ವೆನೆಜುವೇಲಾದಲ್ಲಿ ‘ಶಾಂತಿದೂತ’ ಟ್ರಂಪ್ ನ ಯುದ್ಧ ತಾಲೀಮು

-ವಸಂತರಾಜ ಎನ್.ಕೆ

ವೆನೆಜುವೇಲಾದ ಸಮುದ್ರ ಗಡಿಯ ಹತ್ತಿರದಲ್ಲಿ ಮೂರಕ್ಕೂ ಹೆಚ್ಚು ವಿಧ್ವಂಸಕ ಯುದ್ಧ ಹಡಗುಗಳು, ನೀರು-ನೆಲ ಎರಡರ ಮೇಲೂ ಹೋಗಬಲ್ಲ ವಾಹನಗಳು, ವೇಗವಾಗಿ ಚಲಿಸಬಲ್ಲ ಅಣುಶಕ್ತಿಯಲ್ಲಿ ನಡೆಯುವ ಸಬ್ ಮೇರೀನ್, 4000 ನೌಕಾಸೈನಿಕರು ಇತ್ಯಾದಿಗಳಿಂದ ಸಜ್ಜಿತವಾದ  ನೌಕಾಸೈನ್ಯದ ತುಕಡಿ ಗಸ್ತು ಹೊಡೆಯುತ್ತಿದೆ. ಕಳೆದ ಎರಡು ವಾರಗಳಲ್ಲಿ ವೆನೆಜುವೆಲಾದ ನೌಕೆಗಳ ಮೇಲೆ ಎರಡು (ಸೆಪ್ಟೆಂಬರ್ 2 ಮತ್ತು 15) ದಾಳಿಗಳನ್ನು ಮಾಡಿದೆ.  ವೆನೆಜುವೇಲಾದ ಸರಕಾರ ಉನ್ನತ ಅಧಿಕಾರಗಳೂ ಶಾಮೀಲಾಗಿರುವ ಯು.ಎಸ್ ವಿರುದ್ಧ ಉದ್ದೇಶಿತವಾಗಿರುವ ‘ಮಾದಕ-ಭಯೋತ್ಪಾದಕ’ (ನಾರ್ಕೊ-ಟೆರರಿಸಂ) ಕಾರ್ಯಾಚರಣೆಯನ್ನು ತಡೆಯಲು ಈ ಕ್ರಮ ಕೈಗೊಂಡಿದೆ ಎಂಬುದು ಯು.ಎಸ್ ಸಮಜಾಯಿಷಿ. ವೆನೆಜುವೇಲಾದ ಮೇಲೆ ಯು.ಎಸ್ ನ ಈ ‘ಮಾದಕ-ಭಯೋತ್ಪಾದಕ’ತೆಯ (ನಾರ್ಕೊ-ಟೆರರಿಸಂ) ಆಪಾದನೆ ಬರಿಯ ಕುಂಟು ನೆಪಮಾತ್ರ ಯುದ್ಧ ಹೂಡಲು. ವೆನೆಜುವೇಲಾದ ಮೇಲೆ ಯು.ಎಸ್ ನ ಈ ‘ಮಾದಕ-ಭಯೋತ್ಪಾದಕ’ತೆಯ (ನಾರ್ಕೊ-ಟೆರರಿಸಂ) ಆಪಾದನೆ ಬರಿಯ ಕುಂಟು ನೆಪಮಾತ್ರ ಯುದ್ಧ ಹೂಡಲು.

ಉಕ್ರೇನಿನಲ್ಲಿ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿ ಶಾಂತಿ ತರುವ ಟ್ರಂಪ್ ಭರವಸೆ ಈಡೇರಿಕೆಗೆ, 24 ವಾರಗಳು ಯಾವಾಗಲೋ  ಕಳೆದು ಹೋದರೂ ಜಗತ್ತು ಇನ್ನೂ ಕಾಯುತ್ತಿದೆ. ಈ ನಡುವೆ ಟ್ರಂಪ್ ತನ್ನ ಅಧ್ಯಕ್ಷತೆಯ (ಮೊದಲ 2017-20 ಅಥವಾ ಈಗಿನ 20250- ) ಅವಧಿಯಲ್ಲಿ ಕನಿಷ್ಠ ಯಾವುದೇ ಹೊಸ ಯುದ್ಧ ಶುರು ಮಾಡಲಿಲ್ಲ ಎಂಬ ತಮ್ಮ ವಿಕ್ರಮವನ್ನು ಸಹ ಮುರಿಯುವ ಲಕ್ಷಣಗಳು ಕಾಣುತ್ತಿವೆ. ವೆನೆಜುವೇಲಾದ ಮೇಲೆ ಹಲವು ದಾಳಿಗಳು ಈಗಾಗಲೇ ನಡೆಯುತ್ತಿದ್ದು ವಾಸ್ತವ ಯುದ್ಧ ನಡೆದರೂ ಆಶ್ಚರ್ಯವಿಲ್ಲ. ಯುದ್ಧದ ಪ್ರಾಥಮಿಕ ಸಾಮಗ್ರಿಯಾದ ಡೈನಮೈಟ್ ಆವಿಷ್ಕಾರ ಮಾಡಿ ಶ್ರೀಮಂತನಾದ ನೊಬೆಲ್ ಹೆಸರಲ್ಲಿ ಶಾಂತಿ ಪ್ರಶಸ್ತಿಯೇ ವೈರುಧ್ಯ, ಹಾಗಾಗಿಯೇ ಏನೋ, ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ರಾಜಕೀಯ ನಾಯಕರಿಗೆ ಕೊಟ್ಟಾಗ ಭಾರೀ ಯುದ್ಧ ನಡೆಸಿ (ಆ ನಂತರ ನಿಲ್ಲಿಸಿ) ದವರಿಗೆ ಕೊಟ್ಟಿರುವುದು. ಅದಕ್ಕಾಗಿಯೇ ಬಹುಶಃ ಟ್ರಂಪ್ ಹೊಸ ಯುದ್ಧ ಆರಂಭಿಸಲು ಹೊರಟಿರುವುದು! ಶಾಂತಿದೂತ ಟ್ರಂಪ್ ಅವರು ಇತ್ತೀಚೆಗಷ್ಟೇ ಯು.ಎಸ್ ‘ರಕ್ಷಣಾ ಇಲಾಖೆ’ಯನ್ನು ‘ಯುದ್ಧ ಇಲಾಖೆ’ಯೆಂದು ಮರುನಾಮಕರಣ ಮಾಡಿದ್ದಾರೆ. ಎರಡನೇ ಮಹಾಯುದ್ಧದ (1947ರ) ವರೆಗೆ ಆ ಇಲಾಖೆಗೆ ಇದೇ ಹೆಸರು ಇತ್ತಂತೆ.

ಅಗಸ್ಟ್ ನಿಂದಲೇ ಯು.ಎಸ್ ಬೇಹುಗಾರಿಕಾ ವಿಮಾನಗಳು ವೆನೆಜುವೇಲಾದ ಸುತ್ತ ಉತ್ತರಕ್ಕಿರುವ ಕೆರಿಬಿಯನ್ ಸಮುದ್ರದ ದಕ್ಷಿಣ ಪ್ರದೇಶದಲ್ಲಿ ಹಾರಾಡುತ್ತಿವೆ. ವೆನೆಜುವೇಲಾದ ಸಮುದ್ರ ಗಡಿಯ ಹತ್ತಿರದಲ್ಲಿ ಮೂರಕ್ಕೂ ಹೆಚ್ಚು ವಿಧ್ವಂಸಕ ಯುದ್ಧ ಹಡಗುಗಳು, ನೀರು-ನೆಲ ಎರಡರ ಮೇಲೂ ಹೋಗಬಲ್ಲ ವಾಹನಗಳು, ವೇಗವಾಗಿ ಚಲಿಸಬಲ್ಲ ಅಣುಶಕ್ತಿಯಲ್ಲಿ ನಡೆಯುವ ಸಬ್ ಮೇರೀನ್, 4000 ನೌಕಾಸೈನಿಕರು ಇತ್ಯಾದಿಗಳಿಂದ ಸಜ್ಜಿತವಾದ  ನೌಕಾಸೈನ್ಯದ ತುಕಡಿ ಗಸ್ತು ಹೊಡೆಯುತ್ತಿದೆ.

ಇದನ್ನೂ ಓದಿ : ಎಡಪಂಥೀಯ ಸ್ಕೂಲ್ ಟೀಚರ್ ಕ್ಯಾಸ್ಟಿಲೊ ಪೆರು ಅಧ್ಯಕ್ಷ

ಕಳೆದ ಎರಡು ವಾರಗಳಲ್ಲಿ ವೆನೆಜುವೆಲಾದ ನೌಕೆಗಳ ಮೇಲೆ ಎರಡು ದಾಳಿಗಳನ್ನು ಮಾಡಿದೆ. ಸೆಪ್ಟೆಂಬರ್ 2ರಂದು ಅಂತರರಾಷ್ಟ್ರೀಯ ವಲಯದಲ್ಲಿದ್ದ ಒಂದು ವೆನೆಜುವೇಲಾದ ಒಂದು ಖಾಸಗಿ ನೌಕೆಯ ಮೇಲೆ ಯು.ಎಸ್ ವಿಮಾನ ನಿಖರ ಗುಂಡಿನ ದಾಳಿ ನಡೆಸಿ ನೌಕೆಯನ್ನು ನಾಶ ಮಾಡುವುದಲ್ಲದೆ ನೌಕೆಯಲ್ಲಿದ್ದ 11 ಜನರ ಕೊಲೆ ಮಾಡಿದೆ. ಸೆಪ್ಟೆಂಬರ್ 15 ರಂದು ಅಂತಹುದೇ ಇನ್ನೊಂದು ದಾಳಿಯಲ್ಲಿ 3 ಜನರು ಸತ್ತಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಯು.ಎಸ್ ನೌಕಾಸೈನ್ಯ ಸಿಬ್ಬಂದಿ ಸಾಗರದಲ್ಲಿನ ವೆನೆಜುವೇಲಾದ ಆರ್ಥಿಕ ವಲಯದಲ್ಲಿ ಒಂದು ವೆನೆಜುವೇಲಾದ ನೌಕೆಗೆ ಹತ್ತಿ ಪರೀಕ್ಷಣೆ  ನಡೆಸಿದೆ. ಇವೆಲ್ಲವೂ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ.  ಇದು ಸಾಲದೆಂಬಂತೆ ವೆನೆಜುವೇಲಾ ಅಧ್ಯಕ್ಷ ಮದುರೊ ಹಿಡಿದು ಕೊಟ್ಟವರಿಗೆ 2022ರಲ್ಲೇ ಘೋಷಿಸಿದ್ದ ಬಹುಮಾನವನ್ನು 2.5ರಿಂದ 5.0 ಕೋಟಿ ಡಾಲರಿಗೆ ದ್ವಿಗುಣಗೊಳಿಸಲಾಗಿದೆ. ಒಂದು ದೇಶದ ಸರಕಾರ ಇನ್ನೊಂದು ದೇಶದ ಚುನಾಯಿತ ಅಧ್ಯಕ್ಷನನ್ನು ಅಪರಾಧಿ ಎಂದು ಘೋಷಿಸಿ ಅವರ ಬಂಧನಕ್ಕೆ ಬಹುಮಾನ ಘೋಷಿಸುವುದು ಯಾವ ಅಂತರರಾಷ್ಟ್ರೀಯ ಕಾನೂನು/ನಿಯಮಗಳ ಪ್ರಕಾರವೂ ಸೂಕ್ತವಲ್ಲ ಎಂಬುದು ಸ್ಪಷ್ಟ. ಯು.ಎಸ್ ಮದುರೊ ವೆನೆಜುವೇಲಾದ ಅಧ್ಯಕ್ಷರಾಗಿ ಚುನಾಯಿತರಾದದನ್ನು ಮಾನ್ಯ ಮಾಡಿಲ್ಲ. ಮಾತ್ರವಲ್ಲ, ಅದರ ಮೇಲೆ ತೀವ್ರ ಆರ್ಥಿಕ ದಿಗ್ಬಂಧನಗಳನ್ನು, ವೀಸಾ ನಿಷೇಧ ಮುಂತಾದ ಕ್ರಮಗಳನ್ನು ಕೈಗೊಂಡಿದೆ.

ವೆನೆಜುವೇಲಾದ ಸರಕಾರ ಉನ್ನತ ಅಧಿಕಾರಗಳೂ ಶಾಮೀಲಾಗಿರುವ ಯು.ಎಸ್ ವಿರುದ್ಧ ಉದ್ದೇಶಿತವಾಗಿರುವ ‘ಮಾದಕ-ಭಯೋತ್ಪಾದಕ’ (ನಾರ್ಕೊ-ಟೆರರಿಸಂ) ಕಾರ್ಯಾಚರಣೆಯನ್ನು ತಡೆಯಲು ಈ ಕ್ರಮ ಕೈಗೊಂಡಿದೆ ಎಂಬುದು ಯು.ಎಸ್ ಸಮಜಾಯಿಷಿ. ದಾಳಿಗೊಳಗಾದ ಈ ನೌಕೆಗಳು ಮಾದಕ ದ್ರವ್ಯಗಳ ಸಾಗಾಣಿಕೆಯಲ್ಲಿ ತೊಡಗಿದ್ದವು. ಇದು ನಿಜವಾಗಿದ್ದರೂ ಅಂತಹ ನೌಕೆಗಳನ್ನು ಯಾವುದೇ ಮಾಹಿತಿಯಿಲ್ಲದೆ ದಾಳಿ ಮಾಡುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ. ಮಾತ್ರವಲ್ಲ ಮಾದಕ ದ್ರವ್ಯಗಳ ಸಾಗಾಣಿಕೆ ಪರೀಕ್ಷಣೆಗೆ ಮತ್ತು ತಡೆಯುವುದಕ್ಕೆ ಎಫ್-35 ಜೆಟ್ ಫೈಟರುಗಳು, ಯುದ್ಧ ಹಡಗುಗಳು, ಸಬ್ ಮೇರಿನುಗಳು ಬೇಕಿಲ್ಲ.

 

ಯು.ಎಸ್ ಗೆ ಬರುವ ಮಾದಕ ದ್ರವ್ಯಗಳು ವೆನೆಜುವೇಲಾದಿಂದ ಬರುತ್ತಿವೆ ಎಂಬ ಆಪಾದನೆ ಸಹ ಬುಡವಿಲ್ಲದ ಬುರುಡೆ. ವಿಶ್ವಸಂಸ್ಥೆಯ ಮತ್ತು ಯು.ಎಸ್ ನ ಮಾದಕ ದ್ರವ್ಯ ತಡೆ ಸಂಸ್ಥೆಗಳ ವರದಿ ಪ್ರಕಾರವೇ, ಬಹುಪಾಲು ಮಾದಕ ದ್ರವ್ಯಗಳು ಉತ್ಪಾದನೆಯಾಗುವುದು ಮತ್ತು  ಸಾಗಾಣಿಕೆಯಾಗುವುದು ಲ್ಯಾಟಿನ್ ಅಮೆರಿಕದ ಕೊಲಂಬಿಯ, ಇಕ್ವಡಾರ್ ಮತ್ತು ಪೆರು  ದೇಶಗಳಿಂದ. ಇವು ಯು.ಎಸ್ ಜತೆ ಸ್ನೇಹ ಸಂಬಂಧ ಇರುವ ಸರಕಾರಗಳಿರುವ ದೇಶಗಳು. ಈ ದೇಶಗಳಲ್ಲಿ ಯು.ಎಸ್ ಜತೆ ಉತ್ತಮ ಸಂಬಂಧ ಹೊಂದಿರುವ ಉನ್ನತ ನಾಯಕರು ಮಾದಕ ದ್ರವ್ಯ ಉತ್ಪಾದನೆ-ಸಾಗಾಣಿಕೆಗಳಿಂದ ಶ್ರೀಮಂತರಾದವರು ಎಂಬುದು ಬಹಿರಂಗ ಗುಟ್ಟು. ಕೊಲಂಬಿಯಾದ ಅಧ್ಯಕ್ಷ ಉರಿಬೆ, ಜನರಲ್ ಸಂಟೊಯೊ, ಇಕ್ವಡೊರ್ ಅಧ್ಯಕ್ಷ ರಾಫೆಲ್ ಕೊರಿಯ (2007-2017), ಗೆರೊಲಿರ್ಮೊ ಲಾಸ್ಸೊ(2021-23), ಪೆರು ವಿನ ಅಧ್ಯಕ್ಷ ಅಲನ್ ಗಾರ್ಸಿಯ (1985-90, 2006-11), ಗೂಢಾಚಾರ ಮುಖ್ಯಸ್ಥ ವ್ಲಾಡಿಮಿರೊ ಮೊಂಟೆಸಿನೊಸ್ (1990ರ ದಶಕ) ಕೆಲವು ಉದಾಹಣೆಗಳು. ಇವರೆಲ್ಲರ ಮೇಲೆ ಗಂಭೀರ ಆಪಾದನೆಯಿದ್ದಿದ್ದು ಮಾತ್ರವಲ್ಲದೆ ಕೆಲವರು ದೋಷಿ ಎಂದು ಸಾಬೀತಾಗಿದೆ ಕೂಡಾ.

ವೆನೆಜುವೇಲಾದ ಮೇಲೆ ಯು.ಎಸ್ ನ ಈ ‘ಮಾದಕ-ಭಯೋತ್ಪಾದಕ’ತೆಯ (ನಾರ್ಕೊ-ಟೆರರಿಸಂ) ಆಪಾದನೆ ಬರಿಯ ಕುಂಟು ನೆಪಮಾತ್ರ ಯುದ್ಧ ಹೂಡಲು. ಚವೇಝ್ ಕಾಲದಿಂದಲೂ ವೆನೆಜುವೇಲಾ ಚೀನಾ ಮತ್ತು ರಶ್ಯಾಗಳೊಂದಿಗೆ ಸಹಕಾರ, ವ್ಯಾಪಾರ, ಹೂಡಿಕೆಯ ಸಂಬಂಧಗಳನ್ನು ಘನಿಷ್ಟಗೊಳಿಸುತ್ತಾ ಬಂದಿದೆ. ಕಳೆದ 1-2 ವರ್ಷಗಳಲ್ಲಿ ಚೀನಾದೊಂದಿಗೆ ಮೂಲಸೌಲರ್ಯ ಅಭಿವೃದ್ಧಿಗೆ ಸಾಲ/ನೆರವು, ತೈಲ ಉತ್ಪಾದನೆ ವಿಸ್ತರಣೆಗೆ ತಾಂತ್ರಿಕ ಸಹಕಾರ ಹೂಡಿಕೆ, ತೈಲ ಪೂರೈಕೆಯ ದೀರ್ಘಕಾಲೀನ ಒಪ್ಪಂದಗಳನ್ನು ವೆನೆಜುವೇಲಾ ಮಾಡಿಕೊಂಡದ್ದು ಯು.ಎಸ್ ನ್ನು ಕೆರಳಿಸಿದೆ. ರಶ್ಯದಿಂದ ಮಿಲಿಟರಿ ಉಪಕರಣ, ಶಸ್ತ್ರಾಸ್ತ್ರ ಖರೀದಿ ತಾಂತ್ರಿಕ ನೆರವು ಅಲ್ಲದೆ, ತೈಲ ಉತ್ಪಾದನೆ ವಿಸ್ತರಣೆಗೆ ತಾಂತ್ರಿಕ ಸಹಕಾರ ಹೂಡಿಕೆಗಳಿಗೆ ವೆನೆಜುವೇಲಾ ಮಾಡಿದ ಒಪ್ಪಂದಗಳೂ ಸಹ ಯು.ಎಸ್ ಗೆ ನುಂಗಲಾರದ ತುತ್ತಾಗಿದೆ.

ಯು.ಎಸ್ ತನ್ನ ಮೂಗಿನ ನೇರಕ್ಕೆ ಇರದ ದೇಶದ ಸರಕಾರದ ವಿರುದ್ಧ ಯಾವಾಗಲೂ ವಿವಿಧ ನೆಪಗಳನ್ನು ಹುಡುಕುತ್ತದೆ. ಇರಾಕ್ ಮೇಲೆ ಯುದ್ಧ ಹೂಡಲು ಅದು ಸಾಮಾಹಿಕ ನಾಶದ ಅಸ್ತ್ರಗಳನ್ನು ಹೊಂದುವ ಹತ್ತಿರವಿದೆ ಎಂದು ಹೇಳಲಾಯಿತು. ಲಿಬ್ಯಾದಲ್ಲಿ ಸರಕಾರ ನರಮೇಧ ನಡೆಯುತ್ತಿದೆ ಎಂದು ಪ್ರಚಾರ ಮಾಡಲಾಯಿತು. ಹಿಂದೆ ಟೊಂಕಿನ್ ಕೊಲ್ಲಿಯಲ್ಲಿ ಯು.ಎಸ್ ಹಡಗದ ಮೇಲೆ ಉತ್ತರ ವಿಯೇಟ್ನಾಂ ದಾಳಿ ಮಾಡಿದೆ ಎಂಬ ಸುದ್ದಿಯ ಮೇಲೆ ವಿಯೇಟ್ನಾಂ ಮೇಲೆ ಯುದ್ಧ ಸಾರಲಾಯಿತು. ಇವೆಲ್ಲ ಸುಳ್ಳು ಅಂತ ಬಹಳ ಸಮಯದ ನಂತರ ಬೆಳಕಿಗೆ ಬಂತು. ಅದೇ ರೀತಿಯ ಕಥನವನ್ನು ಕಟ್ಟಲಾಗುತ್ತಿದೆ. ಈ ನೆಪ ಯು.ಎಸ್ ನಲ್ಲಿ ಆಂತರಿಕವಾಗಿ ಮತ್ತು ಅಂತರರಾಷ್ಟ್ರೀಯವಾಗಿ ತನ್ನ ನಿಜವಾದ ಉದ್ದೇಶವನ್ನು ಮರೆಮಾಚಿ ಈ ಕಾರ್ಯಾಚರಣೆ ‘ಮಾದಕ ದ್ರವ್ಯಗಳ ವಿರುದ್ಧ’ವೆಂದು ಬೆಂಬಲ, ಸಹಮತಿ ಗಳಿಸುವುದಕ್ಕೂ ಸಹಾಯಕವಾಗುತ್ತದೆ. ಯು.ಎಸ್ ಅಣತಿಗಳಿಗೆ, ಬೆದರಿಕೆಗಳಿಗೆ ಸೊಪ್ಪು ಹಾಕದ ಸ್ವತಂತ್ರ ನೀತಿಗಳನ್ನು ಅನುಸರಿಸುವ ವೆನೆಜುವೇಲಾ ಅಧ್ಯಕ್ಷ ಮದುರೊ ಅವರ ಸರಕಾರವನ್ನು ಉರುಳಿಸಿ, ಆ ದೇಶದ ತೈಲ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳುವುದು ಅದರ ನಿಜವಾಧ ಉದ್ದೇಶ. ಇದಕ್ಕಾಗಿ ಮಿಲಿಟರಿ ಸ್ಥಾವರಗಳ ಮೇಲೆ ಬಾಂಬ್ ದಾಳಿ ಮೂಲಕ ನಾಶ ಮಾಡಿ, ಕರಾವಳಿಯಲ್ಲಿ ಸೈನ್ಯ ಇಳಿಸಿ ದೇಶವನ್ನು ವಶಪಡಿಸುವುದು ಅದರ ಯೋಜನ ಎನ್ನುವುದು ಸ್ಪಷ್ಟ.

ದೇಶಕ್ಕೆ ಬಂದಿರುವ ಯು.ಎಸ್ ಆಕ್ರಮಣದ ಅಪಾಯವನ್ನು ಗಡಿಯಲ್ಲಿ ಮಾತ್ರವಲ್ಲ ಮೊಹಲ್ಲಾ ಮೊಹಲ್ಲಾದಲ್ಲೂ ಬೀದಿ ಬೀದಿಯಲ್ಲೂ ಎದುರಿಸಲು ದೇಶದಾದ್ಯಂತ 80 ಲಕ್ಷ ನಾಗರಿಕರ ಸಶಸ್ತ್ರ ಸ್ವಯಂಸೇವಕ ಪಡೆಯ ರಚನೆಗೆ ಅಧ್ಯಕ್ಷ ಮದುರೊ ಕರೆ ಕೊಟ್ಟಿದ್ದಾರೆ. “ನಮ್ಮ ದೇಶ ಕಳೆದ 100 ವರ್ಷಗಳಲ್ಲೇ ಅತ್ಯಂತ ಗಂಭೀರ ಅಪಾಯ ಎದುರಿಸುತ್ತಿದೆ. ಈವರೆಗೆ ಎಲ್ಲ ರೀತಿಯ ಹೈಬ್ರಿಡ್ ಯುದ್ಧಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಯು.ಎಸ್ (ನೇರ ದಾಳಿಯ) ಅತ್ಯಂತ ಕೆಟ್ಟ ತಪ್ಪು ಮಾಡಲು ಹೊರಟಿದೆ” ಎಂದು ಮದುರೊ ಹೇಳಿದ್ದಾರೆ. ಈಗಾಗಲೇ ಈ ಸಶ್ತಸ್ತ್ರ ನಾಗರಿಕರ ಪಡೆಯ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದೆ.

ಈ ಯು.ಎಸ್ ದಾಳಿಗಳು ಮತ್ತು ಯುದ್ಧದ ಬೆದರಿಕೆಯನ್ನು ಕೆರಿಬಿಯನ್ ಮತ್ತು ಲ್ಯಾಟಿನ್ ಅಮೆರಿಕನ್ ದೇಶಗಳ ಸಂಘಟನೆ CELAC (Community of Latin American and Caribbean States) ಅಲ್ಲದೆ, ಬ್ರೆಜಿಲ್, ಮೆಕ್ಸಿಕೊ, ಕೊಲಂಬಿಯ, ಬೊಲಿವಿಯ, ಕ್ಯೂಬಾ. ಚೀನಾ, ರಶ್ಯಾ ಮುಂತಾದ ಹಲವು ದೇಶಗಳು ಖಂಡಿಸಿವೆ.

ಇದನ್ನೂ ನೋಡಿ : ಧರ್ಮಸ್ಥಳ ಪ್ರಕರಣ | ಅಸಹಜ ಸಾವುಗಳಿಗೂ, ಭೂ ಕಬಳಿಕೆ, ಮೈಕ್ರೋಫೈನಾನ್ಸ್‌ಗೂ ಲಿಂಕ್‌ ಇದೆಯಾ?

 

Donate Janashakthi Media

Leave a Reply

Your email address will not be published. Required fields are marked *