ಪಂಚ ರಾಜ್ಯಗಳಲ್ಲಿ ಆರಂಭಗೊಂಡಿದೆ ಚುನಾವಣಾ ಕಾವು

ಬೆಂಗಳೂರು : ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿದ್ದು ಚುನಾವಣಾ ಕಾವು ಜೋರಾಗಿದ್ದು, ರಾಷ್ಟ್ರ ರಾಜಕಾರಣದ ಪಕ್ಷಗಳಿಗೆ ಅತ್ಯಂತ ಮಹತ್ವದ ಚುನಾವಣೆ ಇದಾಗಿದೆ. ಪಶ್ಚಿಮ ಬಂಗಾಳದಲ್ಲಿ 8 ಹಂತ, ಅಸ್ಸಾಂನಲ್ಲಿ 3 ಹಂತ, ಕೇರಳ, ತಮಿಳುನಾಡು, ಪುರುಚೇರಿಯಲ್ಲಿ ಒಂದು ಹಂತದಲ್ಲಿ ಚುನಾವಣೆಗಳು ನಡೆಯಲಿದೆ.

ಫೆಬ್ರವರಿ 27ರಂದು ಕೇಂದ್ರ ಚುನಾವಣಾ ಆಯೋಗ ದಿನಾಂಕಗಳನ್ನು ಘೋಷಣೆ ಮಾಡಿದೆ. ಮಾರ್ಚ್‌ 27ರಂದು ಮೊದಲ ಹಂತ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ ಎದುರಿಸಲಿದೆ. ಮೇ 2ರಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಏಪ್ರಿಲ್‌ 6ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಕೇರಳದಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನೇತೃತ್ವದ ಆಡಳಿತರೂಢ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ರಾಜ್ಯ ಬಿಜೆಪಿ ಪಕ್ಷಕ್ಕೆ ರಾಜಕೀಯ ಅನುಭವವಿಲ್ಲದ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೇರಳದಲ್ಲಿ ಎಲ್‌ಡಿಎಫ್‌ ಮತ್ತು ಯುಡಿಎಫ್‌ ನೇರ ಹಣಾಹಣಿ

140 ಸ್ಥಾನಗಳನ್ನು ಹೊಂದಿರುವ ಆಡಳಿತರೂಢ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯೇನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರದ ಸಂಪೂರ್ಣ ಐದು ವರ್ಷದ ಅಧಿಕಾರಾವಧಿಯಲ್ಲಿ ಸಚಿವ ಸಂಪುಟದ ಸಹದ್ಯೋಗಿಗಳ ಸಮರ್ಥ ಆಡಳಿತದಿಂದಾಗಿ ಪ್ರತಿಪಕ್ಷಗಳ ಆರೋಪಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಿಧಾನಸಭೆಯಲ್ಲಿ 88 ಸ್ಥಾನಗಳನ್ನು ಪಡೆದ ಎಡರಂಗ ಅತ್ಯಂತ ಸ್ಪಷ್ಟ ಬಹುಮತದಿಂದ ಐದು ವರ್ಷದ ಆಡಳಿತವನ್ನು ಪೂರೈಸಿದೆ. ಇತ್ತೀಚಿಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅತಿಹೆಚ್ಚು ಅಭ್ಯರ್ಥಿಗಳನ್ನು ಗೆದ್ದಿರುವ ಎಡರಂಗ ಮತ್ತೆ ಗೆಲುವು ನಮ್ಮದಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕೇರಳ ಚುನಾವಣಾ ಇತಿಹಾಸದಲ್ಲಿ ಆಡಳಿತರೂಢ ಸರ್ಕಾರ ಮತ್ತೆ ಅಧಿಕಾರವನ್ನು ಪಡೆಯಲಿಲ್ಲ. ಕಾಂಗ್ರೆಸ್‌ ಪಕ್ಷವು ಇದೇ ವಿಶ್ವಾಸವನ್ನು ಹೊಂದಿದೆ. ಹಾಗೆಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಕೇರಳದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ರಾಜ್ಯ ಕಾಂಗ್ರೆಸ್‌ ನಾಯಕರಿಗೆ ರಾಷ್ಟ್ರೀಯ ನಾಯಕರ ಸಾಥ್‌ ಜೋರಾಗಿದೆ. ಕಾಂಗ್ರೆಸ್‌ನ ಅನುಭವಿ ರಾಜಕಾರಣಿಗಳು ರಾಜ್ಯದ ಸಣ್ಣಪುಟ್ಟ ವಿಚಾರಗಳೊಂದಿಗೆ ರಾಷ್ಟ್ರದ ಆಳುವ ಪಕ್ಷ ಬಿಜೆಪಿ ಜನ ವಿರೋಧಿ ನೀತಿಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ.

ಕಳೆದ ವಿಧಾನಸಭೆಯಲ್ಲಿ ಒಂದು ಸ್ಥಾನವನ್ನು ಪಡೆದ ಬಿಜೆಪಿಯೂ ಸಹ ಅಧಿಕಾರದ ಕನಸಿನಲ್ಲಿದೆ. ರಾಜ್ಯ ಹಾಗೂ ದೇಶದ ಆಡಳಿತದಲ್ಲಿ ಅತ್ಯಂತ ಉನ್ನತ ಹುದ್ದೆಗಳ ಸ್ಥಾನದಲ್ಲಿದ್ದು ನಿವೃತ್ತಿಯಾದ ಕೆಲವರ ಸೇರ್ಪಡೆಯಿಂದಾಗಿ ಕೇರಳದಲ್ಲಿ ಬಿಜೆಪಿಯು ಅಧಿಕಾರ ಹಿಡಿಯಲಿದೆ ಎಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಸಹ ಘೋಷಣೆ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿದಿದೆ.

ತಮಿಳುನಾಡಿನಲ್ಲಿ ಹೊಸ ನಾಯಕರ ಹಣಾಹಣಿ

ತಮಿಳುನಾಡಿನಲ್ಲಿ ರಾಷ್ಟ್ರ ರಾಜಕಾರಣಕ್ಕಿಂತ ಪ್ರಾದೇಶಿಕ ರಾಜಕಾರಣದ ಪ್ರಬಲ ಸಾಕಷ್ಟಿದ್ದು, ರಾಷ್ಟ್ರೀಯ ಪಕ್ಷಗಳಿಗೂ ಮಹತ್ವ ಪಡೆದಿದೆ. ಎರಡು ಪ್ರಬಲ ರಾಜಕೀಯ ಪಕ್ಷಗಳಾದ ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಜೊತೆಗೂಡಿ ಚುನಾವಣಾ ಹಣಾಹಣಿಯಲ್ಲಿ ಧುಮುಖಿದೆ.

234 ಸದಸ್ಯ ಬಲದ ತಮಿಳುನಾಡಿನಲ್ಲಿ ಕಳೆದ ಐದು ವರ್ಷದಲ್ಲಿ 3 ಮುಖ್ಯಮಂತ್ರಿಗಳನ್ನು ಕಂಡಿದೆ. 2011ರಿಂದ 2016 ರವರೆಗೆ ಅಧಿಕಾರ ನಡೆಸಿದ ಎಐಎಡಿಎಂಕೆ ಪಕ್ಷ 2016 ರಲ್ಲಿ ಮತ್ತೆ ಅಧಿಕಾರವನ್ನು ಪಡೆದುಕೊಂಡಿತು. ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜೈಲುವಾಸ ಮತ್ತು ನಂತರ ನಿಧನದಿಂದಾಗಿ ಓ.ಪನ್ನೀರ್‌ಸೆಲ್ವಂ ಹಾಗೂ ಎಡಪ್ಪಾಡಿ ಕೆ.ಪಳನೀಸ್ವಾಮಿ ಅಧಿಕಾರ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಿದರು.

ಬದಲಾದ ನಾಯಕತ್ವ ಮತ್ತು ಎಐಎಡಿಎಂಕೆಯೊಂದಿಗೆ ಇದ್ದು ಬಂಡಾಯ ಶಾಸಕರ ನಾಯಕತ್ವ ನಾಯಕ ಟಿಟಿವಿ ದಿನಕರನ್‌ ಅವರೊಂದಿಗೆ ಹಲವು ಶಾಸಕರ ಬಂಡಾಯದಿಂದಾಗಿ ಮತ್ತೆ ಉಪಚುನಾವಣೆಯನ್ನು ಎದುರಿಸಿತು. ಕಳೆದ ಐದು ವರ್ಷಗಳಿಂದಲೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಆಡಳಿತರೂಢ ಎಐಎಡಿಎಂಕೆ ಪಕ್ಷವು ಈ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸಣ್ಣ ಪಕ್ಷಗಳೊಂದಿಗೆ ಚುನಾವಣೆಯಲ್ಲಿ ಸ್ಥಾನ ಹಂಚಿಕೆ ಮಾಡಿಕೊಂಡಿದೆ.

ಅಕ್ರಮ ಆಸ್ತಿ, ಭ್ರಷ್ಟಾಚಾರದಿಂದ ಜೆ.ಜಯಲಲಿತಾ ಅವರ ಜೈಲುವಾಸದಿಂದಾಗಿ ಎಐಎಡಿಎಂಕೆ ಪಕ್ಷದ ಮೇಲಿರುವ ಆರೋಪ ಮುಂದಿದೆ. ಅಲ್ಲದೆ, ಕೆಲವೇ ದಿನಗಳ ಹಿಂದೆ ಜೈಲುವಾಸವನ್ನು ಪೂರ್ಣಗೊಳಿಸಿ ಬಿಡುಗಡೆ ಯೊಂದಿದ ವಿ.ಕೆ.ಶಶಿಕಲಾ ಅವರ ರಾಜಕೀಯ ನಿವೃತ್ತಿ ಘೋಷಣೆ ಚುನಾವಣೆ ಬಹಳಷ್ಟು ಕುತೂಹಲ ಮೂಡಿಸಿದೆ.

ಡ್ರಾವೀಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಎಂ.ಕೆ.ಸ್ಟಾಲಿನ್‌ ಚುನಾವಣೆಯಿಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಆಡಳಿತ ಪಕ್ಷದ ವಿರುದ್ಧ ಭಾರೀ ಚುನಾವಣಾ ಪ್ರಚಾರವನ್ನು ಕೈಗೊಂಡಿದೆ. ಹಿರಿಯ ನಾಯಕ ಎಂ.ಕರುಣಾನಿಧಿರವರ ನಿಧನದಿಂದಾಗಿ ಡಿಎಂಕೆ ಪಕ್ಷವನ್ನು ಮುನ್ನಡೆಸುತ್ತಿರುವ ಎಂ.ಕೆ.ಸ್ಟಾಲಿನ್ ಪ್ರಾದೇಶಿಕ ಪ್ರಶ್ನೆಗಳೊಂದಿಗೆ ಚುನಾವಣೆ ಎದುರಿಸುತ್ತಿದ್ದಾರೆ.  ಡಿಎಂಕೆಯೊಂದಿಗೆ ಮೈತ್ರಿಮಾಡಿಕೊಂಡಿರುವ ಎಡಪಕ್ಷಗಳು ಸಹ ಚುನಾವಣೆಯ ಅಖಾಡಕ್ಕೆ ಇಳಿದಿದೆ.

ತಮಿಳುನಾಡಿನಲ್ಲಿ ಹಿಂದಿನಿಂದಲೂ ಚಿತ್ರರಂಗದ ರಂಗು ಸದಾ ಇದ್ದು, ಆಡಳಿತ ನಡೆಸಿದ ಇದುವರೆಗಿನ ನಾಯಕರೆಲ್ಲ ಚಿತ್ರರಂಗ ಹಿನ್ನೆಲೆಯವರೇ ಆಗಿದ್ದಾರೆ. ರಾಜ್ಯದ ಎರಡು ಅತಿದೊಡ್ಡ ಪಕ್ಷ ಹಾಗೂ ರಾಜ್ಯದಲ್ಲಿರುವ ಸಣ್ಣ ಪಕ್ಷಗಳನ್ನು ಸೃಷ್ಟಿಸಿರುವ ಹಲವು ನಾಯಕರು ಸಹ ಚಿತ್ರರಂಗ ಪ್ರಭಾವ ದೊಡ್ಡಪ್ರಮಾಣದಲ್ಲಿದೆ. ಅದೇ ರೀತಿಯಾಗಿ ಹೊಸ ಸೇರ್ಪಡೆಯೊಂದಿಗೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಚಿತ್ರರಂಗದ ಪ್ರಭಾವಿ ನಾಯಕರಾದ ಕಮಲ್‌ ಹಾಸನ್‌ ಹಾಗೂ ರಜನಿಕಾಂತ್‌ ಚುನಾವಣೆಯಲ್ಲಿ ಪ್ರಮುಖ ಪಾತ್ರವಿದೆ.

ಕಮಲ್‌ ಹಾಸನ್‌ ತಮ್ಮದೇ ನೇತೃತ್ವದ ಮಕ್ಕಳ್‌ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷದ ಸಾರಥಿಯಾಗಿ ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯ ರಾಜ್ಯದ ಕೆಲವು ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಇಳಿದಿದ್ದಾರೆ. ಇಲ್ಲಿಯೂ ಸಹ ರಾಷ್ಟ್ರೀಯ ವಿಚಾರಗಳಿಗಿಂತ ರಾಜ್ಯದ ಪ್ರಾದೇಶಿಕ ವಿಚಾರಗಳಿಗಾಗಿಯೇ ಮಹತ್ವವನ್ನು ಪಡೆದುಕೊಂಡಿದ್ದು, ಎಂಎನ್‌ಎಂ ಈಗಾಗಲೇ ತಮ್ಮ ಕಾರ್ಯಯೋಜನೆಯ ಪ್ರಮುಖ ವಿಚಾರಗಳನ್ನು ಸಹ ಬಿಡುಗಡೆಗೊಳಿಸಿದೆ.

ರಜನಿಕಾಂತ್ ರಾಜಕೀಯ ಪಕ್ಷ ಸ್ಥಾಪನೆ ಅಥವಾ ಸೇರ್ಪಡೆಯ ವಿಚಾರಗಳು ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಂಡಿದ್ದು, ಇನ್ನು ಬಹಿರಂಗಗೊಂಡಿಲ್ಲ.

ದೀದಿ – ಮೋದಿ ಎಂದು ಬಿಂಬಿತವಾಗಿದೆ ಬಂಗಾಳ

ಪ್ರತಿ ಚುನಾವಣಾ ಸಂದರ್ಭದಲ್ಲೂ ಅತ್ಯಂತ ಕುತೂಹಲವನ್ನು ಮೂಡಿಸುತ್ತಾ ಬಂದಿರುವ ಪಶ್ಚಿಮ ಬಂಗಾಳ ರಾಜ್ಯವು, ಈ ಬಾರಿಯ ರಾಜ್ಯ ವಿಧಾನಸಭೆಗೆ ಆಯೋಗವು ಈ ಬಾರಿ 8 ಹಂತದಲ್ಲಿ ಚುನಾವಣಾ ಘೋಷಣೆಯೊಂದಿಗೆ ಭರಾಟೆಯೂ ಜೋರಾಗಿಯೇ ಪರಿಣಮಿಸಿದೆ. ಇಲ್ಲಿನ ಚುನಾವಣೆಯು ರಾಷ್ಟ್ರ ಮಟ್ಟದಲ್ಲಿ ಕೇವಲ ಪಕ್ಷಕ್ಕಿಂತ ವ್ಯಕ್ತಿ ಕೇಂದ್ರೀತವಾಗಿ ಮಾರ್ಪಟ್ಟಿದೆ.

294 ಸದಸ್ಯ ಬಲದ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಮಮತಾ ಬ್ಯಾನರ್ಜಿ ಅಧಿಕಾರದ ಐದು ವರ್ಷದ ಅವಧಿಯಲ್ಲಿ ಬಿಜೆಪಿ ಅನುಸರಿಸಿದ ಒಳರಾಜಕಾರಣದ ಧಾಳಿಯಿಂದಾಗಿ ತತ್ತರಿಸಿ ಹೋಗಿದೆ. ಈಗಾಗಲೇ ಟಿಎಂಸಿಯ ಹಲವು ಸಚಿವರು ಮತ್ತು ಶಾಸಕರ ಪಕ್ಷದ ಬದಲಾವಣೆಯಿಂದ ಚೇತರಿಸಿಕೊಳ್ಳದ ಟಿಎಂಸಿ ಪಕ್ಷವು ಚುನಾವಣೆಯನ್ನು ಎದುರಿಸುತ್ತಿದೆ.

ಬಿಜೆಪಿ ಪಕ್ಷವೂ ಸಹ ಹಿಂದೂತ್ವದ ಹೆಸರಿನಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಿ ಅಧಿಕಾರ ಪಡೆಯಲೇ ಬೇಕೆಂಬ ಹಂಬಲದಲ್ಲಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿದ್ದೂ ಹಲವು ರಾಜಕೀಯ ಮೇಲಾಟವನ್ನು ಸಾಧಿಸಿಕೊಂಡು, ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಗಳ ಮೂಲಕ ತನ್ನ ರಾಜಕೀಯ ಸಾಧಿಸುತ್ತಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ)ವೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ನಡೆಸುತ್ತಿದೆ.

ನಿರಂತರವಾಗಿ ಹಲ್ಲೆ, ಕೊಲೆ ಮತ್ತು ಧಾಳಿಗಳಿಂದ ತತ್ತರಿಸಿರುವ ಪಶ್ಚಿಮ ಬಂಗಾಳದಲ್ಲಿ ಕಳೆದ ಐದು ವರ್ಷದ ಅವಧಿಯಲ್ಲಿ ಕೋಮು ಗಲಭೆಯಿಂದಾಗಿ ರಾಜ್ಯದ ಜನತೆಯಲ್ಲಿ ಬಿಗುವಿನ ವಾತಾವರಣ ನಿರಂತರವಾಗಿ ಉಳಿದಿದೆ.

ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವ ಎಡಪಕ್ಷಗಳು ಪಶ್ಚಿಮ ಬಂಗಾಳದಲ್ಲಿ ತಮ್ಮ ಕಾರ್ಯಕರ್ತರ ಮೇಲೆ ಮಾರಣಾಂತಿಕ ಧಾಳಿ ಮಾಡುತ್ತಿರುವ ಟಿಎಂಸಿ ಮತ್ತು ಬಿಜೆಪಿ ಪಕ್ಷಗಳ ಎದುರು ಚುನಾವಣಾ ಪ್ರಚಾರವನ್ನು ಸುಗಮವಾಗಿ ಕೈಗೊಳ್ಳಲು ಸಹ ಸಾಧ್ಯವಾಗದೆ ತೊಡಗಿಸಿಕೊಂಡಿದೆ. ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಗಳು ಹಾಗೂ ಕಾರ್ಯಕರ್ತರೂ ಸಹ ಇದರಿಂದ ಹೊರತಾಗಿಲ್ಲ.

ಇತ್ತೀಚಿಗೆ ನಡೆದ ಎಡಪಕ್ಷಗಳು ಕಾಂಗ್ರೆಸ್‌ ಮೈತ್ರಿಯೊಂದಿಗೆ ಬ್ರಿಗೇಟ್‌ ಪರೇಡ್‌ ಮಹಾರ‍್ಯಾಲಿ ಮೂಲಕ ಚುನಾವಣೆ ಇಳಿದಿದ್ದು, ಸುಮಾರು 10 ಲಕ್ಷ ಜನರನ್ನು ಸೇರಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಟಿಎಂಸಿಯ ಗೂಂಡಾಗಿರಿ ರಾಜಕಾರಣ ಮತ್ತು ಬಿಜೆಪಿಯ ಜನ ವಿರೋಧಿ ಹಾಗೂ ಕೇಂದ್ರದ ಬಿಜೆಪಿ ಸರ್ಕಾರ ಅನುಸರಿಸುತ್ತಿರುವ ನೀತಿಗಳ ವಿರುದ್ಧ ರಾಜ್ಯದ ಮೂಲೆಮೂಲೆಯಲ್ಲಿಯೂ ವ್ಯಾಪಕವಾದ ಜನಬೆಂಬಲದೊಂದಿಗೆ ರಾಜ್ಯದಲ್ಲಿ ದೀದಿ ಹಾಗೂ ಮೋದಿಯನ್ನು ಜನರೇ ಸೋಲಿಸಲಿದ್ದಾರೆ ಎಂಬ ಘೋಷಣೆಯನ್ನು ಮೊಳಗಿಸಿದ್ದಾರೆ.

ಪೌರತ್ವ ಪ್ರಶ್ನೆಯೇ ಪ್ರಧಾನವಾಗಲಿದೆ ಅಸ್ಸಾಂ

126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಆಳುವ ಬಿಜೆಪಿ ಪಕ್ಷದ ಅಬ್ಬರದ ಪ್ರಚಾರ ಏನೇ ಇದ್ದರೂ ಕೇಂದ್ರವು ಇತ್ತೀಚಿಗೆ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗಿ ರಾಜ್ಯದಲ್ಲಿ ಚುನಾವಣೆಯ ಭರಟೆ ಹೊಸ ತಿರುವು ಪಡೆದುಕೊಂಡಿದೆ. ಪ್ರಾದೇಶಿಕ ಪ್ರಶ್ನೆಗಳ ಮೂಲಕ ರಾಜಕೀಯ ಸಾಧಿಸಿದ ಪಕ್ಷಗಳೊಂದಿಗೆ ಮೈತ್ರಿಯನ್ನು ಮುಂದುವರೆಸಿರುವ ಬಿಜೆಪಿ ಪಕ್ಷವೂ ಈಗಾಗಲೇ ಸ್ಥಾನ ಹಂಚಿಕೆಯನ್ನು ಮಾಡಿಕೊಂಡಿದೆ.

ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಕಳೆದ ಐದು ವರ್ಷದ ಅವಧಿಯಲ್ಲಿ ಬಿಜೆಪಿ ಪಕ್ಷದಲ್ಲಿ ಮೈತ್ರಿ ಮಾಡಿಕೊಂಡಿದ್ದ ಅಸ್ಸಾಂ ಬೋಡೊ ಪೀಪಲ್ಸ್‌ ಫ್ರಂಟ್‌ (ಬಿಪಿಎಫ್‌) ಪಕ್ಷವೂ ಕಡೆಗಳಿಗೆಯಲ್ಲಿ ಬಿಜೆಪಿಯ ಮೈತ್ರಿಯನ್ನು ತೊರೆದು ಕಾಂಗ್ರೆಸ್‌ನ ಮೈತ್ರಿ ಮಾಡಿಕೊಂಡಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ರಾಜ್ಯದಲ್ಲಿ ಪ್ರಬಲವಾಗಿರುವ ಪ್ರಾದೇಶಿಕ ಪಕ್ಷ ಅಸ್ಸಾಂ ಗಣ ಪರಿಷದ್‌(ಎಜಿಪಿ) ಬಿಜೆಪಿಯೊಂದಿಗೆ ಕಡಿಮೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ದೇಶದಲ್ಲಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಮಸೂದೆಯಿಂದಾಗಿ ರಾಜ್ಯದ ಜನತೆಯಲ್ಲಿ ಅತಂತ್ರದ ಸ್ಥಿತಿ ನಿರ್ಮಾಣವಾಗಿದ್ದು, ಇದರ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡದಿರುವುದು ಸಹ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವ ಕಾರಣದಿಂದಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಎದುರಿಸಿಲ್ಲ ಎಂಬ ಆರೋಪ ರಾಜ್ಯದ ಜನತೆಯಲ್ಲಿ ಅಡಗಿದೆ.

ಅಸ್ಸಾಂನಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅಸ್ಸಾಂ ಗಣ ಪರಿಷದ್‌ ಸಂಸ್ಥಾಪಕ ಪ್ರಫುಲ್ಲ ಕುಮಾರ ಮಹಾಂತಾರವರಿಗೆ ಅನಾರೋಗ್ಯ ನಿಮಿತ್ತ ಚುನಾವಣಾ ಟಿಕೇಟ್‌ ಸಿಗುವುದು ಕಷ್ಟವಾದಲ್ಲಿ ಎಜಿಪಿ ಪಕ್ಷದಲ್ಲಿ ಎರಡು ಬಣಗಳು ಉಂಟಾಗಬಹುದೆಂಬ ಅನುಮಾನ ತೀವ್ರಗೊಂಡಿದೆ.

ಅಸ್ಸಾಂ ರಾಜ್ಯದಲ್ಲಿ ಅಧಿಕಾರದ ಅನುಭವವಿರುವ ಕಾಂಗ್ರೆಸ್‌ ಪಕ್ಷವೂ ಸಹ ಕೆಲವು ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಅಲ್ಲದೆ ದೊಡ್ಡ ಪ್ರಮಾಣದ ರಾಷ್ಟ್ರೀಯ ನಾಯಕರ ಚುನಾವಣಾ ಪ್ರಚಾರ ರಂಗುಪಡೆದಿದೆ.

ಕಡೆಗಳಿಗೆಯಲ್ಲಿ ಬಹುಮತ ಕಳೆದುಕೊಂಡಿದ್ದ ಕಾಂಗ್ರೆಸ್‌

ಪುದುಚೇರಿಯಲ್ಲಿ ರಾಜ್ಯವು ಅತ್ಯಂತ ಚಿಕ್ಕ ರಾಜ್ಯವಾಗಿದ್ದು, 30 ಸ್ಥಾನಗಳ  ಸದಸ್ಯ ಬಲದ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಅಧಿಕಾರವನ್ನು ನಡೆಸಿದೆ. ಅತಿ ಹೆಚ್ಚು ಸ್ಥಾನಗಳಿಸಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರ ಹಿಡಿಯಲು ಸಾಧ್ಯವಾಗದೆ ಇದ್ದಾಗ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು 5 ವರ್ಷವನ್ನು ಪೂರೈಸುವ ಹಂತದಲ್ಲಿತ್ತು.

ಆದರೆ, ಚುನಾವಣೆಗೂ ಘೋಷಣೆಯ ಮೊದಲು ನಾಲ್ಕು ಶಾಸಕರಿಂದ ತೆರವಾಗಿದ್ದ ಸ್ಥಾನದಿಂದಾಗಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅನಿವಾರ್ಯವಾಗಿ ಬಹುಮತ ಸಾಬೀತುಪಡಿಸಬೇಕಾಗಿ ಬಂದಿತು. ಫೆಬ್ರವರಿ 22 ರಂದು ಬಹುಮತ ಕಳೆದುಕೊಂಡ ಕಾಂಗ್ರೆಸ್‌ ಮೈತ್ರಿ ಸರ್ಕಾರ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾಗಿ ಬಂದಿತು.

ಪುದುಚೇರಿ ರಾಜ್ಯವು ಅತ್ಯಂತ ಚಿಕ್ಕ ರಾಜ್ಯವಾಗಿದ್ದು ಕೇಂದ್ರ ಸರ್ಕಾರದೊಂದಿಗೆ ಹೆಚ್ಚಿನ ಅವಲಂಬನೆ ಹೊಂದಿದೆ. ಅಲ್ಲದೆ, ಪಕ್ಕದ ತಮಿಳುನಾಡು ರಾಜ್ಯದ ಪ್ರಾದೇಶಿಕದ ಪ್ರಭಾವವು ಪ್ರಬಲವಾಗಿರುವುದರಿಂದ ಇಲ್ಲಿಯೂ ಸಹ ಪ್ರಾದೇಶಿಕತೆ ಪ್ರಶ್ನೆಯೇ ಮುಖ್ಯವಾಗುತ್ತದೆ.

 

                                                                     – ವಿನೋದ ಶ್ರೀರಾಮಪುರ

Donate Janashakthi Media

Leave a Reply

Your email address will not be published. Required fields are marked *