ಪೆರು ಅಧ್ಯಕ್ಷೀಯ ಚುನಾವಣೆ: ಶಾಲಾ ಶಿಕ್ಷಕ ಪೆದ್ರೋ ಕ್ಯಾಸ್ಟಿಲೊ ಭರ್ಜರಿ ಗೆಲುವು

ಲಿಮಾ: ದಕ್ಷಿಣ ಅಮೇರಿಕಾದ ಪೆರು ರಾಷ್ಟ್ರದ ಅಧ್ಯಕ್ಷರಾಗಿ ಗ್ರಾಮೀಣ ಶಾಲೆಯ ಶಿಕ್ಷಕ ಪೆದ್ರೋ ಕ್ಯಾಸ್ಟಿಲೊ ಭರ್ಜರಿ ಗೆಲುವು ಸಾಧಿಸಿದ್ದಾರೆ. 40 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅತ್ಯಂತ ದೀರ್ಘಕಾಲಿಕ ಮತ ಎಣಿಕೆ ಪ್ರಕ್ರಿಯೆ ನಡೆದು ನೆನ್ನೆ (ಸೋಮವಾರ) ಅಧಿಕೃತ ಫಲಿತಾಂಶ ಹೊರಬಿದ್ದಿದೆ.

ಪೆನ್ಸಿಲ್‌ ಚಿಹ್ನೆಯನ್ನು ಹೊಂದಿರುವ ‘ಫ್ರೀ ಪೆರು ನ್ಯಾಷನಲ್‌ ಪೊಲಿಟಿಕಲ್‌ ಪಾರ್ಟಿಯ’ ಪೆದ್ರೋ ಕ್ಯಾಸ್ಟಿಲೊ ರಾಷ್ಟ್ರದಾದ್ಯಂತ ‘ಸಿರಿವಂತ ರಾಷ್ಟ್ರದಲ್ಲಿ ಇನ್ನು ಮುಂದೆ ಬಡವರಿಲ್ಲ’ ಎಂಬ ಘೋಷವಾಕ್ಯದ ಮೂಲಕ ಪ್ರಚಾರ ಕೈಗೊಂಡಿದ್ದರು.

ಇದನ್ನು ಓದಿ: ಎಡಪಂಥೀಯ ಸ್ಕೂಲ್ ಟೀಚರ್ ಕ್ಯಾಸ್ಟಿಲೊ ಪೆರು ಅಧ್ಯಕ್ಷ

ಶಾಲಾ ಶಿಕ್ಷಕ ಮತ್ತು ರೈತ ರೈತರ ಮಗ ಎಡಪಂಥೀಯ ನಾಯಕ ಪೆದ್ರೋ ಕ್ಯಾಸ್ಟಿಲೊ (51) ಅವರಿಗೆ ಬಡವರು ಮತ್ತು ಗ್ರಾಮೀಣ ಭಾಗದ ಬಹುಜನತೆ ಬೆಂಬಲ ದೊರೆತಿದೆ. ಬಲಪಂಥೀಯ ರಾಜಕಾರಣಿ ಫ್ಯೂಜಿಮೊರಿ ಅವರನ್ನು 44,000 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ಕಾಲ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ನಡೆದು ಇದೀಗ ಅಂತಿಮ ಫಲಿತಾಂಶ ಪ್ರಕಟಿಸಲಾಗಿದೆ.

ಜಗತ್ತಿನ ಎರಡನೇ ಅತಿ ದೊಡ್ಡ ತಾಮ್ರ ಉತ್ಪಾದಕ ರಾಷ್ಟ್ರವಾಗಿರುವ ಪೆರು, ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹತ್ತಾರು ವರ್ಷಗಳ ದುಡಿಮೆಯು ಕೋವಿಡ್‌ ಪರಿಸ್ಥಿತಿಯಲ್ಲಿ ಕರಗಿ ಹೋಗಿದ್ದು, ಬಡತನದ ಪ್ರಮಾಣ ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಾಗಿದೆ.

ಅಧಿಕೃತವಾಗಿ ಅಧ್ಯಕ್ಷರಾಗಿ ಚುನಾಯಿತರಾದ ನಂತರ ಪೆದ್ರೋ ಕ್ಯಾಸ್ಟಿಲೊ ಆರಂಭಿಕವಾಗಿ ರಾಷ್ಟ್ರೀಯ ಏಕತೆಗೆ ಕರೆ ನೀಡಿದರು. “ಚುನಾವಣೆಯಲ್ಲಿನ ಅದ್ಭುತವಾದ ಗೆಲುವನ್ನು ನ್ಯಾಯಯುತ ಮತ್ತು ಸಾರ್ವಭೌಮ ದೇಶವನ್ನಾಗಿ ಮಾಡುವ ಹೋರಾಟದಲ್ಲಿ ನಾನು ಶ್ರಮ ಮತ್ತು ತ್ಯಾಗವನ್ನು ಕೇಳುತ್ತೇನೆ” ಎಂದು ಅವರು ಹೇಳಿದರು.

ಇದನ್ನು ಓದಿ: ಪೆರು : ಪಾರ್ಲಿಮೆಂಟರಿ ಕ್ಷಿಪ್ರದಂಗೆ ನಡೆಸಿದ ಅಧ್ಯಕ್ಷನ ಪದಚ್ಯುತಿ

ಸಂವಿಧಾನವನ್ನು ಪುನರ‍್ರಚಿಸಲು ಮತ್ತು ಗಣಿಗಾರಿಕೆ ಸಂಸ್ಥೆಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಲು ಪೆದ್ರೋ ಕ್ಯಾಸ್ಟಿಲೊ ಭರವಸೆ ನೀಡಿದ್ದಾರೆ. ಗಣಿಗಾರಿಕೆ ವಲಯದಿಂದ ಸಂಗ್ರಹವಾಗುವ ಆದಾಯವನ್ನು ಬಳಸಿ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ಸಾರ್ವಜನಿಕ ಸೇವೆಗಳನ್ನು ಉನ್ನತೀಕರಿಸುವುದಾಗಿ ಪೆದ್ರೋ ಕ್ಯಾಸ್ಟಿಲೊ ಭರವಸೆ ನೀಡಿದ್ದಾರೆ. ‘ಯಾರಲ್ಲಿ ಒಂದು ಕಾರು ಇಲ್ಲವೋ ಅವರ ಬಳಿ ಒಂದು ಸೈಕಲ್‌ ಆದರೂ ಇರಬೇಕು’ ಎಂದು ಈ ಹಿಂದೆ ಹೇಳಿದ್ದರು.

ಇತ್ತೀಚಿನ ವಾರಗಳಲ್ಲಿ ಅವರು ತಮ್ಮ ವಾಕ್ಚಾತುರ್ಯವನ್ನು ಮೃದುಗೊಳಿಸಿದ್ದಾರೆ ಮತ್ತು ಹೆಚ್ಚು ಮಧ್ಯಮ, ಮಾರುಕಟ್ಟೆ ಸ್ನೇಹಿ ವಿಧಾನವನ್ನು ಸುಳಿವು ನೀಡಿದ್ದಾರೆ. ಆರ್ಥಿಕ ಸ್ಥಿರತೆಗಾಗಿ ಕೆಲಸ ಮಾಡುವುದಾಗಿ ಪೆದ್ರೋ ಕ್ಯಾಸ್ಟಿಲೊ ಹೇಳಿದರು.

ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಅಧ್ಯಕ್ಷ ಆಲ್ಬರ್ಟೊ ಫ್ಯೂಜಿಮೊರಿ ಅವರ ಮಗಳು ಫ್ಯೂಜಿಮೊರಿ ಮೂರನೇ ಬಾರಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದರು.

ಪೆದ್ರೋ ಅವರು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡುತ್ತಿದ್ದರು. ರಬ್ಬರ್‌ ಚಪ್ಪಲಿ ಮತ್ತು ತಲೆಗೆ ಬಿಳಿಯ ಟೊಪ್ಪಿ ತೊಟ್ಟು ಚುನಾವಣೆ ಪ್ರಚಾರಕ್ಕೆ ಧುಮುಕಿದರು. ಶಿಕ್ಷಕರಿಗೆ ಉತ್ತಮ ವೇತನಕ್ಕೆ ಆಗ್ರಹಿಸಿ 2017ರಲ್ಲಿ ಅವರು ಶಿಕ್ಷಕರ ಅತಿ ದೊಡ್ಡ ಪ್ರತಿಭಟನೆ ನಡೆಸಿದ್ದರು. ಬೇಡಿಕೆ ಈಡೇರಿಕೆಗಾಗಿ ಸಂಪುಟ ಸಚಿವರು, ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು.

Donate Janashakthi Media

Leave a Reply

Your email address will not be published. Required fields are marked *