ನವದೆಹಲಿ: ಬೇಹುಗಾರಿಕೆ ತಂತ್ರಾಂಶ ಪೆಗಾಸಸ್ ಒಪ್ಪಂದದ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಮತ್ತೆ ಸುದ್ದಿಯಾಗಿದೆ. 2017ರಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮತ್ತು ಗುಪ್ತಚರ ಇಲಾಖೆಗೆ ಸಂಬಂಧಪಟ್ಟ ಸಾಧನಗಳ ಖರೀದಿ ಒಪ್ಪಂದದ ಭಾಗವಾಗಿ ಅಂದಿನ ಕೇಂದ್ರ ಸರ್ಕಾರ (ಬಿಜೆಪಿ ಸರ್ಕಾರ) ಇಸ್ರೇಲ್ನಿಂದ ಪೆಗಾಸಸ್ ತಂತ್ರಾಂಶ ಖರೀದಿ ಮಾಡಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಪೆಗಾಸಸ್ ಬೇಹುಗಾರಿಕೆ ಬಗ್ಗೆ 2021ರಲ್ಲಿ ಭಾರೀ ಸುದ್ದಿ ಮಾಡಿತ್ತು. ಭಾರತದಲ್ಲಿ ಇಸ್ರೇಲಿ ಮೂಲದ ಪೆಗಾಸಸ್ ಬಳಸಿ, ರಾಜಕಾರಣಿಗಳು, ಪತ್ರಕರ್ತರು, ಮತ್ತಿತರ ಗಣ್ಯರು ಸೇರಿ 300ಕ್ಕೂ ಹೆಚ್ಚು ಜನರ ಫೋನ್ ಟ್ಯಾಪ್ ಮಾಡಲಾಗಿದೆ ಎಂದು ದಿ ವೈರ್ ಪ್ರಕಟಿಸಿತ್ತು. ಹಾಗೇ ಬಹುಮುಖ್ಯವಾಗಿ ಯಾರೆಲ್ಲರ ಫೋನ್ ಟ್ಯಾಪ್ ಆಗಿದೆ ಎಂಬ ಹೆಸರುಗಳನ್ನೂ ಬಹಿರಂಗಪಡಿಸಲಾಗಿತ್ತು. ಅದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಸೇರಿ ಅನೇಕರ ಹೆಸರುಗಳು ಇದ್ದವು.
2021ರಲ್ಲಿ ಪೆಗಾಸಸ್ ಬೇಹುಗಾರಿಕೆ ಬಗ್ಗೆ ಸುದ್ದಿ ಹೊರಬಿದ್ದಾಗ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿತ್ತು. ಗೃಹ ಸಚಿವ ಅಮಿತ್ ಶಾ ಸೇರಿ ಹಲವರು ಸಚಿವರು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದವು. ಹೀಗೆ ಇದೇ ವಿಚಾರದಲ್ಲಿ ಗಲಾಟೆ ನಡೆಯುತ್ತ, ತನಿಖೆಗೆ ಆದೇಶ ಮಾಡುತ್ತ, ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ತಡೆಯುಂಟಾಗಿತ್ತು.
ಈ ಪೆಗಾಸಸ್ ಬೇಹುಗಾರಿಕೆ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್ನಿಂದ ಸಮಿತಿ ರಚಿಸಲಾಗಿದ್ದು, ತನಿಖೆ ನಡೆಯುತ್ತಲೂ ಇದೆ. ಹೀಗಿರುವಾಗ ನ್ಯೂಯಾರ್ಕ್ ಟೈಮ್ಸ್ ಹೀಗೆ ವರದಿ ಮಾಡಿದೆ.
ನ್ಯೂಯಾರ್ಕ್ ಟೈಮ್ಸ್ ವರದಿ
ಜುಲೈ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ಗೆ ಭೇಟಿ ನೀಡಿದಾಗ ಭಾರತವು ಇಸ್ರೇಲ್‌ನೊಂದಿಗೆ 2 ಬಿಲಿಯನ್ ಡಾಲರ್ ಮೊತ್ತದ ಬೃಹತ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ಪ್ರಕಟಿಸಿದ ವರದಿಯಲ್ಲಿ ಹೇಳಿಕೊಂಡಿದೆ. ಈ ಒಪ್ಪಂದದಲ್ಲಿ ಕ್ಷಿಪಣಿ ವ್ಯವಸ್ಥೆಗಳ ಹೊರತಾಗಿ ಇಸ್ರೇಲಿ ಕಂಪನಿ ಎನ್ ಎಸ್ ಒ ತಯಾರಿಸಿದ ಪೆಗಾಸಸ್ ಸ್ಪೈವೇರ್ ಅನ್ನೂ ಖರೀದಿ ಮಾಡಿದೆ ಎಂದು ಹೇಳಿದೆ.
ಪ್ರತಿಪಕ್ಷಗಳು ವಾಗ್ದಾಳಿ
ಪೆಗಾಸಸ್ ಒಪ್ಪಂದದ ಕುರಿತು ನ್ಯೂಯಾರ್ಕ್ ಟೈಮ್ಸ್ ವರದಿಯ ನಂತರ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಮತ್ತೆ ವಾಗ್ದಾಳಿ ನಡೆಸಿದೆ. ಈ ವರದಿ ಬಗ್ಗೆ ಪ್ರಧಾನಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಪತ್ರಕರ್ತರು ಮತ್ತು ರಾಜಕಾರಣಿಗಳ ಮೇಲೆ ಕಣ್ಣಿಡಲು ಸರ್ಕಾರ ಪೆಗಾಸಸ್ ಸ್ಪೈವೇರ್ ಅನ್ನು ಜನರ ತೆರಿಗೆ ಹಣದಿಂದ 300 ಕೋಟಿ ರೂಪಾಯಿಗೆ ಖರೀದಿಸಿದೆ ಎಂಬುದು ಈ ವರದಿಯಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಶ್ರೀನಿವಾಸ್ ಬೀವಿ, ಶಕ್ತಿ ಸಿಂಗ್ ಗೋಹಿಲ್, ಕಾರ್ತಿ ಚಿದಂಬರಂ ಟ್ವೀಟ್ ಮಾಡಿ ಆರೋಪಿಸಿದ್ದಾರೆ.
ಮೋದಿ ಸರ್ಕಾರದಿಂದ ದೇಶದ್ರೋಹ
ಪೆಗಾಸಸ್ ಒಪ್ಪಂದದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ನೇತೃತ್ವದ ಸರ್ಕಾರದಿಂದ ದೇಶದ್ರೋಹದ ಕೆಲಸವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. “ನಮ್ಮ ಪ್ರಜಾಪ್ರಭುತ್ವದ ಪ್ರಾಥಮಿಕ ಸಂಸ್ಥೆಗಳು, ರಾಜ್ಯ ನಾಯಕರು ಮತ್ತು ಸಾರ್ವಜನಿಕರ ಮೇಲೆ ಕಣ್ಣಿಡಲು ಮೋದಿ ಸರ್ಕಾರ ಪೆಗಾಸಸ್ ಅನ್ನು ಖರೀದಿಸಿದೆ. ಫೋನ್ ಕದ್ದಾಲಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ, ವಿರೋಧ ಪಕ್ಷ, ಸೇನೆ, ನ್ಯಾಯಾಂಗ ಎಲ್ಲವನ್ನೂ ಟಾರ್ಗೆಟ್ ಮಾಡಲಾಗಿದೆ. ಇದು ದೇಶದ್ರೋಹ. ಮೋದಿ ಸರ್ಕಾರ ದೇಶದ್ರೋಹ ಮಾಡಿದೆ” ಎಂದು ಆರೋಪಿಸಿದ್ದಾರೆ.
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಟ್ವೀಟ್ ಮಾಡಿ, ಮೋದಿ ಸರ್ಕಾರ ಯಾಕೆ ಭಾರತದ ಶತ್ರುವಿನಿಂತೆ ವರ್ತಿಸುತ್ತಿದೆ. ಭಾರತದ ನಾಗರಿಕರ ವಿರುದ್ಧ ಯುದ್ಧಸ್ನೇಹಿ ಶಸ್ತ್ರಗಳನ್ನು ಬಳಸುವುದು ಯಾಕೆ? ಹೀಗೆ ಅಕ್ರಮ ಪೆಗಾಸಸ್ ಮೂಲಕ ಸ್ನೂಪಿಂಗ್ ಮಾಡುವುದು ದೇಶದ್ರೋಹ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಇದೆ ಎಂದಿದ್ದಾರೆ.
ಜನವರಿ 31ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಉಭಯ ಸದನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.