ಪೇಸಿಎಂ ಭಿತ್ತಿಚಿತ್ರ ಅಂಟಿಸಿದ್ದ ಆರೋಪ: ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರ ಬಂಧನ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ‌ ಬಸವರಾಜ‌ ಬೊಮ್ಮಾಯಿ ಅವರ ಭಾವಚಿತ್ರ ಒಳಗೊಂಡಿರುವ ʻಪೇಸಿಎಂ’ ಎಂಬ ಭಿತ್ತಿಚಿತ್ರವನ್ನು ನಗರದ ಪ್ರಮುಖ ಸ್ಥಳಗಳಲ್ಲಿ ಅಂಟಿಸಿದ್ದ ಆರೋಪದಡಿ‌ ಹೈಗ್ರೌಂಡ್ಸ್‌ ಪೊಲೀಸರು ಇಬ್ಬರು ಕಾಂಗ್ರೆಸ್‌ ಕಾರ್ಯಕರ್ತರನ್ನು ಬಂಧಿಸಿದೆ.

ನೆನ್ನೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿನ ಡಿಸಿಪಿಗಳಿಗೆ ತಮ್ಮ ತಮ್ಮ ವಿಭಾಗಗಳಲ್ಲಿ ಇಂತಹ ಭಿತ್ತಿಚಿತ್ರಗಳನ್ನು ನೋಡಿ ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತ‌ ಸಿ ಹೆಚ್‌ ಪ್ರತಾಪ್‌ ರೆಡ್ಡಿ ತಿಳಿಸಿದ್ದರು. ಹೈಗ್ರೌಂಡ್ಸ್ ಪೊಲೀಸರು ಭಿತ್ತಿಚಿತ್ರ ಅಂಟಿಸಿರುವುದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದರ ಬಳಿಕ ಸದಾಶಿವನಗರ ಹಾಗೂ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗದ ನಾಯ್ಡು ಹಾಗೂ ಗಗನ್ ಎಂಬುವರನ್ನು ವಶಕ್ಕೆ ಪಡೆದಿರುವುದಾಗಿ ಗೊತ್ತಾಗಿದೆ. ‘ಸಿ.ಸಿ.ಟಿ.ವಿ‌ ಕ್ಯಾಮೆರಾ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿ ಮಾಧ್ಯಮ ಮಿತ್ರರಿಗೆ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಬಿ ಆರ್ ನಾಯ್ಡು ಅವರನ್ನು ವಸಂತನಗರದಲ್ಲಿರುವ ಎಂಬಸಿ ಬಹುಮಹಡಿ ಕಟ್ಟಡಕ್ಕೆ ಮಧ್ಯರಾತ್ರಿ 2 ಗಂಟೆಗೆ ನಾಲ್ವರು ಪೊಲೀಸರು ಪ್ರವೇಶಿಸಿ ಬಂಧಿಸಿದರು ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಕರೆದೊಯ್ದರು. ಭಯಭೀತರಾದ ಅವರ ಪತ್ನಿ ಕೆಪಿಸಿಸಿ ಸಾಮಾಜಿಕ ಮಾಧ್ಯಮ ತಂಡಗಳಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಸಹಾಯಕ್ಕಾಗಿ ಕರೆ ಮಾಡಿದರು.

ಮತ್ತೊಬ್ಬ ವ್ಯಕ್ತಿ ಕಾಂಗ್ರೆಸ್ ಮುಖಂಡ ಡಿ ಎ ಗೋಪಾಲ್ ಅವರ ಪುತ್ರ ಡಿ ಎ ಗಗನ್ ಯಾದವ್ ಮತ್ತು ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಸೋದರಳಿಯ ಕೆ ಆರ್ ಪುರಂನಲ್ಲಿರುವ ಅವರ ನಿವಾಸದಿಂದ ಪೊಲೀಸರು ಬಂಧಿಸಿ ನಂತರ ಸದಾಶಿವನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ನಗರದ ಹಲವು ಕಡೆಗಳಲ್ಲಿ ವಿಶಿಷ್ಟ ರೀತಿಯಲ್ಲಿ ರೂಪಿಸಲಾಗಿರುವ ಭಿತ್ತಿಚಿತ್ರ ತೀವ್ರ ಚರ್ಚೆಗೂ ಒಳಗಾಗಿತ್ತು. ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರ ಬಂಧನವಾದ ಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖಂಡರು, ಹೈಗ್ರೌಂಡ್ಸ್ ಠಾಣೆಗೆ ಭೇಟಿ ನೀಡಿದರು.

ಪೇಟಿಎಂ ಮಾದರಿಯ ಭಿತ್ತಿಚಿತ್ರಗಳನ್ನು ಬೆಂಗಳೂರಿನ ಪ್ರಮುಖ ಕಡೆ ಸ್ಥಳಗಳು ಸೇರಿದಂತೆ, ಬಸ್ ತಂಗುದಾಣಗಳು, ನಿರ್ಮಾಣ ಸ್ಥಳಗಳಲ್ಲಿ ಹಾಕಲಾಗಿತ್ತು. ಮೇಖ್ರಿ ವೃತ್ತ, ಅರಮನೆ ರಸ್ತೆ, ಬಾಳೇಕುಂದ್ರಿ ವೃತ್ತ ಮತ್ತಿತರ ಕಡೆ ಹಾಕಲಾಗಿದ್ದ ಬಹುತೇಕ ಭಿತ್ತಿಚಿತ್ರಗಳನ್ನು ಪೌರಕಾರ್ಮಿಕರು ತೆಗೆದಿದ್ದಾರೆ. ಪೊಲೀಸರು ಪೇಸಿಎಂ ಭಿತ್ತಿಚಿತ್ರಗಳನ್ನು ತೆಗೆದುಹಾಕಿರುವುದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿ ಕೆ ಶಿವಕುಮಾರ್‌ ಪ್ರತಿಕ್ರಿಯೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮಾಧ್ಯಮದೊಂದಿಗೆ ಮಾತನಾಡಿ, ಪ್ರಜಾಪ್ರಭುತ್ವದ ಅಡಿ ನಾವು ಕೆಲಸ ಮಾಡ್ತಿದ್ದೇವೆ. 40% ಕಮಿಷನ್ ಸರ್ಕಾರ ಅಂತ ನಾವೆಲ್ಲ ಅಭಿಯಾನ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭಿತ್ತಿಚಿತ್ರ ಅಂಟಿಸಿದ್ದೇವೆ. ಇದು ಸತ್ಯ. ಪೇಸಿಎಂನ್ನು 1.9 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಅದರಲ್ಲಿ 8 ಸಾವಿರ ದೂರು ದಾಖಲಾಗಿದೆ. ಇದು ರಾಜಕಾರಣದ ವ್ಯವಸ್ಥೆ. ನನ್ನ, ಸಿದ್ದರಾಮಯ್ಯ ಫೋಟೋ ಕೂಡ ಅವರು ಮಾಡಿದ್ದಾರೆ ಎಂದರು.

ರಾತ್ರೋರಾತ್ರಿ ಬಂಧನ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ಬಿಬಿಎಂಪಿಯವರಿಗೆ ಕಣ್ಣಿಲ್ವಾ ಎಂದ ಅವರು, ಜನೋತ್ಸವದ್ದು ಅಷ್ಟೊಂದು ಭಿತ್ತಿಚಿತ್ರಗಳು ಹಾಕಿಲ್ವಾ? ರೆಡ್ಡಿ ಮುನಿರತ್ನ ಸುಧಾಕರ ಎಲ್ಲಾ ಪೋಸ್ಟರ್ ಹಾಕಿಲ್ವಾ? ಅದಕ್ಕೂ ಬಿಬಿಎಂಪಿ ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮುಖ್ಯಮಂತ್ರಿಗಳು ಯಾಕಿಷ್ಟು ತಲೆ ಕೆಡಿಸಿಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದ ಡಿ ಕೆ ಶಿವಕುಮಾರ್, ಬಿಜೆಪಿ ಅಧಿಕಾರ ದುರ್ಬಳಕೆ, ದ್ವೇಷದ ರಾಜಕಾರಣ ಮಾಡುತ್ತಿದೆ. ನಾಳೆ ಕಾಂಗ್ರೆಸ್‌ನ  ಎಲ್ಲ‌ ವಿಧಾನ ಪರಿಷತ್‌ ಸದಸ್ಯರು, ವಿಧಾನಸಭೆ ಶಾಸಕರುಗಳು, ಎಲ್ಲರೂ ಸೇರಿ ಪೇಸಿಎಂ ಭಿತ್ತಿಚಿತ್ರ ಅಂಟಿಸುತ್ತೇವೆ. ಸರ್ಕಾರಿ ಕಟ್ಟಡಗಳ ಮೇಲೆ ಅಂಟಿಸುತ್ತೇವೆ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದರು.

Donate Janashakthi Media

Leave a Reply

Your email address will not be published. Required fields are marked *