ಕೈ ಬಂದ್‌ಗೆ ರಾಜ್ಯದ ಜನತೆ ಬೆಂಬಲ ಕೊಡುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು

ಹುಬ್ಬಳ್ಳಿ : ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಅವರು ಇದೇ 9ರಂದು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ರಾಜ್ಯದ ಜನತೆ ಯಾವುದೇ ಕಾರಣಕ್ಕೂ ಬೆಂಬಲ ಕೊಡುವುದಿಲ್ಲ. ಬಂದ್‍ಗೆ ಕೊಡುವವರು ಮೊದಲು ಪರಿಶುದ್ದವಾಗಿರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ತಮ್ಮನ್ನು ತಾವು ಸತ್ಯಹರಿಶ್ಚಂದ್ರರು ಎಂದುಕೊಂಡಿದ್ದಾರೆ. ಕಾಂಗ್ರೆಸ್ಸೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು. ಆಪಾದನೆ ಮಾಡುವವರು ಮೊದಲು ಶುದ್ಧ ಹಸ್ತರಿರಬೇಕು. ಆಗ ಅದಕ್ಕೆ ಬೆಲೆ ಬರುತ್ತದೆ. ಕಾಂಗ್ರೆಸ್‍ನವರು ದಿಂಬು, ಹಾಸಿಗೆಯನ್ನೂ ಬಿಟ್ಟಿಲ್ಲ. ಬಿಸ್ಕೆಟ್, ಕಾಫಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಸಿದ್ಧರಾಮಯ್ಯ ಎಷ್ಟೆಲ್ಲ ಟಾರ್ಗೆಟ್ ಕೊಟ್ಟಿದ್ದರು ಎಂಬುದನ್ನು ಎಂ.ಬಿ.ಪಾಟೀಲ್, ಜಾರ್ಜ್‌, ಮಹದೇವಪ್ಪಗೆ ಕೇಳಬೇಕು. ಭ್ರಷ್ಟಾಚಾರದ ಕೂಪದಲ್ಲಿ ಇರುವವರು ಆಪಾದನೆ ಮಾಡಿದರೆ ನಡೆಯುವುದಿಲ್ಲ ಎಂದರು.

ಇದನ್ನೂ ಓದಿ : ಸಿಎಂ ರಾಜೀನಾಮೆಗೆ ಆಗ್ರಹಿಸಿ ಮಾರ್ಚ್‌ 9 ರಂದು ಕರ್ನಾಟಕ ಬಂದ್‌ ಗೆ ಕೈ ಕರೆ

ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ಬಂದ್ ಆಗುತ್ತಿದೆ. ಹೀಗಾಗಿ ರಾಜ್ಯ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ. ಕಾಂಗ್ರೆಸ್ ಮಾಡಿದ ಕರ್ಮಕಾಂಡ ಒಂದಾ, ಎರಡಾ? ಬಂದ್ ಮೂಲಕ ತಮ್ಮ ರಾಜಕೀಯ ಭವಿಷ್ಯ ಬರೆದುಕೊಳ್ಳಬಹುದು ಎಂಬುದು ಮೂರ್ಖತನ. ಚುನಾವಣಾ ಅಖಾಡವಿದೆ. ಜನರೇ ವಿಮರ್ಶೆ ಮಾಡುತ್ತಾರೆ ಎಂದು ಹೇಳಿದರು. ಬೆಳಗಾವಿ ರಾಜಹಂಸಗಢದಲ್ಲಿ ಕಾಂಗ್ರೆಸ್‍ನಿಂದ ಶಿವಾಜಿ ಪ್ರತಿಮೆ ಮರುಉದ್ಘಾಟನೆ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಇದೊಂದು ಹಾಸ್ಯಾಸ್ಪದ ಸಂಗತಿ. ಸರ್ಕಾರವೇ ಬಂದು ಮೂರ್ತಿ ಉದ್ಘಾಟನೆ ಮಾಡಿದ ಮೇಲೆ ಈ ರೀತಿ ಮಾಡುವುದು ಸರಿಯಲ್ಲ. ಒಣ ಪ್ರತಿಷ್ಠೆಗಾಗಿ ಮಾಡಿದ್ದಾರೆ. ರಾಷ್ಟ್ರನಾಯಕರ ಹೆಸರಲ್ಲಿ ರಾಜಕೀಯ ಮಾಡುವುದು ಥರವಲ್ಲ. ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಐಎಸ್‍ಕೆಪಿ ಹೊಣೆ ಹೊತ್ತ ವಿಚಾರಕ್ಕೆ ಈಗ ಡಿಕೆಶಿ ಏನು ಹೇಳುತ್ತಾರೆ ಕೇಳಬೇಕು. ಬರೀ ಸಾದಾ ಕುಕ್ಕರ್ ಎಂದು ಡಿಕೆಶಿ ಹೇಳಿದ್ದರು. ಬಿಜೆಪಿಯವರು ಇದರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದಿದ್ದರು. ಈಗ ಈ ವಿಚಾರಕ್ಕೆ ಡಿಕೆಶಿ ಏನು ಹೇಳುತ್ತಾರೆ ಪ್ರಶ್ನಿಸಿ ಎಂದು ತಿರುಗೇಟು ನೀಡಿದರು.

ಭ್ರಷ್ಟಾಚಾರ ವಿರೋಸಿ ಬಿಜೆಪಿ ಸರ್ಕಾರದ ವಿರುದ್ಧ ಮಾ.9ಕ್ಕೆ ರಾಜ್ಯ ಬಂದ್‍ಗೆ ಕರೆ ನೀಡಿರುವುದಾಗಿ ಡಿಕೆಶಿ ಹೇಳಿದ್ದರು. ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ, ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರ ಸರ್ಕಾರ ಎಂದು ಆರೋಪಿಸಿದ್ದರು.

ಭ್ರಷ್ಟಾಚಾರದ ಕಿಂಗ್ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟ ಕೈಗೊಂಡಿದೆ. ಕರ್ನಾಟಕದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40% ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸಿಎಂ, ಕಾಂಗ್ರೆಸ್‍ನವರ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನ ಅವರಿಗೆ ಬೆಂಬಲ ಕೊಡುವುದಿಲ್ಲ ಎಂದು ಟೀಕಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *