ಇಸ್ಲಾಮಾಬಾದ್: ಪಾಕಿಸ್ತಾನ ದೇಶದ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ವಿಶ್ವಾಸಮತ ಯಾಚನೆಗೆ ಮೊದಲೇ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಎ-ಇನ್ಸಾಫ್(ಪಿಟಿಐ) ಪಕ್ಷದ ಮಿತ್ರಪಕ್ಷ ಮುತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್(ಎಂಕ್ಯುಎಂ-ಪಿ) ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ಜೊತೆಗೆ ಮೈತ್ರಿಮಾಡಿಕೊಂಡಿದೆ.
ಪ್ರಧಾನಿ ಇಮ್ರಾನ್ ಖಾನ್ ಅಧಿಕಾರ ಉಳಿಸಿಕೊಳ್ಳಲು 342 ಸದಸ್ಯ ಬಲದ ಸಂಸತ್ತಿನಲ್ಲಿ 172 ಮತಗಳನ್ನು ಪಡೆಯುವುದು ಅನಿವಾರ್ಯವಾಗಿದೆ. ಆಡಳಿತಾರೂಢ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದ 24 ಸದಸ್ಯರು ಇಮ್ರಾನ್ ಖಾನ್ ಅವರಿಗೆ ನೀಡಿದ್ದ ಬೆಂಬಲವನ್ನು ವಾಪಸ್ಸು ಪಡೆದಿದ್ದಾರೆ.
ಇದನ್ನು ಓದಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ: ಸಂಸತ್ ಅಧಿವೇಶನ ಮುಂದೂಡಿಕೆ
ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ 177 ಸದಸ್ಯ ಬಲ ಇದೆ. ಇಮ್ರಾನ್ ಖಾನ್ ನೇತೃತ್ವದ ಆಡಳಿತ ಪಕ್ಷದ ಬಲ 165ಕ್ಕೆ ಕುಸಿದಿದೆ. ಪ್ರಧಾನಿ ವಿರುದ್ಧ ಮಂಡಿಸುವ ವಿಶ್ವಾಸಮತ ಯಾಚನೆಯ ಪ್ರಸ್ತಾವಕ್ಕೆ ಬಲ ಸಿಗಬೇಕಿದ್ದರೆ ಪ್ರತಿಪಕ್ಷಗಳಿಗೆ 172 ಸದಸ್ಯ ಬಲ ಸಾಕು. ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯ ಬಲ 342.
ಮುತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (ಎಂಕ್ಯುಎಂ-ಪಿ) ಪಕ್ಷವು ಪಿಟಿಐ ಮೈತ್ರಿ ತೊರೆದು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿರುವುದರಿಂದ ಇಮ್ರಾನ್ ಖಾನ್ ಪ್ರಧಾನಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡುವ ಸಾಧ್ಯತೆಗಳು ಇವೆ.
ರಾಬ್ತಾ ಕಮಿಟಿ ಎಂಕ್ಯುಎಂ ಮತ್ತು ಪಿಪಿಪಿ ಸಿಇಸಿಗಳು ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಾಳೆ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸುತ್ತೇವೆ ಎಂದು ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಬುಟ್ಟೆ ಜರ್ದಾರಿ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಪಾಕಿಸ್ತಾನದಲ್ಲಿ ಮುಂದಿನ ಮಹಾಚುನಾವಣೆಯು 2023ರಂದು ನಡೆಯಬೇಕಿತ್ತು. ಆದರೆ ಅವಧಿಗೆ ಮೊದಲೇ ಚುನಾವಣೆ ನಡೆಯಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ, ಯಾರೇ ಮಂತ್ರಿಯಾಗಿದ್ದರೂ ಅಲ್ಲಿನ ಮಿಲಿಟರಿಯ ಬೆಂಬಲ ಇರುವವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ. ಆಡಳಿತ ಮತ್ತು ರಾಜಕಾರಣದ ಆಂತರಿಕ ವಿಚಾರಗಳಲ್ಲಿ ಅಲ್ಲಿನ ಮಿಲಿಟರಿ ಹಲವು ವರ್ಷಗಳಿಂದ ಮಧ್ಯಪ್ರವೇಶಿಸುತ್ತಿದೆ.