಿಮೆ ಆಗಿದೆ. ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನೆನ್ನೆ(ಮೇ 21) ತಿಳಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *