ಬೆಂಗಳೂರು : ಪಹಣಿ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ರೈತರಿಗೆ ಶಾಕ್ ನೀಡಿದೆ. 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ನಾಡಕಚೇರಿ, ತಹಶೀಲ್ದಾರ್ ಕಚೇರಿ, ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ ರೈತರು ಪಹಣಿ ಪಡೆದುಕೊಳ್ಳಬೇಕಿದೆ. ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಪಹಣಿಗೆ 5 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಈಗ ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ಪಹಣಿ ಪಡೆಯಲು 30 ರೂಪಾಯಿ ಪಾವತಿಸಬೇಕಿದೆ ಎಂದು ಹೇಳಲಾಗಿದೆ.
ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪಹಣಿ ಕಡ್ಡಾಯಗೊಳಿಸಲಾಗಿದ್ದು, ಸಬ್ಸಿಡಿಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ, ಬ್ಯಾಂಕುಗಳಲ್ಲಿ ಸಾಲ ಸೇರಿದಂತೆ ಹಲವು ಕಾರಣಕ್ಕೆ ಪಹಣಿ ಅಗತ್ಯವಾಗಿದ್ದು, ಸಾಲ, ಆಸ್ತಿ ಮಾರಾಟ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಹಣಿ ಪಡೆಯಲು ರೈತರು 25 ರೂಪಾಯಿ ನೀಡಿ ಪಹಣಿ ಪಡೆದುಕೊಳ್ಳಬೇಕಿದೆ. ನಿಜಕ್ಕೂ ರೈತರಿಗೆ ಇದು ಹೊರೆಯಾಗಲಿದೆ. ಸಾಮಾನ್ಯವಾಗಿ ಒಂದು ಕೇಂದ್ರದಲ್ಲಿ ದಿನಕ್ಕೆ ನೂರಾರು ರೈತರು ಪಹಣಿಯನ್ನು ಪಡೆಯಲು ಬರುತ್ತಾರೆ. 5 ರೂ ಗೆ ನೀಡಬಹುದಾಗಿರುವ ಪಹಣಿಗೆ 25 ರೂ ದರ ನಿಗದಿ ಮಾಡಿರುವುದು ಇದು ರೈತರನ್ನು ಸುಲಿಗೆ ಮಾಡುವ ಕ್ರಮವಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.
ಪಹಣಿಯನ್ನು ಡಿಜಿಟಲೀಕರಣ ಮಾಡುವುದಾಗಿ ಹೇಳಿದ್ದ ಸರಕಾರ ಈಗ ಅದರ ಹೊರೆಯನ್ನು ರೈತರ ಮೇಲೆ ಹಾಕುತ್ತಿದೆ. ” ನಾವೆಲ್ಲ ಕಷ್ಟಪಟ್ಟು ಬೆಳೆದು ಮಂದಿನ ಸಾಕ್ತೀವ್ರಿ, ಆದ್ರೆ ಎಲ್ಲಾದೂನು ನಮಗೆ ಹೆಚ್ಚಿಗೆ ಮಾಡ್ತಾರ ನೋಡ್ರಿ. ತಿಂಗಳದಾಗಿ ಅದಕ್ಕ, ಇದಕ್ಕ ಅಂತಾ ಪಾಣಿ ತೋಗೊಂತೀವ್ರಿ ಅದಕ್ಕೆ ಈಗ 25 ರೂ ಕೊಡಬೇಕು ಅಂದ್ರ ಹೆಂಗ್ರಿ, ರೈತರ ಸರಕಾರ ಅಂತ ಹಾಳ್ತಾರ, ಹಿಂಗ ಅನ್ರಿ ಮಾಡೋದು ಎಂದು ಯಲಬುರ್ಗಾ ತಾಲ್ಲೂಕಿನ ತಲ್ಲೂರು ಗ್ರಾಮದ ರೈತ ಫಕೀರಪ್ಪ ಮಾಟ್ರಿಂಗಿ ಆಕ್ರೋಶ ಹೊರಹಾಕಿದ್ದಾರೆ.