ಪರಿಸ್ಥಿತಿ ನೋಡಿಕೊಂಡು ಶಾಲೆಗಳು ಬಂದ್‌ ಮಾಡುವ ಬಗ್ಗೆ ತೀರ್ಮಾನ-ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್

ಬೆಂಗಳೂರು: ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಪ್ರಮುಖವಾಗಿ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ. ಆತಂಕಗೊಳ್ಳುವುದಿಲ್ಲ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈಗ ಕೆಲವು ವಸತಿ ಶಾಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಪ್ರಮಾಣದಲ್ಲಿ ಹೆಚ್ಚಳ ಆಗುವ ಸಾಧ್ಯತೆ ಇದೆ. ಫೆಬ್ರುವರಿ ಅಂತ್ಯದ ವೇಳೆಗೆ ಕೋವಿಡ್ ಮೂರನೇ ಅಲೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಈಗ ಸೋಂಕು ಕಾಣಿಸಿಕೊಂಡಿರುವ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ವಸತಿ ಶಾಲೆಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲನೆ ಕುರಿತು ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ವಸತಿ ಶಾಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ನೀಡಲು ಚಿಂತನೆ ನಡೆದಿದೆ ಎಂದು ಹೇಳಿದರು.

ಇದನ್ನು ಓದಿ: ಶಾಲೆ ಬಿಟ್ಟ ಮಕ್ಕಳ ಸಂಖ್ಯೆ 50 ಸಾವಿರ, ಎಲ್ಲಿದೆ ಶಿಕ್ಷಣ ಹಕ್ಕು ಕಾಯ್ದೆ?

ಕೊರೋನಾ ಎರಡನೇ ಅಲೆ ಕಡಿಮೆಯಾಗಿ ಎಲ್ಲವೂ ಸಹಜ ಸ್ಥಿತಿಗೆ ಬರುತ್ತಿರುವಾಗ ಇತ್ತೀಚೆಗಷ್ಟೇ ಶಾಲೆಗಳು ಆರಂಭವಾಗಿದ್ದವು. ಈಗ ಮತ್ತೆ ಅಲ್ಲಲ್ಲಿ ಶಾಲಾ-ಕಾಲೇಜು ಮಕ್ಕಳಲ್ಲಿ ಸೋಂಕು ಉಲ್ಭಣವಾಗುತ್ತಿದೆ. ಕೊರೋನಾ ಸೋಂಕು ಹೆಚ್ಚಳವಾದರೆ ಬದಲಿ ಕ್ರಮ ಏನು ತೆಗೆದುಕೊಳ್ಳಬೇಕೆಂದು ಯೋಚಿಸುತ್ತೇವೆ. ಅಕಸ್ಮಾತ್ ಪರೀಕ್ಷೆ ಮತ್ತು ಭೌತಿಕ ತರಗತಿಗಳನ್ನು ನಿಲ್ಲಿಸಬೇಕೆಂದರೆ ಆ ಕ್ರಮಕ್ಕೂ ಸಿದ್ಧರಿದ್ದೇವೆ ಎಂದರು.

ಕಳೆದ ವಾರ ಕೊರೋನಾ ಪಾಸಿಟಿವ್ ಬಂದ ಶಾಲೆಗಳ ಮಕ್ಕಳ ಬಗ್ಗೆ ವರದಿ ತರಿಸಿಕೊಂಡಿದ್ದೇವೆ. ಇದುವರೆಗೆ ಯಾರಿಗೂ ತೊಂದರೆಯಾಗಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿ ಗುಣಮುಖರಾಗುತ್ತಿದ್ದಾರೆ. ಆದರೂ ಇತ್ತೀಚೆಗೆ ಹಲವು ಶಾಲೆಗಳಲ್ಲಿ ಹತ್ತಾರು ಮಕ್ಕಳಿಗೆ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಶಾಲೆಗಳಲ್ಲಿ ಕೋವಿಡ್ ಶಿಷ್ಠಾಚಾರಗಳನ್ನು ಕಠಿಣವಾಗಿ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಜಾರಿಗೆ ತರಲಾಗುವುದು ಎಂದರು.

ಶಾಲೆಗಳನ್ನು, ಪರೀಕ್ಷೆಗಳನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಎದುರಾದರೆ ಹಿಂದೇಟು ಹಾಕುವುದಿಲ್ಲ, ಇವತ್ತಿನ ತಜ್ಞರ ವರದಿಯಲ್ಲಿ ಯಾವುದೇ ಗಾಬರಿಪಡುವ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎಂದರು. 

Donate Janashakthi Media

Leave a Reply

Your email address will not be published. Required fields are marked *