ಬೆಂಗಳೂರು : “ಪುರುಷೋತ್ತಮ ಬಿಳಿಮಲೆ ಅವರು ಹೇಳಿದ ವ್ಯಕ್ತಿಗೆ ಶಾಮಿಯಾನದ ಗುತ್ತಿಗೆ ನೀಡಿಲ್ಲ. ಆ ಕಾರಣಕ್ಕೆ ಸುಳ್ಳು ಆರೋಪ ಮಾಡಿದ್ದಾರೆʼ ಎಂದು ಹೇಳುವ ಮೂಲಕ ಜೋಷಿ ಪೆಂಡಾಲ್ ನೊಳಗೆ ನುಸಳಿದ್ದಾರೆ.
ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಸಮ್ಮೇಳನಕ್ಕೆ ಮುಸ್ಲಿಮರ ಕಡೆಗಣನೆ ಮಾಡಲಾಗಿದೆ ಎಂಬ ಆರೋಪಕ್ಕೆ ಪೆಂಡಾಲ್ ಅಡ್ಡ ಹಿಡಿದಿರುವ ಮಹೇಶ್ ಜೋಷಿ ಕ್ರಮಕ್ಕೆ ವ್ಯಾಪಕ ಟೀಕೆ ಕೇಳಿ ಬಂದಿದೆ.
ಮಹೇಶ್ ಜೋಷಿ ಹೇಳಿದ್ದೇನು? : ಹಾವೇರಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಜೋಷಿ, ಲೇಖಕ ಪುರುಷೋತ್ತಮ ಬಿಳಿಮಲೆ ಅವರು ದೂರವಾಣಿ ಕರೆ ಮಾಡಿ, ‘ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಪೆಂಡಾಲ್ (ಪೆಂಡಾಲ್) ಹಾಕಲು ಪರಿಚಿತರಾದ ಮುಸ್ಲಿಂ ವ್ಯಾಪಾರಿಯೊಬ್ಬರಿಗೆ ಕೊಡಿಸಿ’ ಎಂದು ಕೇಳಿದ್ದರು. ಅದಕ್ಕೆ ನಾನು ‘ಅದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ. ಅದು ನನ್ನ ಕ್ಷೇತ್ರವಲ್ಲ’ ಎಂದು ಹೇಳಿದ್ದೆ. ಇದನ್ನೇ ನೆಪವಾಗಿಟ್ಟುಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದಿದ್ದರು.
ಸಾಕ್ಷಿ ಕೇಳಿದ ಬಿಳಿಮಲೆ : ಪೆಂಡಾಲ್ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು, ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ ಎಂದು ಪುರುಷೋತ್ತಮ ಬಿಳಿಮಲೆ ಸವಾಲು ಎಸೆದಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ ಜೋಷಿಯವರು ನನ್ನ ಮೇಲೆ ಮಾಡಿದ ಆರೋಪಗಳನ್ನು ಗಮನಿಸಿದೆ. ಪರಿಷತ್ತಿನ ಕಾರ್ಯ ವಿಧಾನಗಳ ಬಗ್ಗೆ ನಾನು ಅಸಮಾಧಾನ ಸೂಚಿಸಿದ್ದು ನಿಜ. ಹಾವೇರಿ ಸಮ್ಮೇಳನದಲ್ಲಿ ಎಲ್ಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಲ್ಲ ಎಂಬ ಅನೇಕರ ಮಾತಿಗೆ ನಾನೂ ಧನಿಗೂಡಿಸಿದ್ದೇನೆ. ಇದು ಪ್ರಜಾಪ್ರಭುತ್ವ ನನಗೆ ತಂದುಕೊಟ್ಟ ಹಕ್ಕು, ಮತ್ತು ಹೀಗೆ ಬರೆಯುವುದು ನನ್ನ ಕರ್ತವ್ಯ ಎಂದು ನಾನು ನಂಬಿದ್ದೇನೆ. ಇದರ ಹೊರತಾಗಿ ನಾನು ಜೋಷಿಯವರ ಸಹಿತವಾಗಿ ಯಾರ ವೈಯಕ್ತಿಕ ವಿಚಾರಗಳ ಬಗ್ಗೆಯೂ ಬರೆದಿಲ್ಲ. ಅವರು ಹಾವೇರಿ ಸಮ್ಮೇಳನಕ್ಕೆ ನನ್ನನ್ನು ಕರೆದಿದ್ದರು. ನನ್ನದೇ ಕಾರಣಗಳಿಗಾಗಿ ಬರಲಾಗುವುದಿಲ್ಲ ಎಂದು ಹೇಳಿದ್ದೇನೆ. ಅದಕ್ಕೆ ಅವರು ಇಷ್ಟೊಂದು ಆರೋಪಗಳನ್ನು ಮಾಡುವ ಅಗತ್ಯ ಇರಲಿಲ್ಲ.
ನಾನು ಮತ್ತು ನನ್ನಂಥ ಹಲವರು ಪರಿಷತ್ತಿನ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಗೊತ್ತಿಲ್ಲದ ಜೋಷಿಯವರು ವೈಯಕ್ತಿಕವಾಗಿ ಮಾನಹಾನಿಯಾಗುವಂಥ ಮಾತುಗಳನ್ನು ಆಡಿದ್ದಾರೆ. ಈ ಮಾತುಗಳ ಮೂಲಕ ಅವರು ಸಾಹಿತ್ಯ ಪರಿಷತ್ತು ಇವತ್ತು ಎಂಥವರ ಕೈಯಲ್ಲಿದೆ ಎಂಬುದನ್ನು ಮತ್ತೆ ಸಾರ್ವಜನಿಕರಿಗೆ ತಿಳಿಯಪಡಿಸಿದ್ದಾರೆ. ಅವರು ಪೆಂಡಾಲ್ ಬಗ್ಗೆ ಹೇಳಿದ ಮಾತುಗಳು ಅತ್ಯಂತ ಹಾಸ್ಯಾಸ್ಪದವಾದದ್ದು. ಅವರದನ್ನು ಸಾಬೀತು ಪಡಿಸಬೇಕು, ಸಾಬೀತು ಪಡಿಸಲಾಗದಿದ್ದರೆ ಪರಿಷತ್ತಿನ ಅಧ್ಯಕ್ಷ ಪೀಠಕ್ಕೆ ಅವರು ಯೋಗ್ಯರಲ್ಲ ಎಂದೇ ಭಾವಿಸಬೇಕಾಗುತ್ತದೆ. ಸಾರ್ವಜನಿಕ ಸಂಘ ಸಂಸ್ಥೆಗಳ ಜವಾಬ್ದಾರಿ ಹೊತ್ತವರು ಲಜ್ಜೆಗೆಟ್ಟು ಯಾವ ನೀಚ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಮಹೇಶ್ ಜೋಷಿಯವರ ಮಾತುಗಳೇ ಸಾಕ್ಷಿ.
ಇಂಥದ್ದರ ವಿರುದ್ಧವಾಗಿ ಪ್ರತ್ಯೇಕ ಸಮ್ಮೇಳನಗಳನ್ನು ಸಂಘಟಿಸಿಕೊಳ್ಳಬೇಕಾದ್ದು ಇವತ್ತಿನ ತುರ್ತು ಅಗತ್ಯ ಎಂದು ತಿಳಿಸಿದ್ದಾರೆ.
ವ್ಯಾಪಕ ಖಂಡನೆ : ಮಹೇಶ್ ಜೋಷಿಯವರ ಈ ವರ್ತನೆಗೆ ಸಾರ್ವಜನಿಕರು, ಸಾಹಿತಿಗಳು ಹಾಗೂ ಜನಪರ ಸಂಘಟನೆಗಳು ಆಕ್ರೋಶವನ್ನು ಹೊರಹಾಕಿವೆ. ಇದಕ್ಕಾಗಿ ಖಂಡನಾ ಸಭೆ ಕೂಡ ನಡೆದಿದೆ. ಕಸಾಪ ಕನ್ನಡ ಸಾಹಿತ್ಯ ಸಮ್ಮೇಳನದ ದ್ವೇಷದ ರಾಜಕಾರಣವನ್ನು ವಿಮರ್ಶೆ ಮಾಡಿದ ಕನ್ನಡ ನಾಡಿನ ಖ್ಯಾತ ಚಿಂತಕ ಪ್ರೊ ಪುರುಷೋತ್ತಮ ಬಿಳಿಮಲೆ ವಿರುದ್ದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಸುಳ್ಳು ಆರೋಪ ಮಾಡಿ ನಾಚಿಕೆಗೇಡಿನ ವರ್ತನೆ ತೋರಿದ್ದಾರೆ. ಈ ರೀತಿಯ ಕೀಳುಮಟ್ಟದ ನಡತೆಯನ್ನು ಹೊಂದಿರುವ ಮಹೇಶ್ ಜೋಶಿ ಯಾವ ಕಾರಣಕ್ಕೂ ತನ್ನ ಹುದ್ದೆಯಲ್ಲಿ ಮುಂದುವರೆಯಬಾರದು. ಕನ್ನಡದ ಸಾಹಿತಿಗಳೆಲ್ಲರೂ ಮಹೇಶ್ ಜೋಶಿ ವರ್ತನೆಯನ್ನು ಖಂಡಿಸಿ, ಪ್ರೊ ಪುರುಷೋತ್ತಮ ಬಿಳಿಮಲೆಯವರ ಜೊತೆ ನಿಲ್ಲುವ ಬಗ್ಗೆ ಸಭೆ ತೀರ್ಮಾನವನ್ನು ತೆಗೆದುಕೊಂಡಿದೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ, ಹಿರಿಯ ಚಿಂತಕರಾದ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, “ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರು ತಾನು ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎನ್ನುತ್ತಾರೆ. ಅದು ನಿಜವೇ ಆಗಿದ್ದಲ್ಲಿ ಅವರ ನಡೆ, ನುಡಿಯಲ್ಲಿ ತೋರಿಸಬೇಕು. ಕಸಾಪ ಒಂದು ಕಾಲದಲ್ಲಿ ಕನ್ನಡದ ಪ್ರತಿಷ್ಠಿತ ಸಾಂಸ್ಕೃತಿಕ ಸಂಘಟನೆಯಾಗಿತ್ತು. ಆದರೆ ಈಗ ನಾಡಿನ ಚಿಂತನೆಯನ್ನೇ ಕಸಾಪ ಇಟ್ಟುಕೊಂಡಿಲ್ಲ. ಮಹೇಶ್ ಜೊಶಿಯವರು ಕಸಾಪವನ್ನು ಸರಿ ಮಾಡಲಾಗದ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಹೀಗೆ ಮುಂದುವರೆದರೆ ಜಾತ್ಯಾತೀತ ಮನೋಭಾವದ ಸದಸ್ಯರೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುವ ಮೂಲಕ ಉತ್ತರ ನೀಡಬೇಕಾದೀತು” ಎಂದು ಅಗ್ರಹಾರ ಕೃಷ್ಣಮೂರ್ತಿಯವರು ಎಚ್ಚರಿಸಿದರು.
ಜನವಾದಿ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಮಾತನಾಡಿ “ಬಿಳಿಮಲೆ ಅವರ ಕುರಿತಾದ ಜೋಶಿಯ ಹೇಳಿಕೆಯನ್ನು ನಾವೆಲ್ಲರೂ ಖಂಡಿಸಬೇಕು. ಹಸಿ ಹಸಿ ಸುಳ್ಳು ಹೇಳುತ್ತಿರುವ ಜೋಷಿಯ ಮುಖವಾಡವನ್ನು ಬಯಲು ಮಾಡಬೇಕು ಎಂದರು.
ಮಾಜಿ ಐಪಿಎಸ್ ಅಧಿಕಾರಿ, ಸಾಹಿತಿ ಬಿ ಕೆ ಶಿವರಾಂ ಮಾತನಾಡಿ “ಕಸಾಪ ಈಗ ದಳ್ಳಾಳಿಗಳ ಕೂಟವಾಗಿದೆ. ಇಂದು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪಸರಿಸಿದ ಪ್ರೊ ಬಿಳಿಮಲೆಯ ಬಗ್ಗೆ ಕೆಟ್ಟದಾಗಿ ಆರೋಪಿಸಿದ ಕಸಾಪ ಅಧ್ಯಕ್ಷ ಜೋಶಿ ನಾಳೆಯ ದಿನ ಶಿಶುನಾಳ ಶರೀಫರನ್ನು ಹೀಯಾಳಿಸಿದತೂ ಅಚ್ಚರಿಯಿಲ್ಲ” ಎಂದರು.
ಹಿರಿಯ ರಂಗಕರ್ಮಿ ಗುಂಡಣ್ಣ ಚಿಕ್ಕಮಗಳೂರು, ಲೈಂಗಿಕ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ, ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್ ಜನಪರ ಸಂಘಟನೆಗಳ ನಾಯಕಾರದ ಡಾ ಎಚ್ ವಿ ವಾಸು, ಬಸವರಾಜ ಪೂಜಾರ, ಅಮರೇಶ್ ಕಡಗದ್, ಹುಲಿಕುಂಟೆ ಮೂರ್ತಿ, ರಾಜಶೇಖರ್ ಕಿಗ್ಗ, ಟಿ ಸುರೇಂದ್ರ ರಾವ್ ವಿನಯ್ ಶ್ರೀನಿವಾಸ್, ವಿಶ್ವನಾಥ್ ಅನೆಕಟ್ಟೆ, ಸನತ್ ಕುಮಾರ್, ಅಬ್ಬಾಸ್ ಕಿಗ್ಗ, ನಾಚೇಗೌಡ, ಮುರಳಿ ಕಾಟಿ, ಲವನಿಕಾ, ಕಾವ್ಯ ಅಚ್ಯುತ್, ಸುರಭಿ ರೇಣುಕಾಂಬಿಕೆ, ವಿಕಾಸ್ ಪೂಜಾರಿ, ನಾಗೇಂದ್ರ, ಸಂಗಮೇಶ್, ದಿಲೀಪ್, ಸಾಗರ್, ಭೀಮನಗೌಡ, ಮುರಳಿ ಮಾಲೂರು, ಕುಮಾರಸ್ವಾಮಿ ಬೆಜ್ಜಿಹಳ್ಳಿ, ಕುಶಾಲ್ ಗೌಡ, ಗಣೇಶ್ ರಾಥೋಡ್, ರಮೇಶ್ ಹಾಸನ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಫೋನ್ ಕಟ್ ಮಾಡಿದ ಜೋಷಿ : ಈ ಕುರಿತು ಮಹೇಶ್ ಜೋಷಿಯವರ ಅಭಿಪ್ರಾಯ ಪಡೆಯಲು ಜನಶಕ್ತಿ ಮೀಡಿಯಾ ದೂರವಾಣಿ ಮೂಲಕ ಸಂಪರ್ಕಿಸಿತು. ಕರೆ ಸ್ವೀಕರಿಸಿದ ಜೋಷಿ ” ಬಿಳಮಲೆಯವರ ಕುರಿತು ನೀವು ಮಾಡಿರುವ ಆರೋಪಕ್ಕೆ ಸಾಕ್ಷಿ ಒದಗಿಸುವಿರಾ?” , ಎಂದು ಪ್ರಶ್ನೆ ಕೇಳುತ್ತಿದ್ದಂತೆ ನಾನು ಸಭೆಯಲ್ಲಿದ್ದೇನೆ. ನಂತರ ಕಾಲ್ ಮಾಡುವೆ ಎಂದು ಕಾಲ್ ಕಟ್ ಮಾಡಿದರು. ಇಲ್ಲಿಯವರೆಗೆ ಅವರಿಂದ ಯಾವುದೆ ಕರೆ ಬಂದಿಲ್ಲ. ಕರೆ ನೀಡಿ ಮಾಹಿತಿ ನೀಡಿದರೆ ಅಪ್ಡೇಟ್ ಮಾಡಲಾಗುವುದು.