ಪೆಗಸಸ್ ಬೇಹುಗಾರಿಕೆ ಕುರಿತು ತನಿಖೆಗೆ ತಜ್ಞರ ಸಮಿತಿ ರಚನೆ: ಸಿಜೆಐ ರಮಣ

ನವದೆಹಲಿ: ಪೆಗಾಸಸ್‌ ಬೇಹುಗಾರಿಕೆ ಹಗರಣದ ಕುರಿತು ಸಮಗ್ರವಾಗಿ ತನಿಖೆಯನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಮುಂದಿನ ವಾರ  ತಜ್ಞರ ಸಮಿತಿ ರಚಿಸಲಿದೆ ಎಂದು  ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಹೇಳಿಕೆ ನೀಡಿದ್ದು, ಮುಂದಿನ ವಾರ ಮಧ್ಯಂತರ ಆದೇಶ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

“ನಾವು ಮುಂದಿನ ವಾರದೊಳಗೆ ತಾಂತ್ರಿಕ ತಜ್ಞರ ತಂಡದ ಸದಸ್ಯರನ್ನು ಅಂತಿಮಗೊಳಿಸಲು ಮತ್ತು ಆದೇಶಗಳನ್ನು ಹೊರಡಿಸಲು ಸಾಧ್ಯವಾಗುತ್ತದೆ” ಎಂದು ಮುಖ್ಯನ್ಯಾಯಮೂರ್ತಿ ರಮಣ ಅವರು ಹೇಳಿದ್ದಾರೆ. ಕೆಲವು ತಜ್ಞರು ವೈಯಕ್ತಿಕ ಕಾರಣಗಳಿಂದ ಸಮಿತಿಯ ಭಾಗವಾಗಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವು ಇದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನು ಓದಿ: ಪೆಗಾಸಸ್‌ ಬಗೆಗಿನ ಆರೋಪ ಆಧಾರರಹಿತ-ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರದ ಮಾಹಿತಿ

“ನಾವು ಈ ವಾರದ ಮೊದಲು ಈ ವಿಷಯದ ಬಗ್ಗೆ ಆದೇಶವನ್ನು ರವಾನಿಸಲು ಬಯಸಿದ್ದೇವೆ… ಆದರೆ ಕೆಲವು ಸದಸ್ಯರನ್ನು ನಾವು (ತಜ್ಞರು) ಸಮಿತಿಗೆ ಪರಿಗಣಿಸಲು ಯೋಚಿಸಿದ್ದೇವೆ… ವೈಯಕ್ತಿಕ ಕಾರಣಗಳಿಗಾಗಿ ಅವರು ಈ ಸಮಿತಿಯ ಭಾಗವಾಗಲು ನಿರಾಕರಿಸಿದರು. ಹೀಗಾಗಿ ವಿಳಂಬವಾಗಿದೆ ಎಂದು ಅವರು ಹೇಳಿದರು.

ಇಸ್ರೇಲ್‌ ಮೂಲದ ಬೇಹು ತಂತ್ರಾಂಶ ಸಂಸ್ಥೆ ಎನ್‌ಎಸ್‌ಒ ತನ್ನ ಪೆಗಸಸ್‌ ಸ್ಪೈವೇರ್‌ಗೆ ಹೆಸರುವಾಸಿಯಾಗಿದ್ದು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿತ್ತು. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಇದು ಯಾವ ಸರ್ಕಾರಗಳಿಗೆ ತನ್ನ ವಿವಾದಿತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಸಾಂವಿಧಾನಿಕ ಹುದ್ದೆಗಳಲ್ಲಿರುವವರ ಮೇಲೆ ನಿಗಾ ಇಡಲು ಭಾರತ ಸರ್ಕಾರ ಸೇರಿದಂತೆ ಜಗತ್ತಿನಾದ್ಯಂತ ವಿವಿಧ ಸರ್ಕಾರಗಳು ಪೆಗಸಸ್‌ ಸಾಫ್ಟ್‌ವೇರ್‌ ನೆರವು ಪಡೆದಿವೆ ಎಂದು ಭಾರತದ ʼದಿ ವೈರ್‌ʼ ಸೇರಿದಂತೆ ವಿಶ್ವದ ಹದಿನಾರು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳ ಒಕ್ಕೂಟ ತನಿಖಾ ವರದಿ ಪ್ರಕಟಿಸಿವೆ.

ಇದನ್ನು ಓದಿ: ಪೆಗಾಸಸ್‌ ಆರೋಪಗಳಲ್ಲಿ ಸತ್ಯಾಂಶವಿದ್ದರೇ, ಅದು ಗಂಭೀರವಾದದ್ದೇ: ಸುಪ್ರೀಂ ಕೋರ್ಟ್

ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಬಳಸಿ ಬೇಹುಗಾರಿಕೆ ನಡೆಸಿರುವ ಹಗರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿ ಬಹಿರಂಗವಾಗಿ ಚರ್ಚಿಸದಂತೆ ಸುಪ್ರೀಂಕೋರ್ಟ್ ಈಗಾಗಲೇ ಆದೇಶಿಸಿದೆ. ಕಳೆದ ಆಗಸ್ಟ್ 10ರಂದು ಹಿರಿಯ ಪತ್ರಕರ್ತ ಎನ್ ರಾಮ್, ಶಶಿಕುಮಾರ್, ಸಿಪಿಎಂ ಸಂಸದ ಜಾನ್ ಬ್ರಿತ್ತಾಸ್ ಹಾಗೂ ವಕೀಲ ಎಂಎಲ್ ಶರ್ಮಾ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ದ್ವಿಸದಸ್ಯ ಪೀಠವು ಈ ಹಿಂದೆ ವಿಚಾರಣೆ ನಡೆಸಿತು. ನ್ಯಾಯಾಲಯಕ್ಕೆ ನೀಡಿರುವ ಅರ್ಜಿಯ ಅಂಶವನ್ನು ಒಳಗೊಂಡ ಒಂದು ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚಿಸಿತ್ತು.

ಇಸ್ರೇಲ್ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ತಂತ್ರಾಂಶವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಸಾವಿರಾರು ಗಣ್ಯರ ಮೊಬೈಲ್ ಸಂಖ್ಯೆಯನ್ನು ಕದಿಯಲಾಗಿದೆ ಎಂದು ತನಿಖಾ ವರದಿಯಿಂದ ಗೊತ್ತಾಗಿದೆ. ವಿಶ್ವದಲ್ಲಿ ಒಟ್ಟು 50,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳನ್ನು ಕದ್ದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

Donate Janashakthi Media

Leave a Reply

Your email address will not be published. Required fields are marked *