ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ: ಸಂಸತ್ ಅಧಿವೇಶನ ಮುಂದೂಡಿಕೆ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ 2018ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ಕಠಿಣ ಪರೀಕ್ಷೆಗೆ ಎದುರಾಗಿದ್ದಾರೆ. ಎಲ್ಲ ಪ್ರತಿಪಕ್ಷಗಳೂ ಭಿನ್ನಮತ ಮರೆತು ಒಂದಾಗಿ ಇಮ್ರಾನ್‌ ಖಾನ್‌ ವಿರುದ್ಧ ಅವಿಶ್ವಾಸ ಮತ ಮಂಡನೆಗೆ ಮುಂದಾಗಿದೆ. ಸದ್ಯ ಅವಿಶ್ವಾಸ ನಿರ್ಣಯದ ಕುರಿತು ನಡೆದ ಸಂಸತ್‌ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಆಗದೆ ಮುಂದೂಡಿಕೆ ಆಗಿದೆ.

ತೆಹ್ರೀಕ್–ಇ–ಇನ್ಸಾಫ್ ಪಕ್ಷದ ಸಂಸದ ಖಯಾಲ್ ಜಮಾನ್ ಅವರ ನಿಧನದ ಕಾರಣ ಶೋಕಾಚರಣೆಯ ಸಲುವಾಗಿ ಪಾಕಿಸ್ತಾನ ಸಂಸತ್‌ನ ಸ್ಪೀಕರ್ ಅಸದ್ ಕೈಸರ್ ಕಲಾಪವನ್ನು ಮಾರ್ಚ್ 28ರ ಸಂಜೆ 4 ಗಂಟೆವರೆಗೆ ಮುಂದೂಡಿದ್ದಾರೆ.

ಪ್ರತಿಪಕ್ಷ ಸಂಸದರ ಭಾರಿ ಗದ್ದಲ, ಪ್ರತಿಭಟನೆಯ ನಡುವೆಯೇ ಪಾಕಿಸ್ತಾನ ಸಂಸತ್‌ನ ಕಲಾಪ ಮುಂದೂಡಲಾಯಿತು. ಆರ್ಥಿಕ ಬಿಕ್ಕಟ್ಟು ಮತ್ತು ಹಣದುಬ್ಬರಕ್ಕೆ ಇಮ್ರಾನ್‌ ಖಾನ್ ನೇತೃತ್ವದ ಪಿಟಿಐ ಸರ್ಕಾರ ಕಾರಣವಾಗಿದೆ ಎಂದು ಆರೋಪಿಸಿದರು.

ಪಾಕಿಸ್ತಾನ್‌ ಮುಸ್ಲಿಂ ಲೀಗ್‌ (ನವಾಜ್‌) ಪಕ್ಷದ ಹಾಗೂ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸುಮಾರು 100 ಸದಸ್ಯರು ಪ್ರಧಾನಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮಾರ್ಚ್‌ 8ರಂದು ನೋಟಿಸ್‌ ಜಾರಿ ಮಾಡಿದ್ದರು. ನಿರ್ಣಯದ ಪರವಾಗಿ ಮತ ಚಲಾಯಿಸುವುದಾಗಿ ಸ್ವಪಕ್ಷದ 24 ಸದಸ್ಯರೂ ಬೆದರಿಕೆ ಒಡ್ಡಿರುವುದು ಇಮ್ರಾನ್ ಖಾನ್ ಅವರಿಗೆ ಹಿನ್ನಡೆ ಉಂಟುಮಾಡಿತ್ತು.

“ಇಮ್ರಾನ್‌ ಖಾನ್‌ ದೇಶದ ಪ್ರಧಾನ ಮಂತ್ರಿಯಾಗಿ ಆರ್ಥಿಕತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಹಣದುಬ್ಬರ ಪ್ರಮಾಣ ಎರಡಂಕಿಗೆ ಹೆಚ್ಚಾಗಿರುವ ಕಾರಣ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿದೆ. ಜನಸಾಮಾನ್ಯರಲ್ಲಿ ಸರ್ಕಾರದ ಬಗ್ಗೆ ಅಸಮಾಧಾನ ಇದೆ. ರಾಜಕೀಯ ಭವಿಷ್ಯಕ್ಕೆ ಆತಂಕ ತಂದೊಡ್ಡಿದೆ,” ಎಂದು ಆರೋಪ ಮಾಡಲಾಗುತ್ತಿದೆ.

ಇಮ್ರಾನ್ ಖಾನ್ ಅವರ 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳ ಸದಸ್ಯರು ಇತ್ತೀಚೆಗೆ ಪಕ್ಷಾಂತರ ಮಾಡಿದ್ದರು. ಪಾಕಿಸ್ತಾನದ ಸಂಸತ್ತು 342 ಸದಸ್ಯ ಬಲ ಹೊಂದಿದೆ. ಇಮ್ರಾನ್​ ಖಾನ್​ರ ಪಿಟಿಐ ನೇತೃತ್ವದ ಮೈತ್ರಿಕೂಟವು 179 ಸದಸ್ಯಬಲ ಹೊಂದಿದೆ.

ಇಮ್ರಾನ್‌ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಂಸತ್‌ನಲ್ಲಿ ಕನಿಷ್ಠ 172 ಸ್ಥಾನ ಮತ ಗಳಿಸಬೇಕಾಗುತ್ತದೆ. ವಿರೋಧ ಪಕ್ಷಗಳ ಒಟ್ಟು ಬಲ 163ರಷ್ಟಿದ್ದು, ಇಮ್ರಾನ್‌ ಪಕ್ಷದ ಕೆಲ ಸಂಸದರು ವಿರೋಧ ಪಕ್ಷಗಳ ಕೈಜೋಡಿಸಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.

ಬಂಡಾಯದ ಕಾರಣ ಕೇವಲ 155 ಸಂಸದರ ಬೆಂಬಲ ಹೊಂದಿರುವ ಇಮ್ರಾನ್‌ ಖಾನ್‌ ಪರದಾಡುವಂತಾಗಿದೆ. ಮಾರ್ಚ್ 28ರಂದು ಅವರ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.

ರಾಜೀನಾಮೆ ಕೊಡಲ್ಲ: ಇಮ್ರಾನ್‌ ಖಾನ್‌

ಪಾಕಿಸ್ತಾನ ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿದೆ. ಆದರೆ ಇಮ್ರಾನ್‌ ಖಾನ್‌ ಮಾತ್ರ ಏನೇ ಆದರೂ ನಾನು ರಾಜೀನಾಮೆ ನೀಡಲಾರೆ ಎಂದು ಹೇಳಿದ್ದಾರೆ. “ನಾನು ಎಂದಿಗೂ ಹೋರಾಟ ಮಾಡದೆಯೇ ಶರಣಾಗುವುದಿಲ್ಲ.ಕೆಲವು ದ್ರೋಹಿಗಳು ಒತ್ತಡವನ್ನು ಹಾಕುತ್ತಾರೆ. ಅದನ್ನು ನಾನೇಕೆ ಸಹಿಸಿಕೊಳ್ಳಬೇಕು, ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ,” ಎಂದಿದ್ದಾರೆ.

 

ಪಾಕಿಸ್ತಾನದ ಸಂಸತ್ತು ಗುರುವಾರ ರಾತ್ರಿ 15 ಅಂಶಗಳ ಅಜೆಂಡಾ ಬಿಡುಗಡೆ ಮಾಡಿದೆ. ಇದರಲ್ಲಿ ಅವಿಶ್ವಾಸ ನಿರ್ಣಯ ಗೊತ್ತುವಳಿಯೂ ಸೇರಿದೆ. ಸದ್ಯ ಸಂಸತ್‌ ಅಧಿವೇಶನ ಮುಂದೂಡಿಕೆ ಆದ ಹಿನ್ನೆಲೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಭವಿಷ್ಯ ಮಾರ್ಚ್ 28ರಂದು ನಿರ್ಧಾರ ಆಗುವ ಸಾಧ್ಯತೆ ಇದೆ.

Donate Janashakthi Media

Leave a Reply

Your email address will not be published. Required fields are marked *