ಹೊನ್ನಾವರ: ಪಠ್ಯಪುಸ್ತಕ ಮರು ಪರೀಕ್ಷರಣೆಯಲ್ಲಿ ಕೈಗೊಂಡಿರುವ ಹಲವು ಗೊಂದಲಗಳಿಂದಾಗಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಹಲವು ಹಿರಿಯ ಸಾಹಿತಿಗಳು, ಲೇಖಕರು, ತಮ್ಮ ಬರಹಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸದಿರಿ ಎಂದು ಹೇಳುತ್ತಿದ್ದು, ಇಂದು(ಜೂನ್ 1) ಪ್ರಖ್ಯಾತ ವೈದ್ಯೆ ಹಾಗೂ ಸಾಹಿತಿ ಡಾ|| ಎಚ್.ಎಸ್. ಅನುಪಮಾ ಅವರು ಸಹ ಶಿಕ್ಷಣ ಸಚಿವರಿಗೆ ಪತ್ರವನ್ನು ಬರೆದು ತಮ್ಮ ಲೇಖನವನ್ನು ಕೈಬಿಡಬೇಕೆಂದು ತಿಳಿಸಿದ್ದಾರೆ.
ಇದನ್ನು ಓದಿ: ಪಠ್ಯದಲ್ಲಿ ಮಹಿಳೆಯರಿಗೆ ಅವಮಾನ – ಕವಿತೆಗೆ ಅನುಮತಿ ಹಿಂಪಡೆದ ರೂಪಾ ಹಾಸನ
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಬರೆದಿರುವ ಪತ್ರದಲ್ಲಿ ಡಾ|| ಎಚ್.ಎಸ್. ಅನುಪಮಾ ಅವರು, 7ನೇ ತರಗತಿಯ ಕನ್ನಡ ಭಾಷಾ (ಪ್ರಥಮ) ಪಠ್ಯ ಪುಸ್ತಕದಲ್ಲಿ ನನ್ನ ʻಸಾವಿತ್ರಿಬಾಯಿ ಫುಲೆ” (ಗದ್ಯ) ಬರಹವನ್ನು ಮತ್ತು 7ನೇ ತರಗತಿಯ ಕನ್ನಡ ಭಾಷಾ (ತೃತೀಯ) ಪಠ್ಯಪುಸ್ತಕದಲ್ಲಿ ನನ್ನ ʻನೆನೆವುದೆನ್ನ ಮನʼವನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಅನುಮತಿಯನ್ನು ಹಿಂತೆಗೆದುಕೊಳ್ಳಲು ಬಯಸಿದ್ದೇನೆ ಎಂದಿದ್ದಾರೆ.
ಶಿಕ್ಷಣದ ಬಗೆಗಾಗಲೀ, ಕನ್ನಡಿಯಂತಹ ಮನಸ್ಸಿನ ಮಕ್ಕಳ ಭವಿಷ್ಯದ ಬಗೆಗಾಗಲೀ ಕಿಂಚಿತ್ತೂ ಕಾಳಜಿಯಿರದ ದುರುಳರು ಪಠ್ಯಪುಸ್ತಕಗಳಲ್ಲಿ ಕೈಕಾಲಾಡಿಸಿ ಮಾಡಿರುವ ಅವಾಂತರ ತುಂಬ ಬೇಸರ ತಂದಿದೆ ಎಂದು ಡಾ|| ಎಚ್.ಎಸ್. ಅನುಪಮಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂಪಡೆದ ಮತ್ತಿಬ್ಬರು ಸಾಹಿತಿಗಳು
ಪಠ್ಯಪುಸ್ತಕ ರಚನಾ ಸಮಿತಿಗೆ ಸೂಕ್ತ ನಿರ್ದೇಶನ ನೀಡಿ ಕನ್ನಡದ, ಕನ್ನಡ ನುಡಿಯ ಘನತೆ ಎತ್ತಿಹಿಡಿಯಬೇಕೆಂದು ಶಿಕ್ಷಣ ಸಚಿವರನ್ನು ವಿನಂತಿಸಿಕೊಂಡಿದ್ದಾರೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಮರು ಪರೀಕ್ಷಣಾ ಸಮಿತಿಯು 2022-2023ನೇ ಸಾಲಿನ ಶಾಲಾ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿದ್ದು, ದೊಡ್ಡ ಪ್ರಮಾಣದಲ್ಲಿ ತಪ್ಪುಗಳನ್ನೇ ಎಸಗಲಾಗುತ್ತಿದೆ ಎಂಬುದು ಎಲ್ಲೆಡೆಗಳಿಂದ ವಿರೋಧಗಳು ವ್ಯಕ್ತವಾಗುತ್ತಿವೆ.
ರೋಹಿತ್ ಚಕ್ರತೀರ್ಥ ಸಮಿತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾಗುತ್ತಿದೆ ಹಾಗೂ ಈಗಾಗಲೇ ಪಠ್ಯಪುಸ್ತಕ ಪರೀಕ್ಷರಣೆ ಸಮಿತಿ ಅಂತಿಮಗೊಳಿಸಿರುವ ಪಠ್ಯ ಪುಸ್ತಕವನ್ನೇ ವಿದ್ಯಾರ್ಥಿಗಳಿಗೆ ವಿತರಿಸಬೇಕೆಂದು ಆಗ್ರಹಿಸಲಾಗುತ್ತಿದೆ.