ಪರಿಸರ ರಾಯಭಾರಿಯಾಗಿ ಸಾಲುಮರದ ತಿಮ್ಮಕ್ಕ: ರಾಜ್ಯ ಸಚಿವ ಸಂಪುಟ ಸ್ಥಾನಮಾನ

ಬೆಂಗಳೂರು: ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ‌ ಪುರಸ್ಕೃತರಾದ ನಾಡೋಜ ಡಾ|| ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯನ್ನಾಗಿ ನೇಮಿಸಲಾಗಿದ್ದು, ಅವರಿಗೆ ರಾಜ್ಯ ಸಚಿವ‌ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಉದ್ದಗಲಕ್ಕೂ ಪರಿಸರ ರಕ್ಷಣೆಯ ಕುರಿತು ಪ್ರಚಾರ ಮಾಡಲು ತಿಮ್ಮಕ್ಕ ಅವರಿಗೆ ಈ ಗೌರವನ್ನು ಕಲ್ಪಿಸಲಾಗಿದೆ. ಅಲ್ಲದೆ, ಹೊರ ರಾಜ್ಯಕ್ಕೆ ತೆರಳಿದರೆ ಸರ್ಕಾರವೇ ಖರ್ಚು ಭರಿಸಲಿದೆ.

ಜೂನ್ 3ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಾಲುಮರದ ತಿಮ್ಮಕ್ಕನವರ 111ರ ಜನ್ಮದಿನದ ಸಂಭ್ರಮ ಹಾಗೂ ಸಾಲುಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್ ಪ್ರದಾನ ಸಮಾರಂಭ ನಡೆದಿತ್ತು. ಅಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಪರಿಸರ ರಾಯಭಾರಿ ಗೌರವ ನೀಡುವ ಜೊತೆಗೆ ಸಂಪುಟ ದರ್ಜೆ ಸ್ಥಾನಮಾನ ಕಲ್ಪಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಅದರಂತೆ, ಅಧಿಕೃತ ಆದೇಶ ಹೊರಡಿಸಲಾಗಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸೂರು ಗ್ರಾಮದವರಾದ ತಿಮ್ಮಕ್ಕ ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಲಭಿಸಲಿಲ್ಲ. ಅನಕ್ಷರಸ್ಥೆಯಾಗಿದ್ದರೂ ಸಹ ಪರಿಸರ ರಕ್ಷಣೆಯಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ.  ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದವರು.

ಅವರ ಈ ಕಾರ್ಯಕ್ಕೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳೂ ಲಭಿಸಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಗೌರವಿಸಿವೆ.

Donate Janashakthi Media

Leave a Reply

Your email address will not be published. Required fields are marked *