ಸಿಜಿಕೆ ರಾಷ್ಟ್ರೀಯ ರಂಗೋತ್ಸವ-2023 ಫೆಬ್ರವರಿ 19ರಿಂದ 22ರವರೆಗೆ ನಡೆಯುತ್ತಿದೆ. ನಾಲ್ಕು ವೇದಿಕೆಗಳಲ್ಲಿ ನಾಟಕ ಪ್ರದರ್ಶನ ಸೇರಿದಂತೆ ವಿಭಿನ್ನ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಡಿ ಕೆ ಚೌಟ ವೇದಿಕೆ, ಆ ನ ರಮೇಶ್ ವೇದಿಕೆ, ವಿ ಚನ್ನಪ್ಪ ವೇದಿಕೆ ಮತ್ತು ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಕಾರ್ಯಕ್ರಮಗಳು ಇರಲಿದೆ.
ಫೆ.21ರಂದು ಸಂಜೆ 5.45ಕ್ಕೆ ಆ ನ ರಮೇಶ್ ವೇದಿಕೆಯಲ್ಲಿ ಪದ್ಮಾವತಿ ಕಾಳಗ ತಾಳಮದ್ದಲೆ ಪ್ರದರ್ಶನವಿದೆ. ಭಾಗವತಿಕೆ: ಕೃತಿ ಆರ್ ಪುರಪ್ಪೇಮನೆ, ಮದ್ದಲೆ: ಶ್ರೀನಿವಾಸ್ ಪುರಪ್ಪೇಮನೆ, ಚಂಡೆ: ಭಾರ್ಗವ ಕೆ.ಎನ್. ಕೇಡಲೇಸರ ಪ್ರಸ್ತುಪಡಿಸಲಿದ್ದಾರೆ.
ಇದನ್ನು ಓದಿ: ಫೆ.19ರಿಂದ ಸಿಜಿಕೆ ರಾಷ್ಟ್ರೀಯ ರಂಗೋತ್ಸವ; 4ದಿನ – 4ವೇದಿಕೆ – 6ನಾಟಕ – 5ಕಿರುಚಿತ್ರ – 5ಕಾರ್ಯಕ್ರಮ
ಪದ್ಮಾವತಿ ಕಾಳಗ ಎಂಬ ಹೊಸ ಪ್ರಸಂಗವು ಯಕ್ಷಗಾನದ ರಂಗಪಠ್ಯಗಳಲ್ಲಿರುವ ಹೆಣ್ಣು ಪಾತ್ರಗಳನ್ನು ಮುಖಾಮುಖಿಯಾಗುವ ಒಂದು ಪ್ರಯತ್ನ. ಯಕ್ಷಗಾನದಲ್ಲಿ ಹೆಣ್ಣಿನ ಜನಪ್ರಿಯ ಮಾದರಿಗಳಾದ, ಅಭಿಮನ್ಯು ಕಾಳಗದ ದುಃಖದಿಂದ ಬೀಳ್ಕೊಡುವ ತಾಯಿ, ಅಶ್ವಮೇಧ ಯಾಗದ ಅಸಂಖ್ಯ ಪ್ರಸಂಗಗಳು, ವನವಿಹಾರದಲ್ಲಿ ಬರುವ ರಾಜಕುಮಾರಿಯರು, ಅಪ್ಸರೆಯರು, ಶಶಿಪ್ರಬಾ ಪರಿಣಯ, ಪ್ರಮಿಳಾರ್ಜುನದ ಮಹಿಳಾ ರಾಜ್ಯಗಳು, ಇವುಗಳನ್ನು ಲಿಂಗ ಬದಲಿಸಿ ಮರುನಿರೂಪಿಸಿದಾಗ, ಕಾಣುವ `ಅತಿ’ ಅಥವಾ ಅಸಂಬದ್ಧತೆಯು, ನಮ್ಮ ವಾಸ್ತವದ ಸಮಾಜ ಮತ್ತು ಸಂಪ್ರದಾಯದೊಳಗಿರುವ `ಅತಿ’ ಗೂ ಕನ್ನಡಿಯಾಗುತ್ತದೆಯೆಂಬುದು ಇದರ ಆಶಯ.
ಕೃತಿ ಆರ್ ಪುರಪ್ಪೇಮನೆಯವರು ಬರೆದು ನಿರ್ದೇಶಿಸಿರುವ ಈ ಪ್ರಸಂಗವು ಕೊಲಾಬೆರೆಟೀವ್ ಆಗಿ ಇತರ ಕಲಾವಿದರೊಂದಿಗೆ ರಂಗದಲ್ಲೇ ಬೆಳೆಯುತ್ತಾ ಹೋಗುವ ಯಕ್ಷಗಾನದ ತಾಳಮದ್ದಲೆ ಪ್ರಕಾರದಲ್ಲಿದೆ. ಕೃತಿಯವರು ಕೃಷಿಕರಾಗಿದ್ದು, ತಮ್ಮ ಸುತ್ತಮುತ್ತಲ ಪರಿಸರದಲ್ಲಿ ಸಂಪ್ರದಾಯ ಮತ್ತು ಲಿಂಗ, ಜಾತಿಯ ಸಂಬಂಧಗಳನ್ನು ಯಕ್ಷಗಾನದ ಅಭ್ಯಾಸ ಮತ್ತು ಬರವಣಿಗೆಗಳ ಮೂಲಕ ಕಂಡುಕೊಳ್ಳುವಲ್ಲಿ ಆಸಕ್ತಿ ಹೊಂದಿದ್ದಾರೆ.
ಇದನ್ನು ಓದಿ: ಫೆ.20ರಿಂದ ಪುನೀತ್ ರಾಜ್‌ಕುಮಾರ್ ವೇದಿಕೆಯಲ್ಲಿ ಕಿರು ಚಿತ್ರೋತ್ಸವ ಪ್ರದರ್ಶನ
ಗಂಡಸರ ಪರಂಪರೆಯಾಗಿದ್ದ ಯಕ್ಷಗಾನಕ್ಕೆ ಮಹಿಳೆಯರು ತೊಡಗಿಕೊಳ್ಳುವಾಗ, ಅದು ಆ ಪರಂಪರೆಯ ಬರೀ ಅನುಕರಣೆಯಾಗದೇ ಮಹಿಳೆಯರಿಗೇ ವಿಶಿಷ್ಟವಾದ ಅನುಭವಗಳ ಅಭಿವ್ಯಕ್ತಿ ಮಾರ್ಗಗಳ ಹುಡುಕಾಟಕ್ಕೆ ಪೂರಕವಾಗಿ ಯಕ್ಷದುರ್ಗಾ ಮಹಿಳಾ ಕಲಾ ಬಳಗ ಸಾಗರ ಪ್ರಾಂತ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು.
ಭಾಗವತಿಕೆಯಲ್ಲಿ, ಅರ್ಥಗಾರಿಕೆಯಲ್ಲಿ, ಪ್ರಸಂಗಗಳ ರಂಗಪಠ್ಯದಲ್ಲಿ `ಹೆಣ್ಣು ನೋಟ’ದ ಸಾಧ್ಯತೆಗಳ ಅನಾವರಣದ ಜೊತೆಗೆ, ಇದು ಓದು, ಆಲೋಚನೆಗೆ ತೊಡಗಿಕೊಳ್ಳುವ ಸ್ಥಳವೂ ಆಗಬೇಕೆಂಬುದು ಯಕ್ಷದುರ್ಗಾ ಮಹಿಳಾ ಕಲಾ ಬಳಗದ ಆಶಯ. ಪಟ್ಟಾಭಿಶೇಕ, ಕರ್ಣಪರ್ವ, ರಾಮನಿರ್ಯಾಣ ಬಳಗದ ಇತ್ತೀಚಿಗಿನ ಪ್ರದರ್ಶನಗಳು.
ಮುಮ್ಮೇಳ (ಪಾತ್ರಧಾರಿಗಳು); ರಾಣಿ ಪದ್ಮಾವತಿ- ದಿವ್ಯಶ್ರೀ ಹೆಗಡೆ, ಬೆಂಗಳೂರು, ಶೂರಮತಿ- ವಾಣಿ ಪೆರಿಯೋಡಿ, ಗುಣಶೀಲ- ಜಯಶ್ರೀ ಪ್ರಕಾಶ್, ಸಾಗರ. ದಿವಾಳಿ ತಿಪ್– ಮಲ್ಲಿಕಾಜ್ಯೋತಿಗುಡ್ಡೆ. ರಾಜಾರತ್ನವರ್ಮ–ರೂಪಜ ಭೀಮನಕೋಣೆ. ಅಪ್ಸರಕುವರ(ಮೋಹನಾಂಗ)- ಶರಣ್ಯಾರಾಮಪ್ರಕಾಶ್, ರಕ್ಕಸಿ(ಭಗಿನಿ)– ಜಯಶ್ರೀ ಪ್ರಕಾಶ್, ಸಾಗರ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ