ನವದೆಹಲಿ: ಪೆಪ್ಸಿಕೋ ಕಂಪನಿ ಆಲೂಗಡ್ಡೆ ಬೆಳೆಯುವ ರೈತರ ನಡುವಿನ ವಿವಾದಕ್ಕೆ ಕಳೆದ ವಾರ ಬಗೆಹರಿದು, ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ (ಪಿಪಿವಿಎಫ್‌ಆರ್) ಪ್ರಾಧಿಕಾರವು ರೈತರ ಪರವಾಗಿ ಆದೇಶವನ್ನು ಹೊರಡಿಸಿತ್ತು. ಈಗ ಕೇಂದ್ರ ಸರ್ಕಾರವು ಕಂಪನಿಯು ಲೇಸ್‌ಗಾಗಿ ಪಡೆದಿದ್ದ ಆಲೂಗಡ್ಡೆಯ ಮೇಲಿನ ಪೇಟೆಂಟ್ ಅನ್ನು ರದ್ದುಗೊಳಿಸಿದೆ.
2019ರಲ್ಲಿ, ಚಿಪ್ಸ್ ಉತ್ಪನ್ನಕ್ಕೆ ಬೇಕಾಗುವ ಆಲೂಗಡ್ಡೆ ಬೆಳೆಯಲು ಕಡಿಮೆ ತೇವಾಂಶವನ್ನು ಹೊಂದಿರುವ ಎಫ್‌ಸಿ5 ಆಲೂಗಡ್ಡೆ ತಳಿಯನ್ನು ಬೆಳೆಸಲು ಗುಜರಾತ್ ಮೂಲದ ಕೆಲವು ರೈತರ ಮೇಲೆ ಪೆಪ್ಸಿಕೋ ಮೊಕದ್ದಮೆ ಹೂಡಿತ್ತು.
ಅದೇ ವರ್ಷ ಮೊಕದ್ದಮೆಗಳನ್ನು ಹಿಂತೆಗೆದುಕೊಂಡ ನ್ಯೂಯಾರ್ಕ್ ಮೂಲದ ಕಂಪನಿಯು ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಬಯಸಿದೆ ಎಂದು ಹೇಳಿತ್ತು.
ನಂತರ, ರೈತರ ಹಕ್ಕುಗಳ ಹೋರಾಟಗಾರ್ತಿ ಕವಿತಾ ಕುರುಗಂಟಿ, ಪೆಪ್ಸಿಕೋದ ಎಫ್‌ಸಿ5 ಆಲೂಗಡ್ಡೆ ಪ್ರಭೇದಕ್ಕೆ ನೀಡಲಾದ ಬೌದ್ಧಿಕ ರಕ್ಷಣೆಯನ್ನು ರದ್ದುಗೊಳಿಸುವಂತೆ ಪಿಪಿವಿಎಫ್ಆರ್ ಪ್ರಾಧಿಕಾರಕ್ಕೆ ಮನವಿ ಮಾಡಿದರು. ಭಾರತದ ನಿಯಮಗಳು ಬೀಜ ತಳಿಗಳ ಮೇಲಿನ ಪೇಟೆಂಟ್‌ಗೆ ಅನುಮತಿಸುವುದಿಲ್ಲ ಎಂದು ಹೇಳಿದ್ದರು.
ಬೀಜದ ಮೇಲೆ ಪೇಟೆಂಟ್ ಇಲ್ಲ
ಬೀಜ ವೈವಿಧ್ಯದ ಮೇಲೆ ಪೆಪ್ಸಿಕೋ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂಬ ಕುರುಗಂಟಿಯವರ ವಾದವನ್ನು ಪಿಪಿವಿಎಫ್‌ಆರ್ ಪ್ರಾಧಿಕಾರವು ಒಪ್ಪಿಕೊಂಡಿದೆ. ಇನ್ನು, ಪಿಪಿವಿಎಫ್‌ಆರ್‌ನ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಪೆಪ್ಸಿಕೋ ಕಂಪನಿ, ಆದೇಶದ ಬಗ್ಗೆ ಮಾಹಿತಿ ತಿಳಿದಿದ್ದು, ಪರಿಶೀಲನೆ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದೆ.
ಪೆಪ್ಸಿಕೋ ಕಂಪನಿಯು ಎಫ್‌ಸಿ5 ವಿಧದ ಆಲೂಗಡ್ಡೆಯನ್ನು ಅಭಿವೃದ್ಧಿಪಡಿಸಿದೆ. 2016ರಲ್ಲಿ ಇದರ ನೋಂದಣಿ ಮಾಡಿರುವುದಾಗಿ ಸಮರ್ಥಿಸಿಕೊಂಡಿದ್ದವು. ಪಿಪಿವಿಎಫ್‌ಆರ್ ಪ್ರಾಧಿಕಾರದ ತೀರ್ಪನ್ನು ಶ್ಲಾಘಿಸಿರುವ ಗುಜರಾತ್‌ನ ಆಲೂಗಡ್ಡೆ ರೈತರು, ಇದು ಬೆಳೆಗಾರರ ವಿಜಯ ಎಂದಿದ್ದಾರೆ. ಈ ಆದೇಶವು ಭಾರತದ ರೈತರಿಗೆ ದೊಡ್ಡ ವಿಜಯವಾಗಿದೆ.
ಯಾವುದೇ ಬೆಳೆಗಳನ್ನು ಬೆಳೆಯುವ ಅವರ ಹಕ್ಕಿಗೆ ಬಲ ನೀಡಿದೆ ಎಂದು 2019ರಲ್ಲಿ ಪೆಪ್ಸಿಕೋ ವಿರುದ್ಧ ಕೇಸ್ ದಾಖಲಿಸಿರುವ ಗುಜರಾತ್ ಮೂಲದ ರೈತರಲ್ಲಿ ಒಬ್ಬರಾದ ಬಿಪಿನ್ ಪಟೇಲ್ ಹೇಳಿದ್ದಾರೆ.