ಗದಗ: ಜನರನ್ನು ನಂಬಿಸಿ ಹಣ ಮಾಡುತ್ತಿದ್ದ ಡೋಂಗಿ ಬಾಬಾನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗದಗ ನಗರದ ಗಂಗಿಮಡಿ ಆಶ್ರಯ ಕಾಲೋನಿಯಲ್ಲಿ ಡೋಂಗಿ ಬಾಬಾ ಅಲಿಯಾಸ್ ಆಸೀಫ್ ಜಾಗಿರದಾರ್ ಎಂಬುವ ವ್ಯಕ್ತಿ ಜನರನ್ನು ನಂಬಿಸಿ ಮೋಸ ಮಾಡುತ್ತಿದ್ದ. ಸದ್ಯ ಈತನ ಕೃತ್ಯ ಬಯಲಾಗಿದ್ದು ಸ್ಥಳೀಯರು ಡೋಂಗಿ ಬಾಬಾನಿಗೆ ತಕ್ಕ ಪಾಠ ಕಲಿಸಿದ್ದಾರೆ.
ಮೂಲತಃ ವಿಜಯಪುರ ಜಿಲ್ಲೆಯವನಾಗಿದ್ದ ಡೋಂಗಿ ಬಾಬಾ ಅನೇಕ ದಿನಗಳಿಂದ ದೇವರ ಹೆಸರಲ್ಲಿ ಮಾಟ, ಮಂತ್ರ ಮಾಡುತ್ತ ಹಣ ಮಾಡುತ್ತಿದ್ದ. ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪದಲ್ಲಿ ಕೈ ಹಾಕುವುದು. ಅದರಿಂದ ಬೋಂಡ, ಬಜ್ಜಿ ತೆಗೆಯುವುದು. ಏಕಾಏಕಿ ಮೈಮೇಲೆ ದೇವರು ಬಂದಂತೆ ನಟಿಸಿ ಜನರನ್ನ ನಂಬಿಸಿ. ನಿಂಬೆಹಣ್ಣು, ಬೂದಿ ಕೊಟ್ಟು ಜನರಿಗೆ ಮೋಸ ಮಾಡುತ್ತಿದ್ದ. ದೇವರ ಪವಾಡವೆಂದು ಜನ್ರ ಮೈಂಡ್ ವಾಶ್ ಮಾಡಿ ಜನರಿಗೆ ಮಂಕುಬೂದಿ ಎರಚಿದ್ದ. ಡೋಂಗಿ ಬಾಬಾನ ಅಸಲಿ ಮುಖವಾಡ ಗೊತ್ತಾಗುತ್ತಿದ್ದಂತೆ ನಂಬಿ ಮೋಸ ಹೋದ ಜನ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸ್ಥಳೀಯರಿಂದ ಏಟು ತಿಂದ ಬಳಿಕ ಡೋಂಗಿ ಬಾಬಾ ನಾನು ಮಾಡಿದ್ದು ಮೋಸ.. ತಪ್ಪಾಗಿದೆ ಕ್ಷಮಿಸಿ ನನ್ನನ್ನು ಬಿಟ್ಟುಬಿಡಿ ಎಂದು ಕೈ ಕಾಲು ಹಿಡಿದು ಬೇಡಿಕೊಂಡಿದ್ದಾನೆ. ಆದ್ರೆ ಇವನ ಮಾತಿಗೆ ಮರಳಾಗದ ಜನ ಆತನಿಗೆ ತಕ್ಕ ಶಿಕ್ಷೆ ಸಿಗುವಂತೆ ಮಾಡಿದ್ದಾರೆ. ಅದರಲ್ಲೂ ಓರ್ವ ಮಹಿಳೆ ಬಾಬಾನಿಗೆ ಮನಸ್ಸೋ ಇಚ್ಚೇ ಗೂಸ ಕೊಟ್ಟಿದ್ದಾಳೆ. ಇದೀಗ ಆರೋಪಿ ಬಾಬಾನನ್ನು ಸ್ಥಳೀಯರು ಗದಗ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಷ್ಟಪಟ್ಟು ಮೈ ಬಗ್ಗಿಸಿ ದುಡಿಯದೇ ಆರಾಮಾಗಿ ಹಣ ಮಾಡಲು ಮುಂದಾಗಿದ್ದ ಡೋಂಗಿಬಾಬಾ ಈಗ ಕಂಬಿ ಎಣಿಸುವಂತಾಗಿದೆ.