ಕಾಯಿಲೆಗಳನ್ನು ಮೆಟ್ಟಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಅಮೆರಿಕದ ನೊಹಾ ಲೈಲೆಸ್!

ಅಮೆರಿಕದ ನೊಹಾ ಲೈಲೆಸ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ ಹಿಂದೆ ರೋಚಕ ಕತೆಯೇ ಇದೆ. ಹಲವು ದೈಹಿಕ ಹಾಗೂ ಮಾನಸಿಕ ಕಾಯಿಲೆಗಳನ್ನು ಮೆಟ್ಟಿ ನಿಂತು ಅವರ ಸಾಧನೆ ಹಲವು ಯುವಪೀಳಿಗೆಯವರಿಗೆ ಸ್ಫೂರ್ತಿಯಾಗಿದೆ. 

ಹೌದು, ವಿಶ್ವ ಚಾಂಪಿಯನ್ ನೊಹಾ ಲೈಲೆಸ್ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅಮೆರಿಕಕ್ಕೆ ಒಲಿಂಪಿಕ್ಸ್ ನಲ್ಲಿ 20 ವರ್ಷಗಳ ನಂತರ ಚಿನ್ನ ತಂದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಪುರುಷರ 100 ಮೀ. ಓಟದ ಸ್ಪರ್ಧೆಯಲ್ಲಿ ನೋಹಾ ಲೈಲೆಸ್ 9.79 ಸೆಕೆಂಡ್ ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಗೆದ್ದಿದ್ದರು. ವಿಶೇಷ ಅಂದರೆ ಜೈಕಾದ ಮತ್ತೊಬ್ಬ ಸ್ಪರ್ಧಿ ಜೊತೆ 9.79 ಸೆಕೆಂಡ್ ನಲ್ಲಿ ಜೊತೆಯಾಗಿ ಗುರಿ ಮಟ್ಟಿದ್ದರು. ಕೂದಲೆಳೆ ಅಂತರದಲ್ಲಿ ಫೋಟೊ ಫಿನಿಷ್ ಮೂಲಕ ಚಿನ್ನದ ಪದಕ ಗೆದ್ದಿದ್ದರು.

ಚಿನ್ನದ ಪದಕ ಗೆದ್ದ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕೇವಲ ಓಟದಲ್ಲಿ ಮಾತ್ರವಲ್ಲ, ಹಲವು ಕಾಯಿಲೆಗಳ ವಿರುದ್ಧವೂ ನಾನು ಹೋರಾಡುತ್ತಾ ಬಂದಿದ್ದೆ. ಅದೆಲ್ಲದರ ವಿರುದ್ಧದ ಗೆಲುವು ಇದಾಗಿದೆ ಎಂದು ಹೇಳಿಕೊಂಡಿದ್ದಾರೆ.

ಅಲರ್ಜಿ, ಅಸ್ತಮ, ಖಿನ್ನತೆ, ತಪ್ಪು ತಪ್ಪಾಗಿ ಓದುವ ಅಥವಾ ಅಕ್ಷರಗಳನ್ನು ಗುರುತಿಸಲಾಗದ ಸಮಸ್ಯೆ ಸೇರಿದಂತೆ ಹಲವು ಕಾಯಿಲೆಗಳು ನನ್ನನ್ನು ಕಾಡುತ್ತಿದ್ದವು. ಆದರೆ ನನ್ನ ಗೆಲುವು ಈ ಸಮಸ್ಯೆಗಳು ಅಡ್ಡಿಯಾಗಲಿಲ್ಲ ಎಂದು ಎಕ್ಸ್ ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

27 ವರ್ಷದ ನೊಹಾ ಲೈಲೆಸ್ ಕ್ರೀಡಾ ಶಿಸ್ತು ಕಾಪಾಡಿಕೊಳ್ಳದ ಕಾರಣ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಆದರೆ ಎಲ್ಲಾ ಆರೋಪಗಳಿಗೂ ಭಾನುವಾರ ಒಲಿಂಪಿಕ್ಸ್ ಚಿನ್ನದ ಪದಕ ಉತ್ತರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *