ಟೋಕಿಯೋ: ಪ್ಯಾರಾಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ ಟೂರ್ನಿಯನ್ನು ಸೇರ್ಪಡೆಗೊಳಿಸಲಾಗಿತ್ತು. ಅದರಂತೆ ಬ್ಯಾಡ್ಮಿಂಟನ್ನಲ್ಲಿ ದೇಶಕ್ಕೆ ಚಿನ್ನಕ್ಕೆ ಗುರಿಯಿಟ್ಟ ಪ್ರಮೋದ್ ಭಗತ್ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮನೋಜ್ ಸರ್ಕಾರ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ.
ಸೆಮಿಫೈನಲ್ ನಲ್ಲಿ ಪ್ರಮೋದ್ ಭಗತ್, ಜಪಾನಿನ ಫುಜಿಹಾರಾ ಡಾಯಿಸುಕೆ ಅವರನ್ನು 21-11, 21-16 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಫೈನಲ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತ ಇಂದು ಎರಡು ಚಿನ್ನದ ಪದಕ ಗೆದ್ದುಕೊಂಡಿದೆ.
ಪ್ರಮೋದ್ ಭಗತ್ ಹಾಗೂ ಮನೋಜ್ ಸರ್ಕಾರ ತಲಾ 2-0 ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ. ಪ್ರಮೋದ್ ಭಗತ್ 21-14, 21-17 ಅಂಕ ಗಳಿಸಿ ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥನಿಲ್ ಅವರನ್ನು ಮಣಿಸುವ ಮೂಲಕ ಚಿನ್ನಕ್ಕೆ ಮುತ್ತಿಟ್ಟರು. ಈ ಬಾರಿ ಭಾರತಕ್ಕೆ 4ನೇ ಚಿನ್ನದ ಪದಕ ಲಭಿಸಿದಂತಾಗಿದೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್; ಶೂಟರ್ ಮನೀಶ್ಗೆ ಚಿನ್ನ- ಸಿಂಗ್ರಾಜ್ಗೆ ಬೆಳ್ಳಿ
ಬ್ಯಾಡ್ಮಿಂಟನ್ ಆಟದ ಆರಂಭದಲ್ಲಿಯೇ ಒಡಿಶಾ ಮೂಲದ ಪ್ರಮೋದ್ ಭಗತ್ ಮತ್ತು ಡೇನಿಯಲ್ ಬೆಥನಿಲ್ ನಡುವೆ 6-6 ಅಂಕಗಳ ಸಮಬಲದ ಹೋರಾಟ ಕಂಡು ಬಂದಿತು. ನಂತರ ಪ್ರಮೋದ್ ಕೊಂಚ ಆಕ್ರಮಣಕಾರಿ ಆಟ ಆಡುವ ಮೂಲಕ ನಿರಂತರವಾಗಿ ಅಂಕಗಳ ಏರಿಸಿಕೊಂಡರು. ಇದರ ಪರಿಣಾಮವಾಗಿ 21-14 ಅಂಕಗಳಿಂದ ಪ್ರಮೋದ್ ಭಗತ್ ಮೊದಲ ಸ್ಥಾನಕ್ಕೇರಿದರು.
ಎರಡನೇ ಗೇಮ್ಸ್ನಲ್ಲಿ ಗ್ರೇಟ್ ಬ್ರಿಟನ್ನ ಬೆಥನಿಲ್ 5-1ರ ಮುನ್ನಡೆ ಕಾಯ್ದುಕೊಂಡು ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಇದೇ ಮುನ್ನಡೆಯನ್ನು ಬೆಥನಿಲ್ 12-4ಕ್ಕೆ ಹೆಚ್ಚಿಸಿಕೊಂಡರು. ಆದರೆ ಇದಾದ ಬಳಿಕ ಗ್ರೇಟ್ ಕಮ್ಬ್ಯಾಕ್ ಮಾಡಿದ ಭಗತ್ ಅಂತರವನ್ನು 10-12ಕ್ಕೆ ತಗ್ಗಿಸಿದರು. ಬಳಿಕ ಪ್ರಮೋದ್ ಭಗತ್ 17-15 ಅಂಕಗಳಿಂದ ಮುನ್ನೆಡೆ ಸಾಧಿಸಿದರು. ಅಂತಿಮವಾಗಿ ಮಿಂಚಿನ ಆಟ ಪ್ರದರ್ಶಿಸಿ 21-17 ಅಂಕಗಳಿಂದ ಎರಡನೇ ಗೇಮ್ ಜಯಿಸಿ ಚಿನ್ನದ ಪದಕ ಗೆದ್ದು ಬೀಗಿದರು.
5ರ ಹರೆಯದಲ್ಲೇ ಪೋಲಿಯೊಗೆ ತುತ್ತಾಗಿದ್ದ ಪ್ರಮೋದ್ ಭಗತ್ ಅವರ ಎಡಗಾಲು ಊನವಾಗಿದೆ. ಆದರೆ ಅದನ್ನು ಮೀರಿ ನಾಲ್ಕು ವಿಶ್ವ ಚಾಂಪಿಯನ್ಶಿಪ್ ಸೇರಿದಂತೆ ಒಟ್ಟು 45 ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
ಇದನ್ನು ಓದಿ: ಪ್ಯಾರಾಲಿಂಪಿಕ್ಸ್ ಆರಂಭಕ್ಕೆ ಕ್ಷಣಗಣನೆ: 163 ರಾಷ್ಟ್ರಗಳ-4500 ಸ್ಪರ್ಧಿಗಳು ಭಾಗಿ
ಕಳೆದ ಎಂಟು ವರ್ಷಗಳಲ್ಲಿ ಬಿಡಬ್ಲ್ಯುಎಫ್ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಎರಡು ಚಿನ್ನ, ಒಂದು ಕಂಚಿನ ಪದಕ ಮತ್ತು ಪುರುಷರ ಡಬಲ್ಸ್ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆದ್ದಿದ್ದರು.
ಮನೋಜ್ ಸರ್ಕಾರ್ ಗೆ ಕಂಚು
ಪುರುಷರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಎಸ್ಎಲ್3 ಪಂದ್ಯದ ಕಂಚಿನ ಪದಕಕ್ಕಾಗಿ ನಡೆದ ಆಟದಲ್ಲಿ ಮನೋಜ್ ಸರ್ಕಾರ್ ಜಪಾನಿನ ಡೈಸುಕಿ ಫ್ಯುಸಿಹರ ಎದುರು 22-20, 21-13 ಅಂಕಗಳಿಂದ ಗೆಲುವು ಸಾಧಿಸುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಮನೋಜ್ ಸರ್ಕಾರ್ ಅವರು ಪ್ಯಾರಾಲಿಂಪಿಕ್ ನಲ್ಲಿ ಭಾರತಕ್ಕೆ 17ನೇ ಪದಕ ತಂದುಕೊಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆ ಪಾದಾರ್ಪಣೆಯಾಗಿದೆ. ಇದರೊಂದಿಗೆ ಚಿನ್ನ ಹಾಗೂ ಕಂಚಿನ ಪದಕವನ್ನು ತಂದುಕೊಟ್ಟ ಇಬ್ಬರು ಆಟಗಾರರಿಗೂ ದೇಶದ ಮೂಲೆ ಮೂಲೆಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
ಇದನ್ನು ಓದಿ: ಭಾರತ ಒಲಿಂಪಿಕ್ಸ್ ನಲ್ಲಿ ವಿಶ್ವಗುರು ಆದೀತೆ?
ಪ್ರಮೋದ್ ಭಗತ್ ಅವರ ಚಿನ್ನ ಹಾಗೂ ಮನೋಜ್ ಸರ್ಕಾರ್ ಅವರ ಕಂಚಿನ ಪದಕದ ವಿಜಯದೊಂದಿಗೆ ಭಾರತ 4 ಚಿನ್ನ, 7 ಬೆಳ್ಳಿ, 5 ಕಂಚಿನ ಪದಕದೊಂದಿಗೆ ಒಟ್ಟು 17 ಪದಕ ಗೆದ್ದುಕೊಂಡಿದೆ. ಕ್ರೀಡಾಕೂಟ ಆರಂಭಕ್ಕೂ ಮುನ್ನ ಈ ಬಾರಿ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ಹತ್ತು ಹೆಚ್ಚಿನ ಪದಕ ಗೆಲ್ಲುವುದು ನಿಚ್ಚಿತವೆಂದು ಅಂದಾಜಿಸಲಾಗಿತ್ತು.
ಕ್ರೀಡಾಕೂಟದ 11ನೇ ದಿನವಾದ ಇಂದು ಭಾರತವು ಪದಕಗಳ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿದ್ದು ಮೊದಲ ಸ್ಥಾನದಲ್ಲಿ ಚೀನಾ ದೇಶ ಇದ್ದು, ಅದು 92 ಚಿನ್ನ, 55 ಬೆಳ್ಳಿ, 50 ಕಂಚಿನೊಂದಿಗೆ 197 ಪದಕಗಳನ್ನು ಜಯಿಸಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿರುವ ಗ್ರೇಟ್ ಬ್ರಿಟನ್ 40 ಚಿನ್ನ, 38 ಬೆಳ್ಳಿ, 43 ಕಂಚಿನೊಂದಿಗೆ 121 ಪದಕಗಳನ್ನು ಪಡೆದುಕೊಂಡಿದೆ.