ಹಾಸನ: ಹಾಸನ ಲೋಕಸಭಾ ಕ್ಷೇತ್ರದ ರಾಜಕೀಯ ಪಕ್ಷವೊಂದರ ಅಭ್ಯರ್ಥಿಯೊಬ್ಬರಿಗೆ ಸೇರಿದೆ ಎನ್ನಲಾದ ಆಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನೊಳಗೊಂಡ ಪೆನ್ಡ್ರೈವ್ ಹಂಚಿಕೆಗೆ ಆಕ್ರೋಶ ವ್ಯಕ್ತಲಪಡಿಸಿರುವ ಸಿಪಿಐಎಂ ಬಲಿಯಾಗಿರುವ ಸಂತ್ರಸ್ಥ ಮಹಿಳೆಯರನ್ನು ರಕ್ಷಿಸುವಂತೆ ಆಗ್ರಹಿಸಿದೆ.
ಹಾಸನ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಏಕಾಏಕಿ ಪೆನ್ಡ್ರೈವ್ ಚರ್ಚೆ ಮುನ್ನಲೆಗೆ ಬಂದಿದ್ದು, ಈ ಕುರಿತು ಅಂತೆಕಂತೆಗಳು ಹರಿದಾಡುತ್ತಿವೆ. ಆದರೆ, ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಾದವಾಗುತ್ತದೆ. ಯಾವುದೋ ಮತ್ತು ಯಾರದೋ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯವಾಗಿದೆ ಎಂದಿರುವ ಹಾಸನ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಆತಂಕ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಇಂತಹ ಪೆನ್ಡ್ರೈವ್ ಸುದ್ದಿಯಾಗಿದ್ದು, ಅದೆಷ್ಟೋ ಮಹಿಳೆಯರು ಇದರಲ್ಲಿ ಸಂತ್ರಸ್ಥರಾಗಿರುವ ಸಾಧ್ಯತೆ ಇದೆ. ಈ ಕುಕೃತ್ಯದಿಂದಾಗಿ ಹಲವಾರು ಮಹಿಳೆಯರ ಬದುಕು ಛಿದ್ರಗೊಳ್ಳುತ್ತಿದೆ. ಈವಿಚಾರದಲ್ಲಿ ದೂರು ದಾಖಲಾಗಿದ್ದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಮೌನವಹಿಸಿರುವುದು ಸರಿಯಲ್ಲ. ಈ ವಿಚಾರದಲ್ಲಿ ಸಂಬಂಧಪಟ್ಟವರು ಯಾವುದೇ ಗಂಭೀರವಾದ ಪ್ರಯತ್ನ ಮಾಡದಿರುವುದು ಅತ್ಯಂತ ಖಂಡನೀಯ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಅಭಿಪ್ರಾಯಪಟ್ಟಿದೆ.
ಆದ್ದರಿಂದ ಕರ್ಮಕಾಂಡಕ್ಕೆ ಕಾರಣವಾಗಿರುವ ಮೂಲ ವ್ಯಕ್ತಿ ಮತ್ತು ಹಾಗೂ ಲೈಂಗಿಕ ದೃಶ್ಯಗಳನ್ನು ಸಾರ್ವಜನಿಕರಿಗೆ ಹಂಚುತ್ತಿರುವ ವ್ಯಕ್ತಿಯನ್ನು ಗುರುತಿಸಿ ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕು. ಹಾಗೂ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಬೇಕೆಂದು ಧರ್ಮೇಶ್ ಒತ್ತಾಯಿಸಿದ್ದಾರೆ.