ಬೆಂಗಳೂರು: ರಜೆಗಳನ್ನು ಮುಗಿಸಿಕೊಂಡು ನಗರಕ್ಕೆ ಮರಳಿ ಕಚೇರಿ, ಕೆಲಸಗಳಿಗೆ ಹೋಗಲೆಂದು ಮೆಟ್ರೋ ನಿಲ್ದಾಣಗಳಿಗೆಬಂದ ಪ್ರಯಾಣಿಕರಿಗೆ ಏಪ್ರಿಲ್ 14 ಸೋಮವಾರ ಬೆಳಗ್ಗೆ ಆಘಾತ ಕಾದಿತ್ತು. ಬೆಳಗ್ಗೆ ಪೀಕ್ ಅವರ್‌ನಲ್ಲಿ ನಮ್ಮ ಮೆಟ್ರೋ ರೈಲುಗಳು 10 ನಿಮಿಷದ ಅಂತರದಲ್ಲಿ ಸಂಚರಿಸಿದ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು.
ಮೆಟ್ರೋ ರೈಲಿನಲ್ಲಿ ಸಂಚರಿಸಲು ಪ್ರಯಾಣಿಕರು ಒದ್ದಾಡಬೇಕಾಗಿ ಬಂತು. ಮೆಟ್ರೋ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ನಮ್ಮ ಮೆಟ್ರೋ ಈ ಅವ್ಯವಸ್ಥೆಯ ಬಗ್ಗೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ರೈಲು ಫ್ರೀಕ್ವೆನ್ಸಿ ಕಡಿಮೆಯಾದ ಪರಿಣಾಮ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರಿಗೆ, ಕಚೇರಿಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಯಿತು. ಮೆಜೆಸ್ಟಿಕ್, ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿನ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಇದನ್ನೂ ಓದಿ: ಕೋಲ್ಕತ್ತ ಹಿಂಸಾಚಾರ: ಸಶಸ್ತ್ರ ಪೊಲೀಸ್ ಪಡೆಗಳ ನಿಯೋಜನೆ – ಹೈಕೋರ್ಟ್
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಂದು ಭಾರೀ ಜನಸಂದಣಿ ಮತ್ತು ಗೊಂದಲ ಉಂಟಾಗಿತ್ತು. ಏಕೆಂದರೆ ಮೆಟ್ರೋ ರೈಲುಗಳು ನಿಗದಿತ ಸಮಯಕ್ಕಿಂತ ನಿಧಾನವಾಗಿ ಓಡುತ್ತಿದ್ದವು. ಪ್ಲಾಟ್‌ಫಾರ್ಮ್‌ಗಳು ತುಂಬಿ ತುಳುಕುತ್ತಿದ್ದವು ಮತ್ತು ಅಧಿಕಾರಿಗಳಿಂದ ಸ್ಪಷ್ಟ ಸಂವಹನವಿಲ್ಲದ ಕಾರಣ, ಪ್ರಯಾಣಿಕರು ಪೀಕ್ ಅವರ್‌ನಲ್ಲಿ ನಿರಾಶೆಯಿಂದ ಕಾಯಬೇಕಾಯಿತು ಎಂದು ‘ಕರ್ನಾಟಕ ಪೋರ್ಟ್ಫೊಲಿಯೋ’ ಎಕ್ಸ್ ಹ್ಯಾಂಡಲ್ನಲ್ಲಿ ವಿಡಿಯೋ ಸಹಿತ ಸಂದೇಶ ಪ್ರಕಟಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮದ ಅವ್ಯವಸ್ಥೆ ಖಂಡಿಸಿ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿ, ಅಸಮಾಧಾನ ಹೊರಹಾಕಿದ್ದಾರೆ. ಇಂದು ಬೆಳಿಗ್ಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದ ದೃಶ್ಯವಿದು. ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲರಿಗೂ ರಜೆ ಇದೆ ಎಂದು ಭಾವಿಸಿ, ದಟ್ಟಣೆ ಇರುವ ಸಮಯದಲ್ಲಿ ರೈಲುಗಳ ಆವರ್ತನವನ್ನು 10 ನಿಮಿಷಗಳಿಗೆ ಇಳಿಸುವುದು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗಿದೆ. ಇಂತಹ ಸಂದರ್ಭಗಳಲ್ಲಿ ಬಿಎಂಆರ್‌ಸಿಎಲ್ ಉತ್ತಮವಾಗಿ ಯೋಜನೆಗಳನ್ನು ರೂಪಿಸಬೇಕು ಮತ್ತು ಫ್ರೀಕ್ವೆನ್ಸಿಯನ್ನು ತಕ್ಷಣವೇ ಪುನಃಸ್ಥಾಪಿಸಬೇಕು ಎಂದು ಪಿಸಿ ಮೋಹನ್ ಆಗ್ರಹಿಸಿದ್ದಾರೆ.
ಮೆಜೆಸ್ಟಿಕ್‌ನಲ್ಲಿ 30 ನಿಮಿಷಗಳಿಂದಲೂ ಹೆಚ್ಚು ಕಾಯಬೇಕಾಯಿತು. ಈ ಶೋಚನೀಯ ಸೇವೆಗಾಗಿ ಇತ್ತೀಚೆಗೆ ಟಿಕೆಟ್ ದರದಲ್ಲಿ ಭಾರಿ ಏರಿಕೆ ಮಾಡಿದ್ದಾರೆ ಎಂದು ಎಂದು ಒಬ್ಬ ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ. ನಾನು 10 ನಿಮಿಷಗಳ ನಂತರವೂ ಅಲ್ಲಿದ್ದೆ, ಆದರೆ ಬಂದ ರೈಲು ಅಗಾಗಲೇ ತುಂಬಿತ್ತು. ಒಳಗೆ ಹೋಗಲು ಜಾಗವಿರಲಿಲ್ಲ ಎಂದು ಮತ್ತೊಬ್ಬರು ಪ್ರಯಾಣಿಕರು ದೂರಿದ್ದಾರೆ.
ಇದನ್ನೂ ನೋಡಿ: ಬ್ಯಾಟಿಂಗ್ ಪಿಚ್‌ನಲ್ಲಿ RR ಸೋತಿದ್ದ್ಯಾಕೆ? DC ಓಟಕ್ಕೆ ಬ್ರೇಕ್ ಹಾಕುತ್ತಾ RCB! #ipl2025 #RCB #DC