ಎಸ್.ವೈ. ಗುರುಶಾಂತ್
ಸಂಘಪರಿವಾರದ ಪುಂಡಾಟಿಕೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಏನಾದರೂ ಒಂದು ವಿಷಯವನ್ನು ಕೆದಕಿ ವಿವಾದ ಹುಟ್ಟಿಸಿ ಅಲ್ಪಸಂಖ್ಯಾತರನ್ನು ಗುರಿ ಮಾಡುವುದನ್ನು ಅದು ಮತ್ತಷ್ಟು ತೀವ್ರಗೊಳಿಸಿದೆ.
ಸುಗ್ಗಿಯ ನಂತರದಲ್ಲಿ ರಾಜ್ಯದಲ್ಲೆಡೆ ಹಬ್ಬಗಳು, ಜಾತ್ರೆಗಳು ನಡೆಯುವುದು ಎಂದಿನವಾಡಿಕೆಯಂತೆ ಆರಂಭವಾಗಿವೆ. ಇವು ಧಾರ್ಮಿಕವಾಗಿರುವಾಗಲೇ ಸಾಂಸ್ಕೃತಿಕ ಸ್ವರೂಪವನ್ನು ಹೊಂದಿವೆ. ವಿಶೇಷವಾಗಿ, ಸಾವಿರಾರು ವರ್ಷಗಳ ನಾಗರೀಕತೆಯ ವಿಕಸನದ ಹಲವಾರು ಪ್ರಮುಖ ಘಟ್ಟಗಳನ್ನು ಸಂಕೇತಿಸುತ್ತವೆ. ಒಂದೊಂದು ಸಮುದಾಯವು ತಾನು ಕಟ್ಟಿಕೊಂಡ ಬದುಕಿನ ಸಾಂಸ್ಕೃತಿಕ ಆಚರಣೆಯಾಗಿರುವುದು, ಕಾಲಾನುಕ್ರಮದಲ್ಲಿ ಸಮಾಜ ಬೆಳೆದಂತೆ ಎಲ್ಲರನ್ನೂ ಒಳಗೊಳ್ಳುವ ಕ್ರಿಯೆಯಾಗಿ ವಿಶಾಲ ಹರವು ಆಚರಣೆಗಳ ವೈವಿಧ್ಯತೆಯನ್ನು ಪಡೆದಿವೆ. ಈ ಪ್ರಕ್ರಿಯೆಯು ತನ್ನದೇ ಅಸ್ತಿತ್ವ, ಅಸ್ಮಿತತೆ ಹೊಂದಿರುವ ವಿವಿಧ ಜನಸಮುದಾಯಗಳನ್ನು ಒಂದೆಡೆಗೆ ಬೆಸೆಯುವ ಸಾಮೂಹಿಕ ಕ್ರಿಯೆಗಳಾಗಿ ಸಮಾಜದ ಶಾಂತಿ ಸೌಹಾರ್ದತೆಗೆ ಬೆಸೆಯುವ ಕೊಂಡಿಗಳಾಗಿವೆ. ಏಕರೂಪಿ ಸರ್ವಾಧಿಕಾರತ್ವದ ಸಂಸ್ಕೃತಿಯ ಯಜಮಾನಿಕೆಗೆ ಸವಾಲುಗಳಾಗಿ ಬಹುತ್ವದ ಪ್ರತಿಪಾದನೆಯ ಪ್ರತೀಕಗಳಾಗಿ ಜೀವಂತ ಇರುವುದು ನಾಡಿನ ಸಾಂಸ್ಕೃತಿಕ ಹಿರಿಮೆ.
ಜನ ಜೀವನದಲ್ಲಿ ಹಾಸುಹೊಕ್ಕಾಗಿರುವ ಇಂತಹ ಜನಸಂಸ್ಕೃತಿಯನ್ನು ಒಡೆದು ಏಕರೂಪಿ ಯಜಮಾನಿಕೆ ಹೇರಲು ಹವಣಿಸುವವರಿಗೆ ಈ ಸೌಹಾರ್ದ ಸಂಸ್ಕೃತಿ ನುಂಗಲಾರದ ತುತ್ತಾಗಿದೆ. ಹೀಗಾಗಿಯೇ ಬಾಬಾಬುಡನ್ ಗಿರಿ, ಆಳಂದ ದರ್ಗಾ, ಖಾಜಾ ಬಂದೇ ನವಾಜ್ ದರ್ಗಾ, ಶರಣ ಬಸಪ್ಪ ಅಪ್ಪಾ ದಂತಹ ಸೌಹಾರ್ದ ಕೇಂದ್ರಗಳ ಪರಂಪರೆಯನ್ನು ವಿಕೃತಗೊಳಿಸಿ ಜನರನ್ನು ಒಡೆಯಲು ಸತತ ಯತ್ನಿಸಲಾಗುತ್ತಿದೆ.
ಇದೀಗ ಸಂಘಪರಿವಾರದ ವಿಭಜಕ ವಿದ್ವೇಷದ ರಾಜಕಾರಣ ಹಬ್ಬ ಜಾತ್ರೆಗಳಿಗೂ ವಿಸ್ತರಿಸುತ್ತಿದೆ. ಇತ್ತೀಚೆಗೆ ಹಿಜಾಬ್ ಬಗ್ಗೆ ಬಂದ ಹೈಕೋರ್ಟಿನ ತೀರ್ಪನ್ನು ತಮ್ಮ ಅಜೆಂಡಾಕ್ಕೆ ದೊರೆತ ದಿಗ್ವಿಜಯ ಎಂಬಂತೆ ಬೀಗಿದ ಸಂಘಪರಿವಾರ ಕರಾವಳಿ, ಮಲೆನಾಡಿನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ.
ಉಡುಪಿ ಜಿಲ್ಲೆಯ ಕಾಪು ಪ್ರದೇಶದಲ್ಲಿ ನಡೆಯುವ ಮೂರು ಮಾರಿಗುಡಿಗಳ ಜಾತ್ರೆಯ ಸಂದರ್ಭದಲ್ಲಿ ಹಿಂದೂಯೇತರರಿಗೆ ಈ ಪ್ರದೇಶದಲ್ಲಿ ವ್ಯಾಪಾರ ಮಳಿಗೆ ತೆರೆಯಲು ಅವಕಾಶ ಕೊಡಬಾರದು ಎಂದು ಕಾಪು ಪುರಸಭೆ ಮುಖ್ಯಾಧಿಕಾರಿ, ಹೊಸ ಮಾರಿಗುಡಿ ದೇವಸ್ಥಾನದ ನಿರ್ವಹಣಾಧಿಕಾರಿಗಳಿಗೆ ಒತ್ತಡ ಹಾಕಲಾಗಿದೆ. ಹಿಂದೂಯೇತರರು ಎನ್ನುವಾಗ ನಿರ್ದಿಷ್ವಾಗಿ ಮುಸ್ಲಿಂ ವ್ಯಾಪಾರಿಗಳನ್ನೇ ಅವರು ಗುರಿ ಮಾಡಿರುವುದು ಮತ್ತು ಹಾಗೇ ಪ್ರಸ್ತಾಪಿಸಿರುವುದು ಕಾಣುತ್ತದೆ. ಯಾಕೆಂದರೆ, ತಲೆತಲಾಂತರದಿಂದ ಈ ಪ್ರದೇಶಗಳಲ್ಲಿ ವಾಸವಿರುವ ವಿವಿಧ ಜಾತಿ ಧರ್ಮಿಯರು ಜಾತ್ರೆಯ ಸಂದರ್ಭದಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಮನಸುಗಳು ಒಡೆದು ಹೋಗಿರುವ ಈ ಸಂದರ್ಭದಲ್ಲಿ ಒಳಗೊಳ್ಳುವ ಬದಲು ಈಗ ವ್ಯಾಪಾರಿಗಳ ಮತಧರ್ಮ ನೋಡಿ ಅವಕಾಶ ನೀಡಬಾರದು ಎನ್ನುವುದು ಎಷ್ಟು ಸರಿ.
ಬಜರಂಗದಳದ ಮುಖಂಡರ ಮನವಿ ಬಗ್ಗೆ ಕಾಪು ಪುರಸಭೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ ‘ನಿರ್ದಿಷ್ಟ ಸಮುದಾಯದವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂಬ ನಿಯಮವಿಲ್ಲ. ಯಾರು ಬೇಕಾದರೂ ಅಂಗಡಿಗಳನ್ನು ತೆರೆಯಬಹುದು, ವ್ಯಾಪಾರ ಮಾಡಬಹುದು’ ಎಂದು ಹೇಳಿದ್ದಾರೆ. ಆದರೆ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಯವರು ‘ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ನೀಡಲು ದೇವಸ್ಥಾನದ ಮಂಡಳಿಯಲ್ಲಿ ನಿರ್ಧರಿಸಲಾಗಿದೆ’ ಎಂದು ಹೇಳುತ್ತಾರೆ.
ಹಲವಾರು ದಶಕಗಳಿಂದ ಸೌಹಾರ್ದತೆಗೆ ಹೆಸರಾಗಿದ್ದ ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಸ್ಥಾನ ಜಾತ್ರೆಯಲ್ಲಿಯೂ ಮುಸ್ಲಿಮರು ಅಂಗಡಿ ಹಾಕದಂತೆ ಬಿಜೆಪಿ, ಬಜರಂಗದಳದವರು ತಡೆದು ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಇವೆಲ್ಲವೂ ಹಿಂದೂ ಧರ್ಮ, ಹಿಂದೂಗಳ ಹೆಸರಿನಲ್ಲಿ ಕೋಮುವಾದಿ ಹಿಂದುತ್ವದ ಫ್ಯಾಸಿಸ್ಟ್ ಶಕ್ತಿಗಳು ನಡೆಸುತ್ತಿರುವ ಸಮಾಜವನ್ನು ಒಡೆಯುವ ಅಪಾಯಕಾರಿ ಕೃತ್ಯಗಳಾಗಿವೆ. ಆರ್.ಎಸ್.ಎಸ್. ಪ್ರತಿಪಾದಿಸುವ ‘ಹಿಂದುತ್ವ’ದಲ್ಲಿ ಮುಸ್ಲಿಮರು ಕ್ರಿಶ್ಚಿಯನ್ನರು ಎರಡನೆಯ ದರ್ಜೆಯ ನಾಗರೀಕರು. ಅವರಿಗೆ ಎಲ್ಲಾ ನಾಗರಿಕರಂತೆ ಸಮಾನ ಅವಕಾಶ ಹಕ್ಕುಗಳು ಇರುವುದಿಲ್ಲ ಎನ್ನುವುದನ್ನು ಸಂಘಪರಿವಾರ ಜಾರಿಗೊಳಿಸ ಬಯಸುತ್ತಿದೆ. ಪ್ರಮುಖವಾಗಿ, ಮುಸ್ಲಿಮರು ವ್ಯಾಪಾರ ಮಾಡಬಾರದು ಎನ್ನುವ ದ್ವೇಷದ ಕಾರಣದಲ್ಲಿ ಅವರ ಬದುಕಿನ ಆರ್ಥಿಕ ಮೂಲಗಳನ್ನು ಹಾಳುಗೆಡಹುವ ಕುತಂತ್ರವಿದೆ. ಈ ಹಿಂದಿನಿಂದಲೂ ಮುಸ್ಲಿಮರ ಅಂಗಡಿಗಳಲ್ಲಿ ಸಾಮಾನುಗಳನ್ನು ಖರೀದಿಸಬಾರದು ಎನ್ನುವ ಪ್ರಚಾರ ಸತತವಾಗಿ ನಡೆಸುತ್ತಲೇ ಬರಲಾಗಿದೆ. ಗುಜರಾತಿನ ಮಾದರಿ ಪ್ರಯೋಗ ಇದೀಗ ಕರಾವಳಿಯ ಕರ್ನಾಟಕದಲ್ಲಿಯೂ ಕರ್ನಾಟಕದ ಇತರ ಕಡೆಗಳಲ್ಲಿಯೂ ಅಡೆತಡೆಯಿಲ್ಲದೆ ನಡೆಯುತ್ತಿದೆ.
ಇಂತಹ ಸಂವಿಧಾನ ವಿರೋಧಿ, ಸಮಾಜ ವಿರೋಧಿ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದ ಕರ್ನಾಟಕ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಚಿವರುಗಳು, ಜಿಲ್ಲಾಡಳಿತದ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ? ಗೃಹ ಸಚಿವರು ಇತರರ ಮಾತುಗಳನ್ನು ಕೇಳಿದರೆ ಇಂತಹ ಶಕ್ತಿಗಳಿಗೆ ಸರಕಾರದ ನೇರ ಕುಮ್ಮಕ್ಕು ಇರುವ ಅನುಮಾನ ದಟ್ಟವಾಗಿ ಬರುತ್ತದೆ.
ಇಂತಹ ಕೃತ್ಯಗಳಿಗೆ ಸರಕಾರದ ಮೌನಸಮ್ಮತಿ ಯಿಂದ ಸಮಾಜದ ಒಳಗಡೆಯಲ್ಲಿ ತೀವ್ರತರ ಹತಾಶೆ, ಆಕ್ರೋಶಗಳು ಉದ್ಭವವಾಗಬಹುದು. ಶಾಂತಿ-ನೆಮ್ಮದಿ ಕದಡಬಹುದು. ಹೀಗಾದಲ್ಲಿ ಸಮಾಜದ ಪ್ರಗತಿ ಸಾಧ್ಯವಿದೆಯೇ ಎಂದು ಯೋಚಿಸಬೇಕು.
ಆದ್ದರಿಂದ, ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನಾಗರಿಕ ಕಾನೂನು ಜಾರಿಯಾಗಬೇಕು ಮತ್ತು ಜನ ಪರಂಪರೆಯನ್ನು ರಕ್ಷಿಸಿ ಕಾನೂನುಬದ್ಧ ಆಡಳಿತವನ್ನು ಸ್ಥಾಪಿಸಬೇಕು. ಅಂತಹ ಒತ್ತಡ ಹಾಕಿದವರ ಮೇಲೆ, ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಿದ ತೀರ್ಮಾನ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ದೇವಸ್ಥಾನದ ಅಭಿವೃದ್ಧಿ ಮಂಡಳಿಯಲ್ಲಿ ಪದಾಧಿಕಾರಿಗಳು ಆಗುವುದು ಅದರ ಅಭಿವೃದ್ಧಿಗೆ ಹೊರತು ವಿಭಜಕದ ಬಿಜೆಪಿ ರಾಜಕಾರಣದ ನಿರ್ವಹಣೆಗೆ ಅಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬೇಕು. ಈ ಕೂಡಲೇ ಸರಕಾರ ಎಲ್ಲರಿಗೂ ಮುಕ್ತವಾಗಿ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಿ. ಸಮಾಜದ ಜನತೆಯು ಸಾಮರಸ್ಯ, ಸೌಹಾರ್ದತೆ ಹಾಳುಮಾಡುವ ಕೃತ್ಯಗಳನ್ನು ಅಮಾನವೀಯ ನಡೆಗಳನ್ನು ತಡೆಯಲು ಮುಂದಾಗಲಿ.