ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಿ ಆರ್ ಮನೋಹರ್​: ಕಾಂಗ್ರೆಸ್‌ ಸೇರ್ಪಡೆ ಖಚಿತ

ಬೆಂಗಳೂರು: ವಿಧಾನ ಪರಿಷತ್ತಿನ ಜೆಡಿಎಸ್​ ಸದಸ್ಯ ಸಿ.ಆರ್​.ಮನೋಹರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಮೂಲಕ ಜೆಡಿಎಸ್ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದು, ಇನ್ನೆರಡು ದಿನದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಗೊಳ್ಳುವುದು ಖಚಿತವಾಗಿದೆ.

ಸೋಮವಾರ ರಾತ್ರಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿದ ಸಿ.ಆರ್‌.ಮನೋಹರ್​ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣ ಮತ್ತು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಉಲ್ಲೇಖಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಸಭಾಪತಿಗಳು ಮುಂದಿನ ಕ್ರಮಕ್ಕಾಗಿ ಕಾರ್ಯದರ್ಶಿಗೆ ಕಳುಹಿಸಿದ್ದಾರೆ.

ರಾಜೀನಾಮೆ ನೀಡಿದ‌ ಬಳಿಕ ಮಾತನಾಡಿದ ಸಿ.ಆರ್‌.ಮನೋಹರ್ ʻʻನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಜೆಡಿಎಸ್​ನವರು ಟಿಕೆಟ್​ ನಿರಾಕರಿಸುವ ನಿರ್ಧಾರ ಮಾಡಿದ್ದರು. ಹಾಗಾಗಿ ಜೆಡಿಎಸ್​ ತೊರೆದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ವಿಧಾನಸಭೆಗೆ ಹೋಗೋಕೆ ಮನಸ್ಸಿದೆ. ಡಿಸೆಂಬರ್ 2ಕ್ಕೆ ತೀರ್ಮಾನ ಮಾಡಿ ನಿರ್ಧಾರ ಹೇಳುತ್ತೇನೆ. ಜೆಡಿಎಸ್‌ ಪಕ್ಷಕ್ಕೂ ರಾಜೀನಾಮೆ ಪತ್ರವನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸುತ್ತೇನೆ ಎಂದು ತಿಳಿಸಿದರು.

ಚಿತ್ರ ನಿರ್ಮಾಪಕರೂ ಆಗಿರುವ ಮನೋಹರ್​, ಜೆಡಿಎಸ್‌ ವರಿಷ್ಠ ಎಚ್​.ಡಿ.ಕುಮಾರಸ್ವಾಮಿ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿದ್ದರು.

ನಂತರದ ದಿನಗಳಲ್ಲಿ ಸಿ.ಆರ್​. ಮನೋಹರ್​ ಜೆಡಿಎಸ್​ ವರಿಷ್ಠರ ಜತೆ ಮುನಿಸಿಕೊಂಡಿದ್ದು, ಬಿಜೆಪಿ ಕಡೆ ಒಲವು ತೋರಿದ್ದರು. ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದರು. ಅಲ್ಲದೆ ಪರಿಷತ್‌ ಚುನಾವಣೆಯ ಆಕಾಂಕ್ಷಿಯೂ ಆಗಿದ್ದು, ಬಿಜೆಪಿ ಟಿಕೇಟ್‌ ಪಡೆಯುವ ನಿರೀಕ್ಷೆಯಲ್ಲಿದ್ದರು. ವಿಧಾನ ಪರಿಷತ್​ ಚುನಾವಣೆಗೆ ಬಿಜೆಪಿಯ ಟಿಕೆಟ್​ ಸಿಗದೇ ಇರುವ ಕಾರಣದಿಂದಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ.

ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿರುವ ಸಿ.ಆರ್.‌ ಮನೋಹರ್ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಡಿಸೆಂಬರ್​ 2 ರಂದು ಕಾಂಗ್ರೆಸ್​ ಸೇರುವ ಸಾಧ್ಯತೆಗಳಿವೆ.

Donate Janashakthi Media

Leave a Reply

Your email address will not be published. Required fields are marked *