ಬೆಂಗಳೂರು: ನಾನು ಯಾಕೆ ಸಿಎಂ ಆಗಬಾರದು? ಮುನಿಯಪ್ಪ ಯಾಕಾಗಬಾರದು? ಮಹಾದೇವಪ್ಪ ಯಾಕೆ ಆಗಬಾರದು ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ. ಆ ಮೂಲಕ ಮತ್ತೆ ದಲಿತ ಮುಖ್ಯಮಂತ್ರಿ ಬಗ್ಗೆ ಧ್ವನಿ ಎತ್ತಿ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದ್ದಾರೆ.
ದಲಿತಪರ ಸಂಘಟನೆಗಳು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ ಸರ್ಕಾರದ ದಲಿತ ಸಮುದಾಯದ ಸಚಿವರುಗಳಿಗೆ ಆಯೋಜಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಮಾತನಾಡುತ್ತಾ, 2018ರಲ್ಲಿ ದಲಿತರನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ಗೆ ಸೋಲಾಯ್ತು. ಈ ಬಾರಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. ಆದರೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ, ಉಪ ಮುಖ್ಯಮಂತ್ರಿ ಹುದ್ದೆಯನ್ನು ನೀಡಲಿಲ್ಲ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ನಾನು ಯಾಕೆ ಸಿಎಂ ಆಗಬಾರದು. ಮುನಿಯಪ್ಪ ಯಾಕಾಗಬಾರದು? ಮಹದೇವಪ್ಪ ಯಾಕಾಗಬಾರದು? ನಮಗೆ ಸಿಎಂ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ. ನಮ್ಮಲ್ಲಿ ಕೀಳರಿಮೆ ಇರಬಾರದು. ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಉಳಿದುಕೊಳ್ಳುತ್ತೇವೆ. ಅದನ್ನು ಬಿಟ್ಟು ಎಡಗೈ, ಬಲಗೈ ಸಮುದಾಯ ಅಂತಿದ್ದರೆ ಏನೂ ಸಾಧಿಸಲಾಗಲ್ಲ. ನಮ್ಮಲ್ಲಿ ಒಗ್ಗಟ್ಟು ಮೂಡಿದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದು ಗುಡುಗಿದರು. ನನ್ನ ನೇತೃತ್ವದಲ್ಲಿ 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದ್ರೆ ಪರಮೇಶ್ವರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಅಂತ ಯಾರೂ ಹೇಳಲಿಲ್ಲ. ನನ್ನ ನೇತೃತ್ವದಲ್ಲಿ ಅಧಿಕಾರ ಬಂತು ಎಂದು ನಾನು ಹೇಳಿಕೊಳ್ಳಲಿಲ್ಲ. ಆದ್ರೆ, 2018ರಲ್ಲಿ ದಲಿತರನ್ನು ಕಡೆಗಣಿಸಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು. ಯಾವ ಸಮುದಾಯ ಕಡೆಗಣಿಸಿದ್ರೋ ಅವರಿಂದ ಪಾಠ ಕಲಿಬೇಕಾಯ್ತು ಎಂದು ಪರೋಕ್ಷವಾಗಿ ತಮನ್ನು ಸಿಎಂ ಮಾಡದೇ ಕಡೆಗಣಿಸಿದಕ್ಕೆ 2018ರಲ್ಲಿ ಕಾಂಗ್ರೆಸ್ ಸೋಲಾಯ್ತು ಎಂದು ಹೇಳಿದರು. ಅಲ್ಲದೇ ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷದಿಂದ ಜನವರಿ 8ಕ್ಕೆ ಪರಿಶಿಷ್ಟ ಜಾತಿ – ಪಂಗಡಗಳ ʻಐಕ್ಯತಾ ಸಮಾವೇಶʼ : ಡಾ. ಜಿ.ಪರಮೇಶ್ವರ್
ಮುನಿಯಪ್ಪ ನೇತೃತ್ವದಲ್ಲಿ ಜಗಜೀವನ್ ರಾಮ್ ಜಯಂತಿ ಮಾಡಲು ಹೇಳಿದ್ರು. ನನ್ನ ನೇತೃತ್ವದಲ್ಲಿ ಡಾ.ಅಂಬೇಡ್ಕರ್ ಜಯಂತಿ ಮಾಡಲು ಹೇಳಿದ್ರು. ಜಗಜೀವನರಾಮ್ ಎಡಗೈ ಅಂಬೇಡ್ಕರ್ ಬಲಗೈ ಅಂತ ನಮಗೆ ಮಾಡುವುದಕ್ಕೆ ಹೇಳ್ತಿದಾರೆ. ಇದರೊಂದಿಗೆ ಅಲ್ಲೂ ನಮ್ಮನ್ನು ಒಡೆದು ಆಳುವುದಕ್ಕೆ ನೋಡಿದರು. ನಾವು ಮಾಡುವುದು ಬೇಡ ಒಪ್ಪೋದು ಬೇಡ ಅಂತ ಮುನಿಯಪ್ಪಗೆ ನಾನೇ ಹೇಳಿದ್ದೆ ಎಂದು ತಿಳಿಸಿದರು.ನಮ್ಮ ಪಕ್ಷದ ಆಂತರಿಕ ವಲಯದಲ್ಲಿ ಗೆಲುವಿನ ಪರಮರ್ಷೆ ಮಾಡುವಾಗ ಈ ಬಾರಿ ದಲಿತರು ನಮ್ಮನ್ನು ಕೈ ಹಿಡಿದಿದ್ದಾರೆ ಎಂದು ಮಾತನಾಡುತ್ತಾರೆ. ಮುಸ್ಲಿಮರು 100% ನಮ್ಮ ಕೈ ಹಿಡಿದಿದ್ದಾರೆ ಎಂದು ಹೇಳುತ್ತಾರೆ. . ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ. 51 ಮೀಸಲು ಕ್ಷೇತ್ರಗಳ ಪೈಕಿ 32ರಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ . ಮೊದಲ ಅಧಿವೇಶನದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಮಂಡಿಸುತ್ತೇವೆ ಎಂದರು.