ಬೆಂಗಳೂರು :ಬೆಂಗಳೂರಿನ ಪ್ರತಿಷ್ಟಿತ ರೆಸ್ಟೋರೆಂಟ್ಗೆ ಬಾಂಬೆ ಬೆದರಿಕೆ ಕರೆಯೊಂದು ಬಂದಿದ್ದು, ಕರೆ ಮಾಡಿದ ಆರೋಪಿ ವೇಲುನನ್ನು ಬಂಧಿಸಲಾಗಿದೆ.
ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಗೆ ರಾತ್ರಿ ಬಾಂಬ್ ಕರೆ ಬಂದಿದ್ದು, ಶೀಘ್ರವೇ ಬಾಂಬ್ ಬ್ಲಾಸ್ಟ್ ಆಗುತ್ತದೆ ಎಂದು ಬೆದರಿಕೆಯೊಡ್ಡಿದ್ದ.
ಇದರಿಂದ ಬೆಚ್ಚಿಬಿದ್ದ ರೆಸ್ಟೋರೆಂಟ್ ಮಾಲೀಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ನಂತರ ಪೊಲೀಸರು ರೆಸ್ಟೋರೆಂಟ್ ಗೆ ತೆರಳಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ನಂತರ ಇದು ಹುಸಿ ಕರೆ ಎಂದು ತಿಳಿದು ಬಂದಿದೆ.
ಸದ್ಯ, ಹುಸಿ ಬಾಂಬ್ ಕರೆ ಮಾಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ವೇಲು ಎಂದು ಗುರುತಿಸಲಾಗಿದ್ದು, ಈತ ಅದೇ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದನು. ಸಂಬಳ ಕೊಟ್ಟಿಲ್ಲ ಎಂದು ಸಿಟ್ಟಿನಲ್ಲಿ ಈತ ಹುಸಿ ಕರೆ ಮಾಡಿದ್ದನು ಎಂದು ವಿಚಾರಣೆ ವೇಳೆ ಬಯಲಾಗಿದೆ. ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ, (ಮಾರ್ಚ್ 1) ಬೆಂಗಳೂರು ನಗರದ ವೈಟ್ಫೀಲ್ಡ್ ಬಳಿ ಇರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಮತ್ತು ಎನ್ಐಎ ಅಧಿಕಾರಿಗಳು ಶಂಕಿತ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಬಾಂಬ್ ಸ್ಫೋಟಿಸಿದ ಶಂಕಿತ ಉಗ್ರ ಇದುವರೆಗೆ ಪತ್ತೆಯಾಗಿಲ್ಲ. ಈತನ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಇದರ ಬೆನ್ನಲ್ಲೇ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ಗೆ ಈ ಹುಸಿ ಬಾಂಬ್ ಬೆದರಿಕೆ ಹಾಕಿದ್ದು ಜನರಲ್ಲಿ ಆತಂಕ ಮನೆ ಮಾಡಿತ್ತು.