ಮಂಗಳೂರು: ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಇತ್ತೀಚಿಗೆ ನಡೆದಿತ್ತು. ಮೃತಪಟ್ಟ ಕಾರ್ಮಿಕ ಕುಟುಂಬಗಳಿಗೆ ಕಾರ್ಖಾನೆಯು ಪರಿಹಾರ ನೀಡಬೇಕೆಂದು ಡಿವೈಎಫ್‌ಐ ಹಾಗೂ ಸಿಐಟಿಯು ಸಂಘಟನೆಯ ನಾಯಕರು ಪಟ್ಟು ಹಿಡಿದರು. ಪರಿಣಾಮ ತಲಾ 15 ಲಕ್ಷ ರೂಪಾಯಿ ಪರಿಹಾರ ನೀಡಲು ಕಾರ್ಖಾನೆ ಒಪ್ಪಿಗೆ ಸೂಚಿಸಿದೆ.
ಭಾನುವಾರ(ಏಪ್ರಿಲ್ 17) ತಡರಾತ್ರಿ ವಿಶೇಷ ಆರ್ಥಿಕ ವಲಯ(ಎಸ್‌ಇಝೆಡ್) ವ್ಯಾಪ್ತಿಯ ಉಲ್ಕಾ ಫಿಷ್ ಮಿಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಪಶ್ಚಿಮ ಬಂಗಾಳ ಮೂಲದ ಐದು ಮಂದಿ ಕಾರ್ಮಿಕರು ಮೃತಪಟ್ಟರು. ದುರ್ಘಟನೆಯ ನಂತರ ಸ್ಥಳಕ್ಕೆ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಸಂಘಟನೆಯ ಮುಖಂಡರು ಧಾವಿಸಿ ಕಾರ್ಮಿಕರೊಂದಿಗೆ ಸುಧೀರ್ಘವಾಗಿ ಚರ್ಚಿಸಿದರು.
ಇದನ್ನು ಓದಿ: ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ: ಸ್ವಚ್ಛಗೊಳಿಸುವ ಸಂದರ್ಭ ಐವರು ಕಾರ್ಮಿಕರ ಸಾವು
ಕಾರ್ಮಿಕ ಕುಟುಂಬಗಳಿಗೆ ಕಾರ್ಖಾನೆಯು ಪರಿಹಾರ ಧನ ನೀಡಬೇಕು, ಅಲ್ಲಿಯವರಗೆ ಮೃತ ದೇಹ ಕಳುಹಿಸಿಕೊಡಲು ಸಮ್ಮತಿ ನೀಡಲಾಗುವುದಿಲ್ಲ ಎಂದು ಪಟ್ಟು ಹಿಡಿದರು. ಹಲವು ಹಂತಗಳ ಮಾತುಕತೆಯ ನಂತರ ಕಾರ್ಖಾನೆಯು ಮೃತಪಟ್ಟ ಪ್ರತಿಯೊಂದು ಕುಟುಂಬಕ್ಕೆ ರೂ. 15 ಲಕ್ಷ ಪರಿಹಾರ ಮೊತ್ತ ನೀಡುವುದಾಗಿ ಭರವಸೆ ನೀಡಿತು.
ಅಲ್ಲದೆ, ಹದಿನೈದು ದಿನಗಳಲ್ಲಿ ಕುಟುಂಬದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವುದಾಗಿ ಲಿಖಿತವಾಗಿ ಕುಟುಂಬದ ಸದಸ್ಯರಿಗೆ ಪತ್ರ ನೀಡಿತು. ಮಾತುಕತೆಯ ಸಂದರ್ಭ ಕುಟುಂಬ ಸದಸ್ಯರ ಜೊತೆಗೆ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಮುಖಂಡರಾದ ಬಿ ಕೆ ಇಮ್ತಿಯಾಜ್, ಮನೋಜ್ ಉರ್ವಸ್ಟೋರ್, ಪ್ರಶಾಂತ್ ಎಮ್. ಬಿ, ಬಜ್ಪೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್, ಸಾಲಿ ಮರವೂರು ಮತ್ತಿತರರು ಹಾಜರಿದ್ದರು.
ಇಷ್ಟು ದೊಡ್ಡ ದುರಂತ ನಡೆದು ಸಾವು ನೋವು ಸಂಭವಿಸಿದರೂ ಸ್ಥಳೀಯ ಜನಪ್ರತಿನಿಧಿಗಳು ಕನಿಷ್ಟ ಸ್ಥಳಕ್ಕೆ ಭೇಟಿಯನ್ನೂ ನೀಡದಿರುವುದು ದುರದೃಷ್ಟಕರ ಎಂದಿರುವ ಸಂಘಟನೆಯ ಮುಖಂಡರು ಪಶ್ಚಿಮ ಬಂಗಾಳ ಸರಕಾರ ಮೃತ ಕುಟುಂಬಗಳಿಗೆ ತಲಾ ಎರಡು ಲಕ್ಷ ಪರಿಹಾರ ಧನ ಘೋಷಿಸಿದೆ. ಕರ್ನಾಟಕ ಸರಕಾರವು ಸಹ ತಲಾ ಹತ್ತು ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿವೆ.
ವರದಿ: ವಿನೋದ ಶ್ರೀರಾಮಪುರ