ಬೆಂಗಳೂರು: ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯಾಗಿದ್ದು(SIT) ತಂಡ ವಿಚಾರಣೆಯನ್ನು ಇಂದು ಭಾನುವಾರವೇ ಆರಂಭಿಸಲಿದೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಹಿತಿ ನೀಡಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ಎಸ್ ಐಟಿ ಇನ್ನು ಕೆಲವೇ ಹೊತ್ತಿನಲ್ಲಿ ತನಿಖೆ ಆರಂಭಿಸಲಿದೆ. ಪ್ರಜ್ವಲ್ ರೇವಣ್ಣ ಅವರಿಗೆ ನೊಟೀಸ್ ಜಾರಿ ಮಾಡುವುದು ಅಥವಾ ಬಿಡುವುದು ಎಸ್ ಐಟಿಗೆ ಬಿಟ್ಟ ತೀರ್ಮಾನ.ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಯಾವುದೇ ಹಸ್ತಕ್ಷೇಪವಿಲ್ಲದೆ ತನಿಖೆ ನಡೆಯಲಿದೆ ಎಂದರು. ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿರುವ ಬಗ್ಗೆ ಮಾಹಿತಿ ಕೂಡ ಇದೆ ಎಂದು ಹೇಳಿದರು.
ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಎಸ್ಐಟಿ ತನಿಖೆಗೆ ಸಿಎಂ ಸೂಚನೆ
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ತುಣುಕುಗಳು ಈಗಾಗಲೇ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ತನಿಖೆಗೆ ಸರ್ಕಾರ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಎಡಿಜಿಪಿ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಎಡಿಜಿಪಿ ಬಿ.ಕೆ ಸಿಂಗ್ ಅವರು ಈ ಹಿಂದೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಮುಖ್ಯಸ್ಥರಾಗಿದ್ದರು. 3 ಎಸ್ ಪಿ, 4 ಡಿವೈಎಸ್ ಪಿ ಗಳನ್ನೊಳಗೊಂಡ ಎಸ್ಐಟಿ ರಚನೆಯಾಗಿದ್ದು, ಮೂವರು ಎಸ್ ಪಿಗಳಲ್ಲಿ ಓರ್ವ ಮಹಿಳಾ ಎಸ್ ಪಿಗೆ ಕೂಡ ಇದ್ದಾರೆ ಎಂದರು.
ಪ್ರಜ್ವಲ್ ರೇವಣ್ಣ ಜರ್ಮನಿಗೆ?: ಒಂದೆಡೆ ವಿಡಿಯೋ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತಂಡ ರಚಿಸುತ್ತಿದ್ದಂತೆ, ಅತ್ತ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಎನ್ನಲಾಗಿದೆ. ನಿನ್ನೆ ಮುಂಜಾನೆ 3 ಗಂಟೆ ಸುಮಾರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಿಂದ ಜರ್ಮನಿಯ ಫ್ರಾಂಕ್‌ಫರ್ಟ್‌ಗೆ ಹೋಗಿದ್ದಾರೆ ಎನ್ನಲಾಗಿದೆ. ಆದರೆ ಅವರು ಪೂರ್ವ ನಿಯೋಜಿತ ಕಾರ್ಯಕ್ರಮದ ನಿಮಿತ್ತ ವಿದೇಶಕ್ಕೆ ಹೋದರಾ ಅಥವಾ ತನಿಖೆಗೆ ವಿಶೇಷ ತಂಡ ರಚನೆ ಆಗುತ್ತಿದೆ ಎಂದು ತಿಳಿದು ಹೋದರಾ ಎನ್ನುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಏನಿದು ಪ್ರಕರಣ?: ಹಾಸನ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಹಲವು ವಿಡಿಯೊಗಳು ಎರಡು ಮೂರು ಪೆನ್‌ಡ್ರೈವ್‌ಗಳಲ್ಲಿ ಹಾಸನ ಜಿಲ್ಲೆಯಾದ್ಯಂತ ಹರಿದಾಡುತ್ತಿವೆ ಎಂದು ಸಾಮಾಜಿಕ ಜಲತಾಣದಲ್ಲಿ ಚರ್ಚೆ ಆಗುತ್ತಿತ್ತು. ಒಂದಲ್ಲ, ಎರಡಲ್ಲ ಸಾವಿರಾರು ವಿಡಿಯೋಗಳಿವೆ ಎಂದು ಹೇಳಲಾಗಿದೆ. ಹಲವು ಮಹಿಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ.
ಟ್ವಿಟರ್ ಸೇರಿದಂತೆ ಸೋಷಿಯಲ್ ಮಿಡಿಯಾಗಳ ಮೂಲಕವೂ ವಿಡಿಯೋ ವೈರಲ್ ಆಗುತ್ತಿವೆ. ಆದರೆ ಇದು ಮಾರ್ಫ್ ಮಾಡಲಾದ ವಿಡಿಯೋ ಎಂದು ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದರು. ಆದರೆ ಇನ್ನೊಂದೆಡೆ ಇದು ನೈಜ ವಿಡಿಯೋ ಎಂದು ಹೇಳಲಾಗುತ್ತಿದೆ. ಇದು ರಾಜ್ಯ ಮಹಿಳಾ ಆಯೋಗದ ಕೈ ಸೇರಿತ್ತು. ಇದರ ಬಗ್ಗೆ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಿಎಂಗೆ ಪತ್ರ ಬರೆದಿದ್ದರು.